ಪತ್ರಿಕೆಗಳು, ಹಣ ಮತ್ತು ಚುನಾವಣೆಗಳು: ಚುನಾವಣಾ ಬಾಂಡ್‌ಗಳನ್ನು ಖರೀದಿಸಿದ್ದ ಮಾಧ್ಯಮಗಳ ಮಾಲಿಕರು

Update: 2024-03-18 14:36 GMT

ಹೊಸದಿಲ್ಲಿ: ಹಿಂದಿ ಸುದ್ದಿವಾಹಿನಿ ‌ʼಟಿವಿ9 ಭಾರತವರ್ಷ್ʼ (TV9 Bharatvarsh) ಆರಂಭಗೊಂಡ ಕೇವಲ ಮೂರೇ ವರ್ಷಗಳ ಬಳಿಕ 2022ರ ಅರ್ಧಕ್ಕೂ ಹೆಚ್ಚಿನ ಅವಧಿಗೆ ಟಿಆರ್‌ಪಿ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿತ್ತು. ಈಗ ಅದು ವಿಭಿನ್ನ ಕಾರಣಗಳಿಗಾಗಿ ಇನ್ನೊಂದು ಟಾಪ್ ಟೆನ್ ಚಾರ್ಟ್‌ನಲ್ಲಿ ಅಗ್ರಣಿಯಾಗಿದೆ.

ಟಿವಿ9 ಭಾರತವರ್ಷದ ಮಾತೃಸಂಸ್ಥೆ ಅಸೋಸಿಯೇಟೆಡ್ ಬ್ರಾಡಕಾಸ್ಟ್‌ನಲ್ಲಿ ಮೇಘಾ ಇಂಜನಿಯರಿಂಗ್ ಆ್ಯಂಡ್ ಇನ್‌ಫ್ರಾಸ್ಟ್ರಕ್ಚರ್ ಶೇ.80ರಷ್ಟು ಪಾಲು ಬಂಡವಾಳವನ್ನು ಹೊಂದಿದೆ. ಮೇಘಾ ಇಂಜನಿಯರಿಂಗ್ ಚುನಾವಣಾ ಬಾಂಡ್‌ಗಳ ಎರಡನೇ ಅತ್ಯಂತ ದೊಡ್ಡ ಖರೀದಿದಾರನೂ ಆಗಿದೆ. ಅದು ಟಿವಿ9 ನೆಟ್‌ವರ್ಕ್ ಮೇಲೆ ಸಂಪೂರ್ಣ ನಿಯಂತ್ರಣವನ್ನು ಹೊಂದಿದೆ.

ದಿನದ 24 ಗಂಟೆಯೂ ಯುದ್ಧಗಳ ವರದಿಗಾರಿಕೆ ತನ್ನ ಹೆಚ್ಚಿನ ಟಿಆರ್‌ಪಿಗೆ ಕಾರಣವೆಂದು ಟಿವಿ9 ನೆಟ್‌ವರ್ಕ್ ಪ್ರತಿಪಾದಿಸಿದೆಯಾದರೂ ಅದು ರೇಟಿಂಗ್‌ಗಳಲ್ಲಿ ಅಕ್ರಮಗಳನ್ನು ನಡೆಸಿದೆ ಎನ್ನುವುದು ಎದುರಾಳಿ ಸುದ್ದಿವಾಹಿನಿಗಳ ಆರೋಪವಾಗಿದೆ.

