ದಿಲ್ಲಿ, ಪುಣೆಯಲ್ಲಿ ಡ್ರಗ್ಸ್ ಬೇಟೆ: 2,500 ಕೋಟಿ ರೂ. ಮೌಲ್ಯದ ಮಾದಕ ದ್ರವ್ಯ ವಶ
ಹೊಸದಿಲ್ಲಿ: ಪುಣೆ ಮತ್ತು ಹೊಸ ದಿಲ್ಲಿಯಾದ್ಯಂತ ನಡೆದ ವ್ಯಾಪಕ ಕಾರ್ಯಾಚರಣೆಯಲ್ಲಿ ಅಂದಾಜು ರೂ. 2,500 ಕೋಟಿಗೂ ಮೀರಿದ ಮೌಲ್ಯದ 1,100 ಕಿಗ್ರಾಂ ತೂಕದ ನಿಷೇಧಿತ ಮೆಫೆಡ್ರೋನ್ (ಎಂಡಿ) ಮಾದಕ ದ್ರವ್ಯವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಪೊಲೀಸರ ಪ್ರಕಾರ, ಈ ಕಾರ್ಯಾಚರಣೆಯು ಪುಣೆಯಲ್ಲಿ 700 ಕೆಜಿ ತೂಕದ ಮೆಫೆಡ್ರೋನ್ ಮಾದಕ ದ್ರವ್ಯದೊಂದಿಗೆ ಮೂವರು ಆರೋಪಿಗಳನ್ನು ಬಂಧಿಸುವುದರೊಂದಿಗೆ ಪ್ರಾರಂಭವಾಯಿತು. ಬಂಧಿತ ಆರೋಪಿಗಳನ್ನು ವಿಚಾರಣೆಗೊಳಪಡಿಸಿದಾಗ ದಿಲ್ಲಿಯ ಹೌಝ್ ಖಾಸ್ ಪ್ರದೇಶದಲ್ಲಿ ಗೋದಾಮಿನಂಥ ಕಟ್ಟಡದಲ್ಲಿ ಸಂಗ್ರಹಿಸಿಡಲಾಗಿದ್ದ ಹೆಚ್ಚುವರಿ 400 ಕಿಗ್ರಾಂ ತೂಕದ ಮೆಫೆಡ್ರೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಲಾಗಿದೆ.
ಮೆಫೆಡ್ರೋನ್‌ನ ಮತ್ತೊಂದು ಸರಕನ್ನು ಪುಣೆಯಲ್ಲಿ, ನಿರ್ದಿಷ್ಟವಾಗಿ ಕುರ್ಕುಂಭ್ ಎಂಐಡಿಸಿ ಪ್ರದೇಶದಲ್ಲಿ ಸಂಗ್ರಹಿಸಿಡಲಾಗಿತ್ತು.
ಈ ಮಾದಕ ದ್ರವ್ಯ ಜಾಲವನ್ನು ಭೇದಿಸುವ ಮೂಲಕ ಪುಣೆ ಪೊಲೀಸರು ಮಹಾರಾಷ್ಟ್ರದಲ್ಲಿ ಈವರೆಗೆ ಅತಿ ದೊಡ್ಡ ಪ್ರಮಾಣದ ಮಾದಕ ದ್ರವ್ಯವನ್ನು ವಶಪಡಿಸಿಕೊಂಡಂತಾಗಿದ್ದು, ಇಡೀ ದೇಶದಲ್ಲಿ ಇದು ಅತ್ಯಂತ ಮಹತ್ವದ ಮಾದಕ ದ್ರವ್ಯ ಜಾಲ ಪತ್ತೆ ಕಾರ್ಯಾಚರಣೆ ಎಂಬ ಪ್ರಶಂಸೆಗೆ ಪಾತ್ರವಾಗಿದೆ.