ಶಂಭುಗಡಿಯಿಂದ ದಿಲ್ಲಿಗೆ ಜಾಥಾ ನಡೆಸುತ್ತಿದ್ದ ರೈತರ ತಂಡದ ಮೇಲೆ ಪೊಲೀಸರ ದಾಳಿ
ಹೊಸದಿಲ್ಲಿ: ಶಂಭು ಗಡಿಯಿಂದ ಶುಕ್ರವಾರ ದಿಲ್ಲಿಗೆ ಜಾಥಾ ನಡೆಸಲು ಯತ್ನಿಸಿದ ಪ್ರತಿಭಟನಾ ನಿರತ ರೈತರನ್ನು ಚದುರಿಸಲು ಭದ್ರತಾಸಿಬ್ಬಂದಿ ಅಶ್ರುವಾಯು ಶೆಲ್ಗಳನ್ನು ಸಿಡಿಸಿದ್ದಾರೆ. ಈ ಸಂದರ್ಭದಲ್ಲಿ ಕನಿಷ್ಠ 5 ಮಂದಿ ರೈತರಿಗೆ ಗಾಯಗಳಾಗಿರುವುದಾಗಿ ವರದಿಗಳು ತಿಳಿಸಿವೆ.
ಸುಮಾರು 101 ಮಂದಿ ರೈತರ ತಂಡವೊಂದು ಮಧ್ಯಾಹ್ನ 1:00 ಗಂಟೆಯ ವೇಳೆಗೆ ದಿಲ್ಲಿಗೆ ಜಾಥಾವನ್ನು ಆರಂಭಿಸಿತ್ತು. ಆದರೆ ಕೆಲವೇ ಅಡಿಗಳಷ್ಟು ದೂರದಲ್ಲಿ ಸ್ಥಾಪಿಸಲಾಗಿದ್ದ ತಡೆಬೇಲಿಗಳ ಸಮೀಪ ಅವರನ್ನು ಹರ್ಯಾಣ ಪೊಲೀಸರು ತಡೆದರು. ಆಗ ರೈತರು ಪ್ರತಿಭಟಿಸಿದಾಗ ಅವರನ್ನು ಚದುರಿಸಲು ಅಶ್ರುವಾಯು ಶೆಲ್ಗಳನ್ನು ಸಿಡಿಸಲಾಯಿತೆಂದು ಮೂಲಗಳು ತಿಳಿಸಿವೆ. ತಮ್ಮ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನೂರಾರು ರೈತರು ಕಳೆದ 10 ತಿಂಗಳುಗಳಿಂದ ಶಂಭುಗಡಿಯಲ್ಲಿ ಧರಣಿ ನಡೆಸುತ್ತಿದ್ದಾರೆ.
ರೈತರ ಪಾದಯಾತ್ರೆಯ ಹಿನ್ನೆಲೆಯಲ್ಲಿ ಅಂಬಾಲ-ದಿಲ್ಲಿ ಗಡಿಯಲ್ಲಿರುವ ಹರ್ಯಾಣ ಭಾಗದಲ್ಲಿ ಭಾರೀ ಸಂಖ್ಯೆಯಲ್ಲಿ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಭಾರತೀಯ ನಾಗರಿಕ ಸುರಕ್ಷಾ ಸಂಹಿತೆಯ ಸೆಕ್ಷನ್ 163 ರ ಅಡಿ ಅಂಬಾಲಾ ಜಿಲ್ಲಾಡಳಿತವು ನಿಷೇಧಾಜ್ಞೆಯನ್ನು ಜಾರಿಗೊಳಿಸಿದೆ. ಜಿಲ್ಲೆಯಲ್ಲಿ ಐದು ಅಥವಾ ಅದಕ್ಕಿಂತ ಹೆಚ್ಚು ಮಂದಿ ಗುಂಪುಗೂಡುವುದನ್ನು ನಿಷೇಧಿಸಿತ್ತು. ಅವರನ್ನು ಆ್ಯಂಬುಲೆನ್ಸ್ಗಳಲ್ಲಿ ಕರೆದೊಯ್ಯಲಾಯಿತು. ದಿಲ್ಲಿಯತ್ತ ಸಾಗುವ ರಾಷ್ಟ್ರೀಯ ಹೆದ್ದಾರಿ 44ರ ಉದ್ದಕ್ಕೂ ಪೊಲೀಸರು ತಡೆಬೇಲಿಗಳನ್ನು ಇರಿಸಿರುವ ದೃಶ್ಯಗಳ ವೀಡಿಯೊಗಳನ್ನು ಐಎಎನ್ಎಸ್ ಸುದ್ದಿ ಸಂಸ್ಥೆ ಪ್ರಸಾರ ಮಾಡಿದೆ.
