‘ತಂತಿ ಟಿವಿ’ಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ ದೇಶಕ್ಕೆ ಸುಳ್ಳು ಹೇಳಿದ್ದಾರೆ: ಜೈರಾಮ್ ರಮೇಶ್ ಆರೋಪ

Update: 2024-04-01 09:54 GMT

 ಜೈರಾಮ್ ರಮೇಶ್| Photo: PTI 

ಹೊಸ ದಿಲ್ಲಿ: ತಮಿಳು ಸುದ್ದಿ ವಾಹಿನಿ ‘ತಂತಿ ಟಿವಿ’ಗೆ ಇತ್ತೀಚೆಗೆ ಸಂದರ್ಶನ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ದೇಶದ ಜನರಿಗೆ ಸಂಪೂರ್ಣವಾಗಿ ಸುಳ್ಳು ಹೇಳಿದ್ದಾರೆ ಎಂದು ಸೋಮವಾರ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಆರೋಪಿಸಿದ್ದಾರೆ.

ಮಾರ್ಚ್ 31ರಂದು ‘ತಂತಿ ಟಿವಿ’ ತಮಿಳು ಸುದ್ದಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ, ಚುನಾವಣಾ ಬಾಂಡ್ ವಿಷಯವು ತಮ್ಮ ಸರಕಾರಕ್ಕೆ ಹಿನ್ನಡೆಯನ್ನುಂಟು ಮಾಡಿದೆ ಎಂಬ ವಾದವನ್ನು ತಳ್ಳಿ ಹಾಕಿದ್ದರಲ್ಲದೆ, ಯಾವುದೇ ವ್ಯವಸ್ಥೆಯೂ ಪರಿಪೂರ್ಣವಲ್ಲ ಹಾಗೂ ಲೋಪವನ್ನು ನಂತರದಲ್ಲಿ ಸುಧಾರಿಸಬಹುದು ಎಂದು ಹೇಳಿದ್ದರು.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಾಮದಲ್ಲಿ ಪೋಸ್ಟ್ ಮಾಡಿರುವ ಜೈರಾಮ್ ರಮೇಶ್, “ಚುನಾವಣಾ ಬಾಂಡ್ ಯೋಜನೆಯನ್ನು ಸಂಪೂರ್ಣವಾಗಿ ಅನಾಮಧೇಯವಾಗಿರುವಂತೆ ರೂಪಿಸಲಾಗಿತ್ತು. ರಾಜಕೀಯ ಪಕ್ಷಗಳಿಗೆ ನಿಧಿಯು ಎಲ್ಲಿಂದ ಬಂತು ಹಾಗೂ ಅದನ್ನು ಹೇಗೆ ಬಳಸಿಕೊಳ್ಳಲಾಯಿತು ಎಂಬ ವಿವರಗಳನ್ನು ಸಾರ್ವಜನಿಕರಿಂದ ಮುಚ್ಚಿಡುವುದು ಪ್ರಧಾನಿ ಮೋದಿಗೆ ಬೇಕಿತ್ತು” ಎಂದು ಆರೋಪಿಸಿದ್ದಾರೆ.

2018ರಿಂದ 2024ರ ನಡುವಿನ ಆರು ವರ್ಷಗಳಲ್ಲಿ ಯಾವ ಪಕ್ಷಕ್ಕೆ ಯಾರು ದೇಣಿಗೆ ನೀಡಿದ್ದಾರೆಂಬ ಒಂದು ವಿವರವೂ ಸಾರ್ವಜನಿಕವಾಗಿ ಬಹಿರಂಗಪಡಿಸಲಾಗಿರಲಿಲ್ಲ ಎಂದೂ ಅವರು ದೂರಿದ್ದಾರೆ.

ನಮ್ಮ ಸರಕಾರವು ಜಾರಿಗೆ ತಂದ ಚುನಾವಣಾ ಬಾಂಡ್ ಯೋಜನೆಯಿಂದಾಗಿಯೇ ಫಲಾನುಭವಿಗಳಿಗೆ ದೇಣಿಗೆದಾರರು ನೀಡುತ್ತಿರುವ ದೇಣಿಗೆಯ ಮೂಲಗಳನ್ನು ಪತ್ತೆ ಹಚ್ಚಲು ಸಾಧ್ಯವಾಗಿದೆ ಎಂದು ಸಂದರ್ಶನದಲ್ಲಿ ಪ್ರಧಾನಿ ಮೋದಿ ಸಮರ್ಥಿಸಿಕೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News