“ಮೋದಿ ವಾಟ್ಸ್ ಆ್ಯಪ್ ಯುನಿವರ್ಸಿಟಿಯ ಕುಲಪತಿ”: ಎನ್‌ಡಿಎ ಮೈತ್ರಿಗೆ ಕೆಸಿಆರ್‌ ಮನವಿ ಆರೋಪಕ್ಕೆ ಕೆಟಿಆರ್‌ ಟೀಕೆ

Update: 2023-10-04 11:34 GMT

ಕೆ.ಟಿ. ರಾಮರಾವ್ (Photo: indiatoday.in)

ಹೈದರಾಬಾದ್:‌ ಕೆಸಿಆರ್‌ ಪಕ್ಷವು ಎನ್‌ಡಿಎ ಮೈತ್ರಿಕೂಟವನ್ನು ಸೇರಲು 2020 ರಲ್ಲಿ ಬಯಸಿತ್ತು, ಆ ಬೇಡಿಕೆಗೆ ತಾನು ನಿರಾಕರಿಸಿದ್ದೆ ಎಂಬ ಪ್ರಧಾನಿ ನರೇಂದ್ರ ಮೋದಿ ಅವರ ಆರೋಪವನ್ನು ಬಿಆರ್‌ಎಸ್‌ ಕಾರ್ಯಾಧ್ಯಕ್ಷ ಕೆ.ಟಿ. ರಾಮರಾವ್ ನಿರಾಕರಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರನ್ನು " ವಾಟ್ಸ್ ಆ್ಯಪ್ ಯುನಿವರ್ಸಿಟಿಯ ಕುಲಪತಿ" ಎಂದು ಕರೆದ ಕೆಟಿಆರ್‌, “ಪಿಎಂ ಮೋದಿಯವರ ಬಿಜೆಪಿ ದೊಡ್ಡ ‘ಸುಳ್ಳುʼ ಮತ್ತು ‘ಮೋಸʼದ ಫ್ಯಾಕ್ಟರಿಯಾಗಿದ್ದು, ಅದು ಹಸಿ ಸುಳ್ಳುಗಳನ್ನು ಹೇಳುತ್ತದೆ. ಮೋದಿಯಂತಹ ಮೋಸಗಾರರ ಜೊತೆ ಎಂದಿಗೂ ಬೆರೆಯದ ಹೋರಾಟಗಾರ ಕೆಸಿಆರ್” ಎಂದು ಟ್ವೀಟ್‌ ಮಾಡಿದ್ದಾರೆ.

“ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಸಂಪೂರ್ಣ ಸುಳ್ಳು ಹೇಳುವ ಮೂಲಕ ತಮ್ಮ ಸ್ಥಾನಮಾನದ ಬೆಲೆಯನ್ನು ಕುಗ್ಗಿಸಿಕೊಂಡಿದ್ದಾರೆ” ಎಂದು ಕೆಟಿಆರ್ ಟೀಕಿಸಿದರು.

"ಮಾನಸಿಕ ಸ್ಥಿಮಿತ ಕಳೆದುಕೊಂಡು ಎನ್‌ಡಿಎ ಸೇರಲು, ನಾವು ಹುಚ್ಚು ನಾಯಿಯಿಂದ ಕಚ್ಚಿಸಿಕೊಂಡಿಲ್ಲ. ನಮ್ಮ ಪಕ್ಷ ಮತ್ತು ಅದರ ನಾಯಕತ್ವವು ತೆಗೆದುಕೊಳ್ಳುವ ಯಾವುದೇ ನಿರ್ಧಾರಕ್ಕೆ ನಿಮ್ಮ ಅನುಮತಿ ಏಕೆ ಬೇಕು?" ಎಂದು ಕೆಟಿಆರ್ ಪ್ರಶ್ನಿಸಿದ್ದಾರೆ.

“ಪ್ರಧಾನಿ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವಾಗ, ಬಿಸಿಸಿಐ ಕಾರ್ಯದರ್ಶಿ ಸ್ಥಾನದಲ್ಲಿ ಭಾರತೀಯ ಕ್ರಿಕೆಟ್ ಅನ್ನು ಮುನ್ನಡೆಸುತ್ತಿರುವ ಜಯ್ ಶಾ ಅವರ ನೇಮಕದ ಬಗ್ಗೆಯೂ ಕೇಳಬೇಕು. ತೆಲಂಗಾಣಕ್ಕೆ ಭೇಟಿ ನೀಡಲು ಬಿಜೆಪಿ ಪ್ರವಾಸಿಗರಿಗೆ ಸ್ವಾಗತವಿದೆ. ಹಿಂದಿನ ಚುನಾವಣೆಯಲ್ಲಿ ಬಿಜೆಪಿ 105 ಸ್ಥಾನಗಳಲ್ಲಿ ಠೇವಣಿ ಕಳೆದುಕೊಂಡಿತ್ತು ಮತ್ತು ಈ ಬಾರಿ 110 ಸ್ಥಾನಗಳಲ್ಲಿ ಠೇವಣಿ ಕಳೆದುಕೊಳ್ಳುತ್ತದೆ, ಬಿಜೆಪಿ ಇಲ್ಲಿ ಒಂದು ಸಂಸದ ಸ್ಥಾನವನ್ನು ಸಹ ಗೆಲ್ಲುವುದಿಲ್ಲ” ಎಂದು ಕೆಟಿಆರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News