ಜಿಲ್ಲೆಯಲ್ಲಿ ಎಲ್ಲಾ ಸರಕಾರಿ ಹಾಗೂ ಖಾಸಗಿ ಶಾಲೆಗಳನ್ನು ಮುಚ್ಚುಗಡೆಗೊಳಿಸಿ ಅಂಬಾಲಾ ಜಿಲ್ಲಾಡಳಿತವು ಆದೇಶ ಹೊರಿಸಿದೆ. ರೈತರು ಪ್ರತಿಭಟನೆಗಾಗಿ ಬೀಡುಬಿಟ್ಚಿರುವ ರಾಷ್ಟ್ರೀಯ ಹೆದ್ದಾರಿ 44ರಲ್ಲಿರುವ ಶಂಭುಗಡಿಯಿಂದ ಪಂಜಾಬ್ನ ರಾಜಪುರ - ಹರ್ಯಾಣದ ಅಂಬಾಲದ ತನಕ ಬಹುಸ್ತರದ ತಡೆಬೇಲಿಗಳನ್ನು ಇರಿಸಲಾಗಿದೆ. ಅಲ್ಲದೆ ಜಲಫಿರಂಗಿಗಳನ್ನೂ ಶಂಭುಗಡಿಯಲ್ಲಿ ನಿಯೋಜಿಸಲಾಗಿದೆ.
ಶಾಂತಿಯುತವಾಗಿ ಜಾಥಾದಲ್ಲಿ ತೆರಳುತ್ತಿದ್ದ ರೈತರ ತಂಡವನ್ನು ತಡೆದಿದ್ದಕ್ಕಾಗಿ ಹರ್ಯಾಣ ಸರಕಾರದ ವಿರುದ್ಧ ರೈತ ನಾಯಕ ಸರ್ವಾನ್ ಸಿಂಗ್ ಪಂದೇರ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಧರಣಿಯು 297ನೇ ದಿನವನ್ನು ಪ್ರವೇಶಿಸಿದೆ ಹಾಗೂ ಖನೌರಿ ಗಡಿಯಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿಯ ನಿರಶನವು 11ನೇ ದಿನವನ್ನು ಪ್ರವೇಶಿಸಿದೆ. ಮಧ್ಯಾಹ್ನ 1:00 ಗಂಟೆಯ ವೇಳೆಗೆ 101 ಮಂದಿ ರೈತರ ಜಾಥಾವು ಶಂಭುಗಡಿಯಿಂದ ದಿಲ್ಲಿಯತ್ತ ತೆರಳಿತ್ತು’’ ಎಂದು ಅವರು ಎಎನ್ಐ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ. ರೈತರ ಜಾಥಾದ ನೇತೃತ್ವವನ್ನು ಸತ್ನಾಮ್ ಸಿಂಗ್ ಪನ್ನೂ, ಸುರೀಂದರ್ ಸಿಂಗ್ ಚೌಟಾಲಾ, ಸುರ್ಜಿತ್ ಸಿಂಗ್ ಫು ಹಾಗೂ ಬಲ್ಜಿಂದರ್ ಸಿಂಗ್ ವಹಿಸಿದ್ದರೆಂದು ಪಂಧೇರ್ ತಿಳಿಸಿದರು. ಪ್ರತಿಭಟನೆ ಆರಂಭಿಸಿ 10 ತಿಂಗಳು ಕಳೆದರೂ, ರೈತರ ಒಂದೇ ಒಂದು ಬೇಡಿಕೆಯನ್ನು ಕೂಡಾ ಕೇಂದ್ರ ಸರಕಾರ ಈಡೇರಿಸಿಲ್ಲವೆಂದು ಅವರು ಅಸಮಾಧಾನ ವ್ಯಕ್ತಪಡಿಸಿದರು.
