ಲೋಕಸಭಾ ಚುನಾವಣೆ ಬಳಿಕ 12ಕ್ಕೂ ಅಧಿಕ ಗುಂಪು ಹತ್ಯೆ ಪ್ರಕರಣಗಳು ನಡೆದಿವೆ : ಮುಸ್ಲಿಂ ಸಂಘಟನೆಗಳ ಕಳವಳ
ಹೊಸದಿಲ್ಲಿ : ದೇಶದಲ್ಲಿ ಮುಸ್ಲಿಮರ ವಿರುದ್ಧ ಹಿಂಸಾಚಾರದ ಪ್ರಕರಣಗಳು ಅದರಲ್ಲೂ ಲೋಕಸಭಾ ಚುನಾವಣೆಯ ಬಳಿಕ ಆತಂಕಕಾರಿ ಪ್ರಮಾಣದಲ್ಲಿ ಹೆಚ್ಚುತ್ತಿರುವ ಬಗ್ಗೆ ಭಾರತದ ಪ್ರಮುಖ ಮುಸ್ಲಿಂ ಸಂಘಟನೆಗಳಾದ ಜಮಾತೆ ಇಸ್ಲಾಮಿ ಹಿಂದ್ ಹಾಗೂ ಜಮೀಯತ್ ಉಲೇಮಾ ಎ ಹಿಂದ್ ತೀವ್ರ ಕಳವಳ ವ್ಯಕ್ತಪಡಿಸಿವೆ.
ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರವು ಸತತ ಮೂರನೇ ಬಾರಿಗೆ ಅಧಿಕಾರಕ್ಕೇರಿದಾಗಿನಿಂದ ನಾಲ್ವರು ಮುಸ್ಲಿಮೇತರರು ಸೇರಿದಂತೆ ಗುಂಪಿನಿಂದ ಥಳಿಸಿ ಹತ್ಯೆಯ 12 ಘಟನೆಗಳು ವರದಿಯಾಗಿರುವುದಾಗಿ ಅವು ಗಮನಸೆಳೆದಿವೆ.
ಈ ಬಗ್ಗೆ ಸರಕಾರವು ತಕ್ಷಣವೇ ಕ್ರಮ ಕೈಗೊಳ್ಳಬೇಕೆಂದು ಈ ಸಂಘಟನೆಗಳು ಆಗ್ರಹಿಸಿವೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಈ ಕುರಿತು ಹೇಳಿಕೆ ನೀಡಬೇಕು. ಗುಂಪು ಹತ್ಯೆ ಹಾಗೂ ಮುಸ್ಲಿಮರನ್ನು ಗುರಿಯಿರಿಸಿರುವ ನಡೆಸುವ ದ್ವೇಷಪರಾಧದ ಘಟನೆಗಳನ್ನು ಮಟ್ಟಹಾಕಲು ವಿಶೇಷ ಕಾನೂನುಗಳನ್ನು ಜಾರಿಗೊಳಿಸಬೇಕೆಂದು ಒತ್ತಾಯಿಸಿವೆ.
ಹೊಸದಿಲ್ಲಿಯಲ್ಲಿ ರವಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜಮಾತೆ ಇಸ್ಲಾಮಿ ಹಿಂದ್ ನ ಉಪಾಧ್ಯಕ್ಷ ಪ್ರೊ. ಸಲೀಂ ಇಂಜಿನಿಯರ್ ಅವರು ಮಾತನಾಡಿ, 2024ರ ಲೋಕಸಭಾ ಚುನಾವಣೆ ಬಳಿಕ ಕೋಮು ಹಿಂಸಾಚಾರ, ಥಳಿಸಿ ಹತ್ಯೆಯ ಘಟನೆಗಳು ಕಳವಳಕಾರಿ ಪ್ರಮಾಣದಲ್ಲಿ ಏರಿಕೆಯಾಗಿವೆ. ಬಹುತೇಕ ಪ್ರಕರಣಗಳು ಚತ್ತೀಸ್ ಗಡ, ಉತ್ತರಪ್ರದೇಶ, ಗುಜರಾತ್, ಪಶ್ಚಿಮಬಂಗಾಳ, ತೆಲಂಗಾಣ, ಒಡಿಶಾ ಹಾಗೂ ರಾಜಸ್ಥಾನಗಳಲ್ಲಿ ವರದಿಯಾಗಿವೆ. ಇವುಗಳಲ್ಲಿ ಹೆಚ್ಚಿನವು ಗೋಹತ್ಯೆಯ ಆರೋಪದಲ್ಲಿ ನಡೆದಿವೆ ಎಂದು ಅವರು ಹೇಳಿದ್ದಾರೆ.
