ಮಹಾರಾಷ್ಟ್ರ | ರತ್ನಗಿರಿಯಲ್ಲಿ ಹೋಳಿ ಆಚರಣೆ ; ಮಸೀದಿಯ ದ್ವಾರಕ್ಕೆ ಮರದ ದಿಮ್ಮಿಯಿಂದ ಗುದ್ದಿ, ಘೋಷಣೆ ಕೂಗಿದ ಯುವಕರು

Update: 2025-03-15 16:02 IST
ಮಹಾರಾಷ್ಟ್ರ | ರತ್ನಗಿರಿಯಲ್ಲಿ ಹೋಳಿ ಆಚರಣೆ ; ಮಸೀದಿಯ ದ್ವಾರಕ್ಕೆ ಮರದ ದಿಮ್ಮಿಯಿಂದ ಗುದ್ದಿ, ಘೋಷಣೆ ಕೂಗಿದ ಯುವಕರು

Screengrab:X/@zoo_bear

  • whatsapp icon

ಮುಂಬೈ: ಹೋಳಿ ಹಬ್ಬದ ಮುನ್ನಾದಿನದ ಸಾಂಪ್ರದಾಯಿಕ ಆಚರಣೆಯ ಸಂದರ್ಭದಲ್ಲಿ ಮಸೀದಿಯ ದ್ವಾರಕ್ಕೆ ಮರದ ದಿಮ್ಮಿಯಿಂದ ಹಲವು ಬಾರಿ ಗುದ್ದಿ ಘೋಷಣೆ ಕೂಗಿದ ಘಟನೆ ಮಹಾರಾಷ್ಟ್ರದ ರತ್ನಗಿರಿಯಲ್ಲಿ ನಡೆದಿದೆ. ಈ ಕುರಿತು ಪೊಲೀಸರು ಯುವಕರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.

ಹೋಳಿ ಹಬ್ಬದ ಆಚರಣೆಯ ಅಂಗವಾಗಿ ನಡೆಯುವ ಶಿಮ್ಗಾ ಹಬ್ಬದ ಸಂದರ್ಭದಲ್ಲಿ ಧೋಪೇಶ್ವರ ದೇವಸ್ಥಾನಕ್ಕೆ ಮರದ ದಿಮ್ಮಿ(ಕಾಂಡ)ವನ್ನು ಒಯ್ಯುವ ಕೊಂಕಣಿ ಆಚರಣೆಯಾದ ಮಡಚಿ ಮಿರಾವ್ನುಕ್ ಸಮಯದಲ್ಲಿ ರಾಜಾಪುರ ಗ್ರಾಮದಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ.

ಗುರುವಾರ, ದೇವಸ್ಥಾನಕ್ಕೆ ಮರದ ದಿಮ್ಮಿ(ಕಾಂಡ)ವನ್ನು ಹೊತ್ತ ಗುಂಪು ಪ್ರಚೋದನಕಾರಿ ಘೋಷಣೆಗಳನ್ನು ಕೂಗುತ್ತಾ ಮಸೀದಿಯ ದ್ವಾರಕ್ಕೆ ಹಲವಾರು ಬಾರಿ ಅದರಿಂದ ಗುದ್ದಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ. ಘಟನೆಯ ಕುರಿತು ಹಲವಾರು ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿಯೂ ವೈರಲ್ ಆಗಿವೆ. ಮಸೀದಿಗೆ ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸಲಾಗಿದೆ ಎಂದು ಆರೋಪಿಸಲಾಗಿದೆ.

“...ಮಿರಾವ್ನುಕ್ (ಮೆರವಣಿಗೆ) ಕೊಂಕಣ (ಪ್ರದೇಶ)ದಲ್ಲಿ ಹಳೆಯ ಪದ್ಧತಿಯಾಗಿದೆ. ಈ ಬಾರಿ ಅವರು ಮರದ ದಿಮ್ಮಿ(ಕಾಂಡ)ಯನ್ನು ಕೊಂಡೊಯ್ಯುವಾಗ ಮಸದಿಯ ದ್ವಾರಕ್ಕೆ ಗುದ್ದಿದ್ದನ್ನು ನೋಡಿ ನಮಗೆ ಆಘಾತವಾಯಿತು. ಆ ಬಳಿಕ ಗೇಟಿಗೆ ಬೀಗ ಹಾಕಲಾಯಿತು. ಆದರೂ ಅವರು ಮತ್ತೆ ಮತ್ತೆ ಗೇಟಿಗೆ ಗುದ್ದಿದರು. ಕೆಲವರು ಆಕ್ರಮಣಕಾರಿ ಘೋಷಣೆಗಳನ್ನು ಕೂಗುತ್ತಿದ್ದರು”, ಎಂದು ಹೆಸರು ಹೇಳಲು ಇಚ್ಛಿಸದ ಸ್ಥಳೀಯ ನಿವಾಸಿಯೊಬ್ಬರು ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ರತ್ನಗಿರಿ ಎಸ್ಪಿ ಧನಂಜಯ್ ಕುಲಕರ್ಣಿ, “ಮೆರವಣಿಗೆಯ ಮುಂದೆ ಇದ್ದ ಕೆಲವು ಯುವಕರು, ಮದ್ಯದ ಅಮಲಿನಲ್ಲಿ, ಆಕ್ರಮಣಕಾರಿಯಾಗಿ ವರ್ತಿಸಿ ಮಸೀದಿಯ ಹೊರಗೆ ಘೋಷಣೆಗಳನ್ನು ಕೂಗಿದರು. ನಿಷೇಧಾಜ್ಞೆಗಳನ್ನು ಧಿಕ್ಕರಿಸಿದ್ದರಿಂದ ನಾವು ಅವರ ವಿರುದ್ಧ ಮಹಾರಾಷ್ಟ್ರ ಪೊಲೀಸ್ ಕಾಯ್ದೆಯ ಸೆಕ್ಷನ್ 135 ರ ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದೇವೆ” ಎಂದು ಹೇಳಿದ್ದಾರೆ.

ಹೆಸರು ಹೇಳಲು ಇಚ್ಛಿಸದ ಮತ್ತೊಬ್ಬ ಅಧಿಕಾರಿ, "ಕೆಲವರು ದಾರಿತಪ್ಪಿಸುವ ಶೀರ್ಷಿಕೆಗಳೊಂದಿಗೆ ಕೋಮು ಸಂಘರ್ಷವನ್ನು ಸೃಷ್ಟಿಸಲು ಈ ವೀಡಿಯೊಗಳನ್ನು ಹರಡುತ್ತಿದ್ದಾರೆ. ಈ ವೀಡಿಯೊವನ್ನು ಅಪ್ಲೋಡ್ ಮಾಡಿದ ವರ್ಲಿ ಮೂಲದ ವ್ಯಕ್ತಿಯನ್ನು ನಮ್ಮ ತಂಡ ಪತ್ತೆಹಚ್ಚಿ ಅದನ್ನು ಅಳಿಸುವಂತೆ ಮಾಡಿದ್ದೇವೆ. ಆತನ ವಿರುದ್ಧ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳಬೇಕೆ ಎಂದು ನಾವು ನಿರ್ಧರಿಸುತ್ತಿದ್ದೇವೆ", ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News