ಚುನಾವಣಾ ಬಾಂಡ್‌ಗಳನ್ನು ಖರೀದಿಸಿರುವ ಕಂಪನಿಗಳೊಂದಿಗೆ ನಂಟು ಹೊಂದಿರುವುದು ಟಿವಿ9 ನೆಟ್‌ವರ್ಕ್ ಒಂದೇ ಅಲ್ಲ. ರೇಡಿಯೊ ಕೇಂದ್ರಗಳು ಮತ್ತು ಟಿವಿ ನೆಟ್‌ವರ್ಕ್‌ಗಳಿಂದ ಹಿಡಿದು ವೆಬ್ ಪೋರ್ಟಲ್‌ಗಳು ಮತ್ತು ಒಂದು ನಿಯತಕಾಲಿಕದವರೆಗೆ, ಹೀಗೆ ವಿವಿಧ ಮಾಧ್ಯಮ ಸಂಸ್ಥೆಗಳು ಒಟ್ಟು 1086.5 ಕೋಟಿ ರೂ.ಗಳ ಚುನಾವಣಾ ಬಾಂಡ್‌ಗಳನ್ನು ಖರೀದಿಸಿರುವ ಕಂಪನಿಗಳೊಂದಿಗೆ ಗುರುತಿಸಿಕೊಂಡಿವೆ.

ಕಳೆದ ವರ್ಷದ ಜುಲೈನಲ್ಲಿ ಮೂರು ಕೋಟಿ ರೂ. ಮೌಲ್ಯದ ಬಾಂಡ್‌ಗಳನ್ನು ಖರೀದಿಸಿದ್ದ ಆರ್‌ಪಿಎಸ್‌ಜಿ ವೆಂಚರ್ಸ್ ಇಂಗ್ಲೀಷ್ ಸಾಪ್ತಾಹಿಕ ‘ಓಪನ್’ನ (Open magazine) ಒಡೆತನವನ್ನು ಹೊಂದಿದೆ. ಆರ್‌ಪಿಜಿಎಸ್ ವೆಂಚರ್ಸ್ ಆರ್‌ಪಿ-ಸಂಜೀವ ಗೋಯೆಂಕಾ ಗ್ರೂಪ್‌ಗೆ ಸೇರಿದೆ.

2019ರಲ್ಲಿ ಕೇವಲ ಆರು ತಿಂಗಳುಗಳಲ್ಲಿ ಓಪನ್‌ನ 29 ಕವರ್‌ಪೇಜ್‌ಗಳ ಪೈಕಿ 10ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರೇ ಕಾಣಿಸಿಕೊಂಡಿದ್ದರು.

ಆರ್‌ಪಿ-ಸಂಜೀವ ಗೋಯೆಂಕಾ ಗ್ರೂಪ್ 2020 ಜುಲೈನಲ್ಲಿ ವೀಡಿಯೊ ನ್ಯೂಸ್ ಆ್ಯಪ್ ಎಡಿಟರ್ಜಿ (Editorji) ಯಲ್ಲಿ ಹೆಚ್ಚಿನ ಪಾಲು ಬಂಡವಾಳವನ್ನು ಖರೀದಿಸಿತ್ತು. ಈ ಗ್ರೂಪ್ ಫಾರ್ಚ್ಯೂನ್ ಇಂಡಿಯಾವನ್ನೂ ಪ್ರಕಟಿಸುತ್ತದೆ. ಇದು ಗ್ಲೋಬಲ್ ಮ್ಯಾಗಝಿನ್ ಆಗಿದ್ದು ನಾಯಕರ ವಾರ್ಷಿಕ ಶ್ರೇಣಿಗಳನ್ನು ಪ್ರಕಟಿಸುತ್ತದೆ.

ಗ್ರೂಪ್ ಮ್ಯೂಸಿಕ್ ಲೇಬಲ್ ʼಸಾರೆಗಮಾʼ (Saregama)ದ ಒಡೆತನವನ್ನೂ ಹೊಂದಿದೆ. ಆರ್‌ಪಿಎಸ್‌ಜಿ ಲೈಫ್‌ಸ್ಟೈಲ್ ಮೀಡಿಯಾ ಈ ವರ್ಷದ ಉತ್ತರಾರ್ಧದಲ್ಲಿ ಎಸ್ಕೈರ್ ಮತ್ತು ಹಾಲಿವುಡ್ ರಿಪೋರ್ಟರ್ ಮ್ಯಾಗಝಿನ್‌ಗಳನ್ನು ಆರಂಭಿಸುವ ನಿರೀಕ್ಷೆಯಿದೆ.

