ಈ ವರ್ಷ ನಿವೃತ್ತರಾಗಲಿರುವ 68 ರಾಜ್ಯಸಭಾ ಸದಸ್ಯರ ಪೈಕಿ 60 ಮಂದಿ ಬಿಜೆಪಿಯವರು!
ಹೊಸದಿಲ್ಲಿ: ಒಂಬತ್ತು ಮಂದಿ ಕೇಂದ್ರ ಸಚಿವರು ಸೇರಿದಂತೆ ಬಿಜೆಪಿಯ 60 ಮಂದಿ ರಾಜ್ಯಸಭಾ ಸದಸ್ಯರು ಈ ವರ್ಷ ಅವಧಿ ಪೂರ್ಣಗೊಳಿಸಿ ರಾಜ್ಯಸಭೆಯಿಂದ ನಿವೃತ್ತರಾಗಲಿದ್ದಾರೆ. ಈ ಪೈಕಿ ಬಹುತೇಕ ಮಂದಿ ಲೋಕಸಭೆಗೆ ಸ್ಪರ್ಧಿಸಿ, ರಾಜ್ಯಸಭೆಗೆ ಸುಧೀರ್ಘ ಅವಧಿಯಿಂದ ಕಾಯುತ್ತಿರುವ ಇತರರಿಗೆ ಅವಕಾಶ ಮಾಡಿಕೊಡುವ ನಿರೀಕ್ಷೆ ಇದೆ.
ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್, ಪರಿಸರ ಖಾತೆ ಸಚಿವ ಭೂಪೇಂದ್ರ ಯಾದವ್, ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಮತ್ತು ಮಾಜಿ ಪ್ರಧಾನಿ ಮನಮೋಹನ ಸಿಂಗ್ ಸೇರಿದಂತೆ 57 ಮಂದಿ ಮುಖಂಡರು ಏಪ್ರಿಲ್ ನಲ್ಲಿ ತಮ್ಮ ಅವಧಿ ಪೂರ್ಣಗೊಳಿಸಲಿದ್ದಾರೆ.
ಉತ್ತರ ಪ್ರದೇಶದಿಂದ ಗರಿಷ್ಠ ಸಂಖ್ಯೆಯ ಅಂದರೆ 10 ಸದಸ್ಯರು ನಿವೃತ್ತರಾಗಲಿದ್ದು, ಮಹಾರಾಷ್ಟ್ರ ಮತ್ತು ಬಿಹಾರ (ತಲಾ6), ಪಶ್ಚಿಮ ಬಂಗಾಳ (5), ಕರ್ನಾಟಕ ಹಾಗೂ ಗುಜರಾತ್ (ತಲಾ 4), ಒಡಿಶಾ, ತೆಲಂಗಾಣ, ಕೇರಳ ಮತ್ತು ಆಂಧ್ರಪ್ರದೇಶ (ತಲಾ 3) ಜಾರ್ಖಂಡ್ ಹಾಗೂ ರಾಜಸ್ಥಾನ (ತಲಾ 2) ಉತ್ತರಾಖಂಡ, ಹಿಮಾಚಲ ಪ್ರದೇಶ, ಹರ್ಯಾಣ ಮತ್ತು ಛತ್ತೀಸ್ಗಢ (ತಲಾ ಒಂದು) ನಂತರದ ಸ್ಥಾನಗಳಲ್ಲಿವೆ. ನಾಮಕರಣಗೊಂಡ ನಾಲ್ವರು ಸದಸ್ಯರು ಜುಲೈನಲ್ಲಿ ನಿವೃತ್ತರಾಗಲಿದ್ದಾರೆ.
ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಆಳ್ವಿಕೆ ಇರುವುದರಿಂದ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ತಮ್ಮ ತವರು ರಾಜ್ಯವನ್ನು ಹೊರತುಪಡಿಸಿ ಬೇರೆ ಕಡೆ ಸ್ಥಾನ ಹುಡುಕಿಕೊಳ್ಳಬೇಕಾಗಿದೆ.
ಕಳೆದ ವರ್ಷ ಅಧಿಕಾರಕ್ಕೆ ಬಂದ ಕರ್ನಾಟಕ ಹಾಗೂ ತೆಲಂಗಾಣದಿಂದ ತಮ್ಮ ಸದಸ್ಯರನ್ನು ಮೇಲ್ಮನೆಗೆ ಕಳುಹಿಸಲು ಕಾಂಗ್ರೆಸ್ ಗೆ ಅವಕಾಶವಿದೆ. ಕಾಂಗ್ರೆಸ್ ಪಕ್ಷ ತೆಲಂಗಾಣದಿಂದ ಕನಿಷ್ಠ ಎರಡು ಮಂದಿಯನ್ನು ರಾಜ್ಯಸಭೆಗೆ ಕಳುಹಿಸುವ ನಿರೀಕ್ಷೆಯಲ್ಲಿದೆ.