ರಾಮಮಂದಿರ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಆದಿತ್ಯನಾಥ್ ಭಾಗವಹಿಸುವುದನ್ನು ನಿರ್ಬಂಧಿಸಲು ಕೋರಿ ಅಲಹಾಬಾದ್ ಹೈಕೋರ್ಟ್ ಗೆ ಅರ್ಜಿ
ಲಕ್ನೋ : ಜನವರಿ 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮ ಮಂದಿರದ ಪ್ರಾಣಪ್ರತಿಷ್ಠಾ ಕಾರ್ಯಕ್ರಮವನ್ನು ಪ್ರಶ್ನಿಸಿ ಅಲಹಾಬಾದ್ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಗಾಝಿಯಾಬಾದ್ ಜಿಲ್ಲೆಯ ಭೋಲಾ ದಾಸ್ ಎಂಬವರು ದಾಖಲಿಸಿದ್ದಾರೆ.
ಜನವರಿ 22ರ ಈ ಸಮಾರಂಭದಲ್ಲಿ ಹಾಗೂ 2024 ಲೋಕಸಭಾ ಚುನಾವಣೆ ಮುಗಿಯುವ ತನಕ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಭಾಗವಹಿಸುವುದನ್ನು ನಿರ್ಬಂಧಿಸಿ ಕೋರ್ಟ್ ಆದೇಶ ನೀಡಬೇಕೆಂದು ಪಿಐಎಲ್‌ನಲ್ಲಿ ಕೋರಲಾಗಿದೆ.
ಸನಾತನ ಧರ್ಮದ ಶಂಕರಾಚಾರ್ಯರುಗಳ ಅನುಮತಿ ದೊರೆಯುವ ತನಕ ನ್ಯಾಯದ ಹಿತಾಸಕ್ತಿಯಿಂದ ಮೇಲಿನ ನಿರ್ಬಂಧಗಳನ್ನು ಪ್ರಧಾನಿ ಹಾಗೂ ಉತ್ತರ ಪ್ರದೇಶ ಸಿಎಂಗೆ ಹೇರಬೇಕೆಂದೂ ಪಿಐಎಲ್‌ನಲ್ಲಿ ಕೋರಲಾಗಿದೆ.
ಕೇಂದ್ರ ಸರ್ಕಾರ, ಉತ್ತರ ಪ್ರದೇಶ ಮುಖ್ಯಮಂತ್ರಿ, ಉತ್ತರ ಪ್ರದೇಶ ರಾಜ್ಯ ಹಾಗೂ ನಾಲ್ಕು ಶಂಕರಾಚಾರ್ಯರುಗಳನ್ನು ಪ್ರತಿವಾದಿಗಳೆಂದು ಅದರಲ್ಲಿ ಉಲ್ಲೇಖಿಸಲಾಗಿದೆ.
ಈ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ವಿಚಾರಣೆಗಾಗಿ ಇನ್ನಷ್ಟೇ ಸ್ವೀಕರಿಸಬೇಕಿದೆ. ಆಡಳಿತ ಬಿಜೆಪಿ ಅಧಿಕಾರ ದುರುಪಯೋಗಪಡಿಸುತ್ತಿದೆ ಹಾಗೂ ಮುಂದಿನ ಲೋಕಸಭಾ ಚುನಾವಣೆಯ ಮೇಲೆ ಕಣ್ಣಿರಿಸಿ ಸನಾತನ ಸಂಸ್ಕೃತಿಯನ್ನು ನಾಶಗೊಳಿಸುತ್ತಿದೆ ಎಂದು ಅರ್ಜಿಯಲ್ಲಿ ಆರೋಪಿಸಲಾಗಿದೆ.