ಎಂಎನ್ ಮೀಡಿಯಾ ವೆಂಚರ್ಸ್ 5 ಕೋಟಿ ರೂ. ಮತ್ತು ನೆಕ್ಸ್‌ಜಿ ಡಿವೈಸಸ್ 35 ಕೋಟಿ ರೂ.ಗಳ ಚುನಾವಣಾ ಬಾಂಡ್‌ಗಳನ್ನು ಖರೀದಿಸಿವೆ. ಈ ಸಂಸ್ಥೆಗಳ ಒಡೆತನವನ್ನು ಹೊಂದಿರುವ ಮೀಡಿಯಾ ಮ್ಯಾಟ್ರಿಕ್ಸ್ ವರ್ಲ್ಡ್‌ವೈಡ್‌ನಲ್ಲಿ ರಿಲಾಯನ್ಸ್‌ನ ಅಂಗಸಂಸ್ಥೆ ತೀಸ್ತಾ ರಿಟೇಲ್‌ನ ಘಟಕವಾಗಿರುವ ಓಜಸಿ ಟ್ರೇಡಿಂಗ್ ಕನಿಷ್ಠ ಶೇ.5ರಷ್ಟು ಪಾಲು ಬಂಡವಾಳವನ್ನು ಹೊಂದಿದೆ.

48 ಎಫ್‌ಎಂ ರೇಡಿಯೊ ಕೇಂದ್ರಗಳು, ಐದು ಮ್ಯಾಗಝಿನ್‌ಗಳು,ಎರಡು ವೃತ್ತಪತ್ರಿಕೆಗಳು, ಐದು ಡಿಸ್ಟ್ರಿಬ್ಯೂಷನ್ ಕಂಪನಿಗಳು, ಒಟಿಟಿ ವೇದಿಕೆಗಳು, ಡಿಟಿಚ್ ಸೇವಾ ಪೂರೈಕೆದಾರರು, ಟಿವಿ ವಾಹಿನಿಗಳು ಮತ್ತು ಐಪಿಎಲ್ ತಂಡದ ಒಡೆತನ ಹೊಂದಿರುವ ಚೆನ್ನೈನ ಸನ್ ಟಿವಿ (Sun TV)ಗೆ ಸೇರಿದ ಎರಡು ರೇಡಿಯೊ ಕೇಂದ್ರಗಳು ಒಟ್ಟು ಏಳು ಕೋಟಿ ರೂ.ಗಳ ಚುನಾವಣಾ ಬಾಂಡ್‌ಗಳನ್ನು ಖರೀದಿಸಿವೆ.

ವಿವಿಧ ಉದ್ಯಮಗಳಲ್ಲಿ ತೊಡಗಿಕೊಂಡಿರುವ ಗೋವಾದ ಡೆಂಪೋ ಇಂಡಸ್ಟ್ರೀಸ್ ಚುನಾವಣಾ ಬಾಂಡ್‌ಗಳ ಮೂಲಕ ರಾಜಕೀಯ ಪಕ್ಷಗಳಿಗೆ 1.5 ಕೋಟಿ ರೂ.ಗಳ ದೇಣಿಗೆಗಳನ್ನು ನೀಡಿದೆ. ಕಂಪನಿಯು ಗೋವಾದ ಪ್ರಮುಖ ಇಂಗ್ಲಿಷ್ ದಿನಪತ್ರಿಕೆ ನವಹಿಂದ್ ಟೈಮ್ಸ್ (Navhind Times) ಮತ್ತು ಮರಾಠಿ ದೈನಿಕ ನವಪ್ರಭಾದ (Navprabha) ಒಡೆತನವನ್ನು ಹೊಂದಿದೆ.

ಕೃಪೆ: The News Minute, Scroll.in, Newslaundry

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ತನಿಷ್ಕಾ ಸೋಧಿ

contributor

Similar News