ಲಡಾಖ್‌ನ ಒಂದಿಂಚೂ ಭೂಮಿಯನ್ನು ಚೀನಾ ಅತಿಕ್ರಮಿಸಿಲ್ಲ ಎಂಬ ಪ್ರಧಾನಿ ಹೇಳಿಕೆ ಸುಳ್ಳು: ರಾಹುಲ್ ಗಾಂಧಿ
ಕಾರ್ಗಿಲ್ (ಲಡಾಖ್): ಭಾರತ-ಚೀನಾ ನಡುವಿನ ಗಡಿ ವಿವಾದಗಳನ್ನು ಶುಕ್ರವಾರ ಇಲ್ಲಿ ಪ್ರಸ್ತಾಪಿಸಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು, ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ (ಪಿಎಲ್‌ಎ)ಯು ಭಾರತದ ಭೂಮಿಯನ್ನು ವಶಪಡಿಸಿಕೊಂಡಿದೆ ಎಂದು ಹೇಳಿದರು.
ರ್ಯಾಲಿಯಲ್ಲಿ ಮಾತನಾಡುತ್ತಿದ್ದ ರಾಹುಲ್, ಲಡಾಖ್‌ನ ಒಂದು ಇಂಚೂ ಭೂಮಿಯನ್ನು ಚೀನಾ ವಶಪಡಿಸಿಕೊಂಡಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿಯವರು ಸುಳ್ಳು ಹೇಳಿದ್ದಾರೆ ಎಂದರು.
ದಕ್ಷಿಣ ಆಫ್ರಿಕಾದಲ್ಲಿ ಬ್ರಿಕ್ಸ್ ಶೃಂಗಸಭೆಯ ನೇಪಥ್ಯದಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಪ್ರಧಾನಿ ಮೋದಿಯವರು ಪೂರ್ವ ಲಡಾಖ್‌ನಲ್ಲಿಯ ವಾಸ್ತವಿಕ ನಿಯಂತ್ರಣ ರೇಖೆ (ಎಲ್‌ಎಸಿ)ಯಲ್ಲಿ ಬಗೆಹರಿಯದೇ ಇರುವ ವಿಷಯಗಳ ಬಗ್ಗೆ ಭಾರತದ ಕಳವಳಗಳನ್ನು ಅವರಿಗೆ ತಿಳಿಸಿದ್ದಾರೆ. ಭಾರತ ಮತ್ತು ಚೀನಾ ನಡುವಿನ ಸಂಬಂಧ ಸಹಜ ಸ್ಥಿತಿಗೆ ಮರಳಲು ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯನ್ನು ಕಾಯ್ದುಕೊಳ್ಳುವುದು ಅಗತ್ಯವಾಗಿದೆ ಎಂದು ಅವರು ಒತ್ತಿ ಹೇಳಿದ್ದಾರೆ ಎಂದು ವಿದೇಶಾಂಗ ಕಾರ್ಯದರ್ಶಿ ವಿನಯ ಕ್ವಾತ್ರಾ ಅವರು ಗುರುವಾರ ಸುದ್ದಿಗಾರರಿಗೆ ತಿಳಿಸಿದ್ದರು.
ರಾಹುಲ್ ಹೇಳಿದ್ದೇನು?
ಲಡಾಖ್ ಆಯಕಟ್ಟಿನ ಸ್ಥಳವಾಗಿದೆ. ಚೀನಾ ಭಾರತದ ಭೂಮಿಯನ್ನು ವಶಪಡಿಸಿಕೊಂಡಿದೆ ಎನ್ನುವುದು ಸ್ಪಷ್ಟವಾಗಿದೆ. ಪ್ರತಿಪಕ್ಷಗಳ ಸಭೆಯಲ್ಲಿ ಪ್ರಧಾನಿಯವರು ಲಡಾಖ್‌ನ ಒಂದಿಂಚೂ ಭೂಮಿಯನ್ನು ಚೀನಾ ವಶಪಡಿಸಿಕೊಂಡಿಲ್ಲ ಎಂದು ಹೇಳಿದ್ದು ದುಃಖಕರವಾಗಿದೆ. ಅವರು ಅಪ್ಪಟ ಸುಳ್ಳು ಹೇಳಿದ್ದಾರೆ ಎಂದು ಇಲ್ಲಿ ರ್ಯಾಲಿಯಲ್ಲಿ ಮಾತನಾಡಿದ ರಾಹುಲ್ ಹೇಳಿದರು.
