ರೈಲು ಸ್ಟಂಟ್ ಮಾಡಲು ಹೋಗಿ ತನ್ನ ಕೈಕಾಲು ಕಳೆದುಕೊಂಡ ಮುಂಬೈನ ಅಪ್ರಾಪ್ತ ಬಾಲಕ!

Update: 2024-07-27 13:39 GMT

PhotoCredit: indiatvnews.com

ಮುಂಬೈ : ಸೆವ್ರಿ ರೈಲು ನಿಲ್ದಾಣದಲ್ಲಿ ರೈಲು ಸ್ಟಂಟ್ ಮಾಡುವ ಮೂಲಕ ಗಮನ ಸೆಳೆದಿದ್ದ ಯುವ ಪ್ರಯಾಣಿಕನೊಬ್ಬ, ಅಂತಹುದೇ ಪ್ರಯತ್ನವೊಂದರಲ್ಲಿ ಒಂದು ತಿಂಗಳ ನಂತರ ತನ್ನ ಎಡಗೈ ಹಾಗೂ ಒಂದು ಕಾಲನ್ನು ಕಳೆದುಕೊಂಡಿರುವ ಘಟನೆ ನಡೆದಿದೆ!

ಚಲಿಸುತ್ತಿರುವ ರೈಲಿನ ಹಿಂದೆ ಓಡುತ್ತಾ, ಅದರೊಂದಿಗೆ ನೇತಾಡುತ್ತಿದ್ದ ಯುವಕನ ವಿಡಿಯೊ ಜುಲೈ 14ರಂದು ವೈರಲ್ ಆಗಿತ್ತು. ಈ ಸಂದರ್ಭದಲ್ಲಿ ಆತ ರೈಲಿನ ಬಾಗಿಲನ್ನು ಹಿಡಿದುಕೊಳ್ಳುವಲ್ಲಿ ಯಶಸ್ವಿಯಾದರೂ, ರೈಲು ನಿಲ್ದಾಣವನ್ನು ಬಹುತೇಕ ಪೂರ್ಣವಾಗಿ ತೊರೆಯುವವರೆಗೂ ರೈಲಿನೊಳಗೆ ಹತ್ತಲು ಸಾಧ್ಯವಾಗಿರಲಿಲ್ಲ.

ಈ ವೈರಲ್ ವಿಡಿಯೊವನ್ನು ಗಂಭೀರವಾಗಿ ಪರಿಗಣಿಸಿದ ರೈಲ್ವೆ ರಕ್ಷಣಾ ಪಡೆಯು (ಆರ್‌ ಪಿ ಎಫ್‌), ಆ ದುಸ್ಸಾಹಸ ಮಾಡಿದ್ದ ಯುವಕ ಫರ್ಹಾತ್ ಶೇಖ್ ನನ್ನು ಪತ್ತೆ ಹಚ್ಚಲು ವಡಾಲಾದ ಅಂಟೋಪ್ ಹಿಲ್ ಗೆ ತೆರಳಿದಾಗ ಅವರಿಗೊಂದು ಆಘಾತ ಕಾದಿತ್ತು. ಮಾರ್ಚ್ 7ರಂದು ಪ್ರದರ್ಶಿಸಿದ್ದ ಸ್ಟಂಟ್ ಅನ್ನೇ ಮತ್ತೊಮ್ಮೆ ಪ್ರದರ್ಶಿಸಲು ಪ್ರಯತ್ನಿಸಿದ್ದ ಆ ಯುವಕ, ತನ್ನ ಎಡಗೈ ಹಾಗೂ ಒಂದು ಕಾಲನ್ನು ಕಳೆದುಕೊಂಡಿರುವುದು ಅವರ ಗಮನಕ್ಕೆ ಬಂದಿತು.

