ನೀವು ಓರ್ವ ಬಿಜೆಪಿ ಸಂಸದನನ್ನು ನೀಡಿದರೆ ಮೋದಿ ರಾಜ್ಯಕ್ಕೆ ಪವಾಡವನ್ನು ತರಲಿದ್ದಾರೆ: ಕೇರಳದಲ್ಲಿ ನಿರ್ಮಲಾ ಸೀತಾರಾಮನ್

Update: 2024-03-30 06:52 GMT

ನಿರ್ಮಲಾ ಸೀತಾರಾಮನ್ | Photo: PTI

ತಿರುವನಂತಪುರಂ: ಹಿಂದಿನ ವರ್ಷಗಳಲ್ಲಿನ ಕಳಪೆ ಆಡಳಿತದ ಕಾರಣಕ್ಕೆ ಕೇರಳದ ಆರ್ಥಿಕತೆಯು ಒತ್ತಡವನ್ನು ಎದುರಿಸುತ್ತಿದೆ ಎಂದು ಗುರುವಾರ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಆರೋಪಿಸಿದ್ದಾರೆ.

ತಿರುವನಂತಪುರಂನಲ್ಲಿ ಆಯೋಜಿಸಲಾಗಿದ್ದ ಬಿಜೆಪಿ ನೇತೃತ್ವದ NDA ಮೈತ್ರಿಕೂಟ ಲೋಕಸಭಾ ಚುನಾವಣಾ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಾರ, ಭಾರತದಲ್ಲಿ ಅತ್ಯಂತ ಆರ್ಥಿಕ ಒತ್ತಡಕ್ಕೆ ಒಳಗಾಗಿರುವ ಐದು ರಾಜ್ಯಗಳ ಪೈಕಿ ಕೇರಳ ಕೂಡಾ ಒಂದಾಗಿದೆ. ಈ ಬಿಕ್ಕಟ್ಟಿಗೆ ಸಿಪಿಐಎಂ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ ಹಾಗೂ ಕಾಂಗ್ರೆಸ್ ನೇತೃತ್ವದ ಐಕ್ಯ ಪ್ರಜಾಸತ್ತಾತ್ಮಕ ರಂಗದ ಸತತ ರಾಜ್ಯ ಸರಕಾರಗಳು ಕಾರಣ ಎಂದು ನಿರ್ಮಲಾ ಸೀತಾರಾಮನ್ ದೂರಿದ್ದಾರೆ.

ಎಡ ಪ್ರಜಾಸತ್ತಾತ್ಮಕ ರಂಗದ ಸರಕಾರವು ಹೂಡಿಕೆದಾರರನ್ನು ಹೊರ ನೂಕುವ ಮೂಲಕ ರಾಜ್ಯವನ್ನು ಕೈಗಾರಿಕಾ ರಹಿತವನ್ನಾಗಿಸುತ್ತಿದೆ ಎಂದು ಅವರು ತಮ್ಮ ಭಾಷಣದಲ್ಲಿ ಆರೋಪಿಸಿದ್ದಾರೆ. ಕೇರಳ ಸರಕಾರವು ಉದ್ಯಮ ಸ್ನೇಹಿಯಲ್ಲ ಎಂದು ಆರೋಪಿಸಿ ತೆಲಂಗಾಣದಲ್ಲಿ ತಮ್ಮ ಉದ್ಯಮವನ್ನು ಸ್ಥಾಪಿಸುತ್ತಿರುವ ಕೈಟೆಕ್ಸ್ ಸಮೂಹವನ್ನು ಅವರು ಈ ಸಂದರ್ಭದಲ್ಲಿ ನಿರ್ದಿಷ್ಟವಾಗಿ ಉಲ್ಲೇಖಿಸಿದ್ದಾರೆ.

ಕೇರಳ ಸರಕಾರವು ಸಾಲ ಪಡೆಯುವ ಮಿತಿಯಾದ ಶೇ. 3 ಅನ್ನು ಮೀರಿದ್ದು, 2016-17ರಿಂದ ಆರು ವರ್ಷಗಳ ಕಾಲ ಬಜೆಟ್ ಹೊರತಾಗಿ ರೂ. 42,285 ಕೋಟಿ ಮೊತ್ತವನ್ನು ಸಾಲವಾಗಿ ಪಡೆದಿದೆ ಎಂದೂ ಅವರು ಆರೋಪಿಸಿದ್ದಾರೆ. ಈ ಸಾಲವನ್ನು ಕೇರಳ ಸರಕಾರವು ಕೇರಳ ಮೂಲಭೂತ ಸೌಕರ್ಯ ಹೂಡಿಕೆ ನಿಧಿ ಮಂಡಳಿಯ ಮೂಲಕ ಪಡೆದಿದ್ದು, ಈ ಸಂಸ್ಥೆಗೆ ತನ್ನದೇ ಆದ ಯಾವುದೇ ಆದಾಯ ಮೂಲವಿಲ್ಲ ಎಂದೂ ದೂರಿದ್ದಾರೆ. ಪಂಜಾಬ್ ನೊಂದಿಗೆ ಕೇರಳ ಮಾತ್ರ ಶೇ. 50ಕ್ಕಿಂತಲೂ ಕಡಿಮೆ ಅಭಿವೃದ್ಧಿ ವೆಚ್ಚವನ್ನು ಹೊಂದಿದೆ ಎಂದು ಪ್ರತಿಪಾದಿಸಿದ ಅವರು, ಈಗ ಯಾವುದೇ ಕೇರಳ ಮಾದರಿ ಇಲ್ಲ. ಅದನ್ನು ಕೇವಲ ಭೂತಕಾಲದಲ್ಲಿ ಮಾತ್ರ ಆಚರಿಸಲಾಗುತ್ತಿತ್ತು ಎಂದು ವ್ಯಂಗ್ಯವಾಡಿದ್ದಾರೆ.

ಇದರ ಬದಲು, ಕೇರಳವೇನಾದರೂ ಓರ್ವ ಬಿಜೆಪಿ ಸಂಸದನನ್ನು ನೀಡಿದರೆ, ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಪವಾಡವನ್ನು ತರಲಿದ್ದಾರೆ ಎಂದೂ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ.

ಮುಂದಿನ ಲೋಕಸಭಾ ಚುನಾವಣೆಯಲ್ಲಿ ತಿರುವನಂತಪುರಂ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿರುವ ರಾಜೀವ್ ಚಂದ್ರಶೇಖರ್ ಪರವಾಗಿ ನಿರ್ಮಲಾ ಸೀತಾರಾಮನ್ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News