‘ಕೆಲವು ತಿಂಗಳುಗಳ ಹಿಂದೆ ನಾವು ಕನ್ಯಾಕುಮಾರಿಯಿಂದ ಕಾಶ್ಮೀರವರೆಗೆ ಭಾರತ ಜೋಡೊ ಯಾತ್ರೆ ನಡೆಸಿದ್ದೆವು. ಬಿಜೆಪಿ-ಆರೆಸ್ಸೆಸ್ ದೇಶದಲ್ಲಿ ಹರಡುತ್ತಿರುವ ದ್ವೇಷ ಮತ್ತು ಹಿಂಸಾಚಾರದ ವಿರುದ್ಧ ನಿಲ್ಲುವುದು ಇದರ ಉದ್ದೇಶವಾಗಿತ್ತು. ಚಳಿಗಾಲದಲ್ಲಿ ಹಿಮದಿಂದಾಗಿ ಕಾರ್ಗಿಲ್‌ಗೆ ಭೇಟಿ ಸಾಧ್ಯವಾಗಿರಲಿಲ್ಲ,ಅದು ನನ್ನ ಮನಸ್ಸಿನಲ್ಲಿತ್ತು. ಈ ಬಾರಿ ಮೋಟರ್ ಬೈಕ್‌ನಲ್ಲಿ ಯಾತ್ರೆಯನ್ನು ಮುಂದುವರಿಸಿದ್ದೇನೆ’ ಎಂದರು.
ಮೋದಿ ವಿರುದ್ಧ ದಾಳಿ ನಡೆಸಿದ ಅವರು, ‘ಇತರ ನಾಯಕರು ತಮ್ಮ ‘ಮನ್ ಕಿ ಬಾತ್ ’ಹೇಳುವುದರಲ್ಲಿ ವ್ಯಸ್ತರಾಗಿದ್ದಾರೆ. ನಾನು ನಿಮ್ಮ ‘ಮನ್ ಕಿ ಬಾತ್ ’ಕೇಳಲು ನಿರ್ಧರಿಸಿದ್ದೆ. ಒಂದು ವಿಷಯವು ಸ್ಪಷ್ಟವಾಗಿದೆ; ಗಾಂಧೀಜಿ ಮತ್ತು ಕಾಂಗ್ರೆಸ್ ಸಿದ್ಧಾಂತ ಲಡಾಖ್‌ನ ರಕ್ತ ಮತ್ತು ಡಿಎನ್‌ಎದಲ್ಲಿ ಇದೆ’ ಎಂದರು.
ಕಳೆದೊಂದು ವಾರದಿಂದಲೂ ರಾಹುಲ್ ಕಾಶ್ಮೀರದಲ್ಲಿ ಪ್ರವಾಸ ಮಾಡುತ್ತಿದ್ದಾರೆ. ಶುಕ್ರವಾರ ಕಾರ್ಗಿಲ್ ಯುದ್ಧ ಸ್ಮಾರಕದ ಮೇಲೆ ಪುಷ್ಪಗುಚ್ಛವಿರಿಸಿದ ಅವರು ಯುದ್ಧದಲ್ಲಿ ಹುತಾತ್ಮ ಯೋಧರಿಗೆ ಗೌರವ ಸಲ್ಲಿಸಿದರು. ಬಳಿಕ ಶ್ರೀನಗರಕ್ಕೆ ತೆರಳುವ ಮಾರ್ಗದಲ್ಲಿ ಡ್ರಾಸ್‌ನಲ್ಲಿ ಜನರೊಂದಿಗೆ ಸಂಕ್ಷಿಪ್ತ ಸಂವಾದವನ್ನು ನಡೆಸಿದರು.