"ರಾಷ್ಟ್ರಪತಿಗಳನ್ನು ಸಂಸತ್ ಉದ್ಘಾಟನೆಗೆ ಆಹ್ವಾನಿಸಲಾಗಿತ್ತೇ ಎಂಬ ಬಗ್ಗೆ ಅವರ ಕಚೇರಿಯ ಬಳಿಯೇ ಮಾಹಿತಿಯಿಲ್ಲ": ಆರ್ ಟಿ ಐ ಉತ್ತರದಿಂದ ಬಹಿರಂಗ

Update: 2023-06-23 18:14 GMT

ಹೊಸದಿಲ್ಲಿ: ಮೇ 28ರಂದು ನಡೆದಿದ್ದ ನೂತನ ಸಂಸತ್ ಕಟ್ಟಡದ ಉದ್ಘಾಟನೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮುರನ್ನು ಆಹ್ವಾನಿಸಲಾಗಿತ್ತೇ ಎಂಬ ಬಗ್ಗೆ ತನ್ನ ಬಳಿ ಮಾಹಿತಿಯಿಲ್ಲ ಎಂದು ರಾಷ್ಟ್ರಪತಿ ಭವನವು ಗುರುವಾರ ತಿಳಿಸಿದೆ.

ಟಿಎಂಸಿ ವಕ್ತಾರ ಸಾಕೇತ್ ಗೋಖಲೆಯವರು ಆರ್ ಟಿಐ ಕಾಯ್ದೆಯಡಿ ಸಲ್ಲಿಸಿದ್ದ ಅರ್ಜಿಗೆ ನೀಡಿರುವ ಉತ್ತರದಲ್ಲಿ ರಾಷ್ಟ್ರಪತಿ ಭವನವು ಈ ವಿಷಯವನ್ನು ತಿಳಿಸಿದೆ.

ನೂತನ ಕಟ್ಟಡವನ್ನು ಉದ್ಘಾಟಿಸುವಂತೆ ಅಥವಾ ಸಮಾರಂಭದಲ್ಲಿ ಪಾಲ್ಗೊಳ್ಳುವಂತೆ ಲೋಕಸಭಾ ಸ್ಪೀಕರ್, ಪ್ರಧಾನಿ ಅಥವಾ ಇತರ ಯಾವುದೇ ‘ಸೂಕ್ತ ಪ್ರಾಧಿಕಾರ ’ದಿಂದ ಮುರ್ಮು ಅವರು ವಿಧ್ಯುಕ್ತ ಆಹ್ವಾನವನ್ನು ಸ್ವೀಕರಿಸಿದ್ದರೇ ಎಂದು ಗೋಖಲೆ ತನ್ನ ಅರ್ಜಿಯಲ್ಲಿ ಪ್ರಶ್ನಿಸಿದ್ದರು. ನೂತನ ಸಂಸತ್ ಕಟ್ಟಡದ ಉದ್ಘಾಟನೆಯ ಕುರಿತು ರಾಷ್ಟ್ರಪತಿ ಭವನ ಮತ್ತು ಸರಕಾರಿ ಅಧಿಕಾರಿಗಳ ನಡುವಿನ ಎಲ್ಲ ಸಂವಹನಗಳ ವಿವರಗಳನ್ನೂ ಅವರು ಕೋರಿದ್ದರು.

ಲಭ್ಯವಿರುವ ದಾಖಲೆಗಳ ಪ್ರಕಾರ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಕೋರಿಕೆಯ ಮೇರೆಗೆ ನೂತನ ಸಂಸತ್ ಕಟ್ಟಡ ಉದ್ಘಾಟನಾ ಸಮಾರಂಭಕ್ಕೆ ರಾಷ್ಟ್ರಪತಿಗಳು ಸಂದೇಶವನ್ನು ನೀಡಿದ್ದರು ಎಂದು ಗೋಖಲೆಯವರ ಎರಡನೇ ಪ್ರಶ್ನೆಗೆ ಉತ್ತರದಲ್ಲಿ ರಾಷ್ಟ್ರಪತಿ ಭವನವು ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News