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನೂರಾರು ರೈತರು ಈ ವರ್ಷ ಫೆಬ್ರವರಿಯಿಂದ ದಿಲ್ಲಿಯ ಶಂಭು ಹಾಗೂ ಖನೌರಿಯ ಗಡಿ ಪಾಯಿಂಟ್ ಗಳಲ್ಲಿ ಧರಣಿ ನಡೆಸುತ್ತಿದ್ದಾರೆ. ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್ಪಿ)ಗೆ ಕಾನೂನಿನ ಖಾತರಿ, ರೈತರು ಹಾಗೂ ಕೃಷಿ ಕಾರ್ಮಿಕರಿಗೆ ಪಿಂಚಣಿ ಹಾಗೂ ಸಾಲಮನ್ನಾ, ಕೃಷಿ ವಿದ್ಯುತ್ ದರದಲ್ಲಿ ಏರಿಕೆ ಮಾಡದಿರುವುದು, ಪ್ರತಿಭಟನಾನಿರತರ ಪ್ರಮುಖ ಬೇಡಿಕೆಗಳಾಗಿವೆ.
2021ರಲ್ಲಿ ಲಖೀಂಪುರ ಖೇರಿ ಹಿಂಸಾಚಾರಾದ ಸಂತ್ರಸ್ತರಿಗೆ ನ್ಯಾಯ ಒದಗಿಸುವುದು, 2013ರ ಭೂಸ್ವಾಧೀನ ಕಾಯ್ದೆಯ ಮರುಸ್ಥಾಪನೆ ಹಾಗೂ 2020-21ರಲ್ಲಿ ನಡೆಸಿದಪ್ರತಿಭಟನೆಯಲ್ಲಿ ಮೃತಪಟ್ಟ ರೈತರ ಕುಟುಂಬಗಳಿಗೆ ಪರಿಹಾರ , ಇವು ಪ್ರತಿಭಟನಾನಿರತ ರೈತರ ಇತರ ಕೆಲವು ಬೇಡಿಕೆಗಳಾಗಿವೆ.
► ಜಾಥಾ ತಾತ್ಕಾಲಿಕ ಸ್ಥಗಿತ
ಹರ್ಯಾಣ ಪೊಲೀಸರು ನಡೆಸಿದ ಅಶ್ರುವಾಯುದಾಳಿಯಲ್ಲಿ ಕೆಲವು ರೈತರಿಗೆ ಗಾಯಗಳಾಗಿರುವುದರಿಂದ ದಿಲ್ಲಿಚಲೋ ಜಾಥಾವನ್ನು ಒಂದು ದಿನದ ಮಟ್ಟಿಗೆ ಅಮಾನತಿನಲ್ಲಿರಿಲಾಗಿದೆಯೆಂದು ರೈತ ನಾಯಕ ಸರ್ವಾನ್ ಸಿಂಗ್ ಪಂಧೇರ್ ತಿಳಿಸಿದ್ದಾರೆ.
ಪೊಲೀಸರು ಅಶ್ರುವಾಯು ಸೆಲ್ಗಳನ್ನು ಸಿಡಿಸಿದ್ದರಿಂದಾಗಿ 5-6 ರೈತರಿಗೆ ಗಾಯಗಳಾಗಿರುವುದಾಗಿ ಅವರು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಇಂದು ಜಾಥಾವನ್ನು ಹಿಂದಕ್ಕೆ ಕರೆಸಿಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.