ಭಾರತೀಯ ದಂಡಸಂಹಿತೆ (ಐಪಿಸಿ), ಕ್ರಿಮಿನಲ್ ಪ್ರಕ್ರಿಯಾ ಸಂಹಿತೆ (ಸಿ ಆರ್ ಪಿ ಸಿ) ಗಳನ್ನು ತೆರವುಗೊಳಿಸಿ, ಅವು ಬದಲಿಗೆ ಭಾರತೀಯ ನ್ಯಾಯ ಸಂಹಿತೆ (ಬಿಎನ್ಎಸ್), ಭಾರತೀಯ ನಾಗರಿಕ ಸುರಕ್ಷಾ ಸಂಹಿತೆ ( ಬಿಎನ್ಎಸ್ಎಸ್) ಕಾನೂನುಗಳನ್ನು ಜಾರಿಗೊಳಿಸಲಾಗಿರುವ ಬಗ್ಗೆಯೂ ಪ್ರೊ.ಸಲೀಂ ಇಂಜಿನಿಯರ್ ಆತಂಕ ವ್ಯಕ್ತಪಡಿಸಿದರು. ಸಂಸತ್ ನಲ್ಲಿ ಸೂಕ್ತವಾದ ಚರ್ಚೆ ನಡೆಸದೆಯೇ ಹಾಗೂ ಹಲವಾರು ಸಂಸದರು ಅಮಾನತಿನಲ್ಲಿರುವಾಗಲೇ ಈ ಕಾನೂನುಗಳನ್ನು ಜಾರಿಗೊಳಿಸಲಾಗಿದೆಯೆಂದು ಅವರು ದೂರಿದರು.
ನಾಗರಿಕ ಹಕ್ಕುಗಳ ರಕ್ಷಣಾ ಸಂಘ (ಎಪಿಸಿಆರ್)ದ ಕಾರ್ಯದರ್ಶಿ ನದೀಮ್ ಖಾನ್ ಮಾತನಾಡಿ ನೂತನ ಅಪರಾಧ ಕಾಯ್ದೆಗಳಡಿ ಭ್ರಷ್ಟಾಚಾರ ಹಾಗೂ ತಾರತಮ್ಯ ಹೆಚ್ಚಳವಾಗುವ ಸಾಧ್ಯತೆಯಿದೆಯೆಂದು ಹೇಳಿದ್ದಾರೆ. 3 ರಿಂದ 7 ವರ್ಷಗಳ ಅವಧಿಯ ಜೈಲುವಾಸವನ್ನು ವಿಧಿಸಬಹುದಾದ ಅಪರಾಧಗಳಿಗೆ ಎಫ್ಐಆರ್ ದಾಖಲಿಸಲು ಪೊಲೀಸರಿಗೆ ವಿಶೇಷಾಧಿಕಾರವನ್ನು ನೀಡಿರುವುದನ್ನು ಅವರು ವಿರೋಧಿಸಿದರು.
ದ್ವೇಷಪರಾಧದ ಪ್ರಕರಣಗಳು ಹಾಗೂ ಮುಸ್ಲಿಮರನ್ನು ಗುರಿಯಿರಿಸಿ ಹತ್ಯೆಗೈದ ಪ್ರಕರಣಗಳ ಕುರಿತ ಎಪಿಸಿಆರ್ ವರದಿಯನ್ನು ಪತ್ರಿಕಾಗೋಷ್ಠಿಯಲ್ಲಿ ಮಂಡಿಸಿದ ನದೀಮ್ ಖಾನ್ ಅವರು ಈ ಹೇಯ ಕೃತ್ಯಗಳ ವಿರುದ್ಧ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ದೃಢವಾದ ನಿಲುವನ್ನು ತಳೆಯಬೇಕೆಂದು ಆಗ್ರಹಿಸಿದರು.