ಸಾಂಸ್ಕೃತಿಕ ಮಾರ್ಕ್ಸ್ ವಾದಿಗಳಿಗೆ ಮೋಹನ್ ಭಾಗವತ್ ತರಾಟೆ
ನಾಗ್ಪುರ : ದೇಶದ ಶಿಕ್ಷಣ ವ್ಯವಸ್ಥೆ ಮತ್ತು ಸಂಸ್ಕೃತಿಯನ್ನು ಹಾಳು ಮಾಡಲು ‘ಸಾಂಸ್ಕೃತಿಕ ಮಾರ್ಕ್ಸ್ ವಾದಿಗಳು ಮತ್ತು ಜಾಗ್ರತ ಶಕ್ತಿಗಳು ’ ಮಾಧ್ಯಮಗಳು ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ತಮ್ಮ ಪ್ರಭಾವವನ್ನು ಬಳಸುತ್ತಿದ್ದಾರೆ ಎಂದು ಆರೆಸ್ಸೆಸ್ ಮುಖ್ಯಸ್ಥ ಮೋಹನ ಭಾಗವತ್ ಅವರು ಮಂಗಳವಾರ ಇಲ್ಲಿ ಆರೋಪಿಸಿದರು. ಮಣಿಪುರದಲ್ಲಿ ಮೈತೈ ಮತ್ತು ಕುಕಿ ಸಮುದಾಯಗಳು ವರ್ಷಗಳಿಂದಲೂ ಸಹಬಾಳ್ವೆ ನಡೆಸುತ್ತಿದ್ದರೂ ಅಲ್ಲಿ ಹಿಂಸಾಚಾರವು ದಿಢೀರ್ ಸ್ಫೋಟಿಸಿದ್ದು ಹೇಗೆ ಎಂದೂ ಅವರು ಪ್ರಶ್ನಿಸಿದರು.
ಆರೆಸ್ಸೆಸ್ ನ ದಸರಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಿದ ಭಾಗವತ,‘ಸಾಂಸ್ಕೃತಿಕ ಮಾರ್ಕ್ಸ್ ವಾದಿಗಳು ಮತ್ತು ಜಾಗ್ರತ ಶಕ್ತಿಗಳು ’ ಸ್ವಾರ್ಥಿ,ಪಕ್ಷಪಾತಿ ಮತ್ತು ವಂಚಕರಾಗಿದ್ದಾರೆ. ಈ ವಿಧ್ವಂಸಕ ಶಕ್ತಿಗಳು ತಮ್ಮನ್ನು ‘ಜಾಗ್ರತರು ’ಎಂದು ಕರೆದುಕೊಳ್ಳುತ್ತಾರೆ ಮತ್ತು ತಾವು ಕೆಲವು ಉನ್ನತ ಗುರಿಗಳಿಗಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಹೇಳಿಕೊಳ್ಳುತ್ತಾರೆ,ಆದರೆ ಅವರ ನಿಜವಾದ ಗುರಿ ಜಗತ್ತಿನಲ್ಲಿ ವ್ಯವಸ್ಥಿತ ಸ್ಥಿತಿಯನ್ನು ಹಾಳುಗೆಡವುದಾಗಿದೆ ಎಂದು ಹೇಳಿದರು. ಈ ಶಕ್ತಿಗಳು ಸಾಮಾಜಿಕ ಸಾಮರಸ್ಯಕ್ಕೆ ವ್ಯತ್ಯಯವನ್ನುಂಟು ಮಾಡುತ್ತಿವೆ ಮತ್ತು ಸಂಘರ್ಷವನ್ನು ಉತ್ತೇಜಿಸುತ್ತಿವೆ ಎಂದು ಆರೋಪಿಸಿದರು. ಅವರು ಅರಾಜಕತೆಯನ್ನು ಉತ್ತೇಜಿಸುತ್ತಾರೆ ಮತ್ತು ಹರಡುತ್ತಾರೆ. ಅವರು ಮಾಧ್ಯಮಗಳು ಮತ್ತು ಶೈಕ್ಷಣಿಕ ಕ್ಷೇತ್ರದ ಮೇಲೆ ನಿಯಂತ್ರಣ ಪಡೆಯುತ್ತಾರೆ ಹಾಗೂ ಶಿಕ್ಷಣ,ಸಂಸ್ಕೃತಿ,ರಾಜಕೀಯ ಮತ್ತು ಸಾಮಾಜಿಕ ಪರಿಸರವನ್ನು ಗೊಂದಲ,ಅವ್ಯವಸ್ಥೆ ಮತ್ತು ಭ್ರಷ್ಟಾಚಾರದಲ್ಲಿ ಮುಳುಗಿಸುತ್ತಾರೆ ಎಂದೂ ಭಾಗವತ ಆಪಾದಿಸಿದರು.
ಮಣಿಪುರ ಹಿಂಸಾಚಾರದಲ್ಲಿ ಗಡಿಯಾಚೆಯ ಉಗ್ರಗಾಮಿಗಳೂ ಭಾಗಿಯಾಗಿದ್ದಾರೆಯೇ ಎಂಬ ಅನುಮಾನವನ್ನೂ ವ್ಯಕ್ತಪಡಿಸಿದ ಭಾಗವತ್, ಹಲವಾರು ವರ್ಷಗಳಿಂದ ಮೈತೈ ಮತ್ತು ಕುಕಿ ಸಮುದಾಯಗಳು ಸಹಬಾಳ್ವೆಯನ್ನು ನಡೆಸುತ್ತಿವೆ. ಹಿಂಸಾಚಾರವು ದಿಢೀರ್ ಸ್ಫೋಟಗೊಂಡಿದ್ದು ಹೇಗೆ? ಸಂಘರ್ಷಗಳು ಬಾಹ್ಯ ಶಕ್ತಿಗಳಿಗೆ ಲಾಭವನ್ನು ನೀಡುತ್ತವೆ ಎಂದರು. ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಮೂರು ದಿನಗಳ ಕಾಲ ಮಣಿಪುರದಲ್ಲಿ ವಾಸ್ತವ್ಯ ಹೂಡಿದ್ದರು. ನಿಜಕ್ಕೂ ಸಂಘರ್ಷವನ್ನು ಪ್ರಚೋದಿಸಿದವರು ಯಾರು? ಎಂದು ಪ್ರಶ್ನಿಸಿದರು.
2024ರ ಸಾರ್ವತ್ರಿಕ ಚುನಾವಣೆಗಳಿಗೆ ಮುನ್ನ ಭಾವನೆಗಳನ್ನು ಕೆರಳಿಸುವ ಮೂಲಕ ಮತ ಗಳಿಕೆ ಪ್ರಯತ್ನಗಳ ವಿರುದ್ಧ ಎಚ್ಚರಿಕೆ ನೀಡಿದ ಭಾಗವತ್, ದೇಶದ ಏಕತೆ,ಸಮಗ್ರತೆ,ಅಸ್ಮಿತೆ ಮತ್ತು ಅಭಿವೃದ್ಧಿಯನ್ನು ಗಮನದಲ್ಲಿಟ್ಟುಕೊಂಡು ಮತ ಚಲಾಯಿಸುವಂತೆ ಜನತೆಯನ್ನು ಕೋರಿಕೊಂಡರು.