ಫರ್ಹಾನ್ ಶೇಖ್ ನನ್ನು ವಿಚಾರಣೆಗೆ ಒಳಪಡಿಸಿದಾಗ, ಸಾಮಾಜಿಕ ಮಾಧ್ಯಮಗಳಲ್ಲಿ ತನ್ನ ಸ್ಟಂಟ್ ವಿಡಿಯೊವನ್ನು ಹಂಚಿಕೊಂಡು ಮೆಚ್ಚುಗೆಗಳನ್ನು ಪಡೆಯಲು ನಾನು ಮಾರ್ಚ್ 7ರಂದು ಸೆವ್ರಿ ನಿಲ್ದಾಣದಲ್ಲಿ ಪ್ರದರ್ಶಿಸಿದ ಸ್ಟಂಟ್ ಅನ್ನು ಚಿತ್ರೀಕರಿಸುವಂತೆ ನನ್ನ ಸ್ನೇಹಿತನಿಗೆ ಸೂಚಿಸಿದ್ದೆ ಎಂದು ಆತ ಒಪ್ಪಿಕೊಂಡಿದ್ದಾನೆ. ಎಪ್ರಿಲ್ 14ರಂದು ಅಂತಹುದೇ ಸ್ಟಂಟ್ ಅನ್ನು ಮಸ್ಜಿದ್ ನಿಲ್ದಾಣದ ಬಳಿ ಪ್ರದರ್ಶಿಸಲು ಯತ್ನಿಸಿದಾಗ ಆತ ತೀವ್ರವಾಗಿ ಗಾಯಗೊಂಡಿದ್ದಾನೆ. ಕೂಡಲೇ ರೈಲ್ವೆ ಅಧಿಕಾರಿಗಳು ಆತನನ್ನು ಸೇಂಟ್ ಜಾರ್ಜ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಆತ ತನ್ನ ಒಂದು ಕೈ ಹಾಗೂ ಒಂದು ಕಾಲನ್ನು ಈ ದುಸ್ಸಾಹಸದಲ್ಲಿ ಕಳೆದುಕೊಂಡಿದ್ದಾನೆ ಎಂದು ವರದಿಯಾಗಿದೆ.

ಸಂತ್ರಸ್ತ ಯುವಕನು ತನ್ನ ದುರಂತವನ್ನು ರೈಲ್ವೆ ಅಧಿಕಾರಿಗಳೊಂದಿಗೆ ಹಂಚಿಕೊಂಡಿರುವ ವಿಡಿಯೊವನ್ನು ಕೇಂದ್ರ ರೈಲ್ವೆ ವಲಯವು ಎಕ್ಸ್ ಸಾಮಾಜಿಕ ಮಾಧ್ಯರಮದಲ್ಲಿ ಪೋಸ್ಟ್ ಮಾಡಿದೆ. “ಈ ವೈರಲ್ ವಿಡಿಯೊದಲ್ಲಿ ಸ್ಟಂಟ್ ಪ್ರದರ್ಶಿಸಿದ್ದ ಯುವಕನನ್ನು ಕೇಂದ್ರ ರೈಲ್ವೆ ವಲಯ ಪತ್ತೆ ಹಚ್ಚಿದೆ. ಆತ ಇಂತಹುದೇ ಮತ್ತೊಂದು ಸಾಹಸ ಪ್ರದರ್ಶನದಲ್ಲಿ ತನ್ನ ಒಂದು ಕೈ ಹಾಗೂ ಕಾಲನ್ನು ಕಳೆದುಕೊಂಡಿದ್ದಾನೆ. ಸುರಕ್ಷತೆಯನ್ನು ಖಾತರಿಪಡಿಸಲು ಆರ್ ಪಿ ಎಫ್ ತ್ವರಿತ ಕ್ರಮ ಕೈಗೊಂಡಿದೆ. ಪ್ರಯಾಣಿಕರು ಇಂತಹ ಮಾರಣಾಂತಿಕ ಸಾಹಸ ಪ್ರದರ್ಶಿಸುವುದರಿಂದ ದೂರ ಉಳಿಯಬೇಕು ಹಾಗೂ ಇಂತಹ ಘಟನೆಗಳನ್ನು 139ಗೆ ವರದಿ ಮಾಡಬೇಕು ಎಂದು ಮನವಿ ಮಾಡುತ್ತೇವೆ. ಸುರಕ್ಷತೆ ಮೊದಲು!!” ಎಂದು ಯುವಕನ ವಿಡಿಯೊ ಹಂಚಿಕೊಂಡು ಕೇಂದ್ರ ರೈಲ್ವೆ ವಲಯ ಮನವಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News