5 ದಿನಗಳಲ್ಲಿ ಮುಂಗಾರು ಮಾರುತ ಕೇರಳ ತಲುಪಲಿದೆ : ಹವಾಮಾನ ಇಲಾಖೆ
ಹೊಸದಿಲ್ಲಿ : ಮುಂದಿನ ಐದು ದಿನಗಳಲ್ಲಿ ಮುಂಗಾರು ಮಾರುತವು ಕೇರಳವನ್ನು ಪ್ರವೇಶಿಸಲು ಹವಾಮಾನ ಪರಿಸ್ಥಿತಿಯು ಪೂರಕವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೋಮವಾರ ಪ್ರಕಟಿಸಿದೆ.
ಅದೂ ಅಲ್ಲದೆ, ಇದೇ ಅವಧಿಯಲ್ಲಿ ಮುಂಗಾರು ಮಾರುತವು ಮಾಲ್ದೀವ್ಸ್ ಮತ್ತು ಕೋಮೊರಿನ್ ವಲಯದ ಉಳಿದ ಭಾಗಗಳು, ಲಕ್ಷದ್ವೀಪ ಪ್ರದೇಶದ ಕೆಲವು ಭಾಗಗಳು, ಕೇರಳ, ನೈರುತ್ಯ ಮತ್ತು ಮಧ್ಯ ಬಂಗಾಳ ಕೊಲ್ಲಿಯ ಇನ್ನಷ್ಟು ಪ್ರದೇಶಗಳು, ಈಶಾನ್ಯ ಬಂಗಾಳ ಕೊಲ್ಲಿ ಮತ್ತು ಈಶಾನ್ಯ ರಾಜ್ಯಗಳ ಕೆಲವು ಭಾಗಗಳಿಗೂ ಮುಂಗಾರು ಪ್ರವೇಶಿಸುವ ನಿರೀಕ್ಷೆಯಿದೆ.
ಮುಂಗಾರು ಪ್ರವೇಶಕ್ಕೆ ಪೂರಕವಾಗಿ ಮೇ 27ರಿಂದ 31ರವರೆಗೆ ಕೇರಳ, ಮಾಹೆ, ಲಕ್ಷದ್ವೀಪ, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಹಿಮಾಲಯ ಆವೃತ ಪಶ್ಚಿಮ ಬಂಗಾಳ ಮತ್ತು ಸಿಕ್ಕಿಂ ನಲ್ಲಿ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.
ಮೇ 27 ಮತ್ತು 28ರಂದು ಗುಜರಾತ್ನಲ್ಲಿ ಬಲವಾದ ಮೇಲ್ಮೈ ಗಾಳಿ (ಗಂಟೆಗೆ 25-35 ಕಿ.ಮೀ. ವೇಗದಲ್ಲಿ) ಬೀಸಲಿದೆ.