ರಾಹುಲ್ ಗಾಂಧಿ ಮದ್ಯ, ಡ್ರಗ್ಸ್ ಸೇವಿಸಿ ಸಂಸತ್ತಿಗೆ ಬರುತ್ತಾರೆ : ಕೀಳುಮಟ್ಟದ ಹೇಳಿಕೆ ನೀಡಿದ ಕಂಗನಾ ರಾಣಾವತ್

Update: 2024-08-01 17:48 GMT

PC : PTI

ಹೊಸದಿಲ್ಲಿ : ಕಾಂಗ್ರೆಸ್‌ ಸಂಸದ ಮತ್ತು ಲೋಕಸಭೆಯ ವಿಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ಮದ್ಯ ಅಥವಾ ಡ್ರಗ್ಸ್ ಸೇವಿಸಿ ಸಂಸತ್ತಿಗೆ ಬರುತ್ತಾರೆ. ಅವರನ್ನು ಪರೀಕ್ಷೆ ಮಾಡಬೇಕು ಎಂದು ಹಿಮಾಚಲ ಪ್ರದೇಶದ ಮಂಡಿ ಸಂಸದೆ, ನಟಿ ಕಂಗನಾ ರಾಣಾವತ್ ಕೀಳುಮಟ್ಟದ ಹೇಳಿಕೆ ನೀಡಿದ್ದಾರೆ.

ರಾಹುಲ್‌ ಗಾಂಧಿ ಅವರು 'ದೇಶವನ್ನು ಚಕ್ರವ್ಯೂಹದಲ್ಲಿ ಸಿಲುಕಿಸಲಾಗಿದೆ' ಎಂದು ಆರೋಪಿಸಿ ಲೋಕಸಭೆಯಲ್ಲಿ ಮಾಡಿದ್ದ ಭಾಷಣದ ಬಗ್ಗೆ ಕಂಗನಾ ರಾಣಾವತ್‌ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, 'ಇಡೀ ದೇಶ ಪ್ರಧಾನಿಯವರನ್ನು ಆಯ್ಕೆ ಮಾಡಿದೆ. ಪ್ರಧಾನಿಯವರದ್ದು ಪ್ರಜಾಸತ್ತಾತ್ಮಕವಾಗಿ ಆಯ್ಕೆ. ರಾಹುಲ್‌ ಗಾಂಧಿಯವರು ಪ್ರಜಾಪ್ರಭುತ್ವವನ್ನು ಗೌರವಿಸುವುದಿಲ್ಲವೇ? ಲಿಂಗ, ವಯಸ್ಸು, ಸಾಮಾಜಿಕ ಸ್ಥಾನಮಾನ ಅಥವಾ ಜಾತಿಯ ಆಧಾರದ ಮೇಲೆ ಪ್ರಧಾನ ಮಂತ್ರಿಯನ್ನು ಆಯ್ಕೆ ಮಾಡಲಾಗುತ್ತದೆಯೇ? ಈ ರೀತಿಯ ಹೇಳಿಕೆಗಳನ್ನು ನೀಡುವ ಮೂಲಕ ರಾಹುಲ್ ಗಾಂಧಿ ಸಂವಿಧಾನವನ್ನು ನಿರಂತರವಾಗಿ ಅವಮಾನಿಸಿದ್ದಾರೆ. ಮುಂದೊಂದು ದಿನ ಅವರು ಪ್ರಧಾನಿಯನ್ನು ಚರ್ಮದ ಬಣ್ಣದ ಆಧಾರದಲ್ಲಿ ಆಯ್ಕೆ ಮಾಡಲಾಗಿದೆ ಎಂದೂ ಹೇಳಲೂಬಹುದು' ಎಂದು ಕಂಗನಾ ಹೇಳಿದ್ದಾರೆ.

“'ನಾನು ನೂತನ ಸಂಸದೆ. ರಾಹುಲ್‌ ಗಾಂಧಿ ಸಂಸತ್ತಿಗೆ ಬರುವ ಸ್ಥಿತಿ ಮತ್ತು ಅಲ್ಲಿ ಅವರು ನೀಡುವ ಹೇಳಿಕೆಗಳನ್ನು ನೋಡಿ ಸಂಪೂರ್ಣವಾಗಿ ಆಘಾತಗೊಂಡಿದ್ದೇನೆ. ರಾಹುಲ್‌ ಗಾಂಧಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಗೌರವವಿಲ್ಲವೇ? ಸಂಸತ್ತಿನಲ್ಲಿ ನಿನ್ನೆ ಅವರು ಕಾಮಿಡಿ ಶೋ ನೀಡಿದ್ದಾರೆ. ಅವರಿಗೆ ನೀತಿ ನಿಯಮಗಳ ಅರಿವಿಲ್ಲ. ರಾಹುಲ್‌ ಗಾಂಧಿ ಮದ್ಯ,ಡ್ರಗ್ಸ್ ಸೇವಿಸಿ ಸಂಸತ್ತಿಗೆ ಬರುತ್ತಾರೆ. ಅವರನ್ನು ಪರೀಕ್ಷಿಸಬೇಕು” ಎಂದು ಮಂಡಿ ಸಂಸದೆ ಆರೋಪಿಸಿದ್ದಾರೆ.

ಮಹಾಭಾರತದ ಚಕ್ರವ್ಯೂಹ ಯುದ್ಧವನ್ನು ಉಲ್ಲೇಖಿಸಿ ಇತ್ತೀಚೆಗೆ ಸಂಸತ್ತಿನಲ್ಲಿ ಮಾತನಾಡಿದ್ದ ರಾಹುಲ್‌, 'ಸಾವಿರಾರು ವರ್ಷಗಳ ಹಿಂದೆ ಹರಿಯಾಣದ ಕುರುಕ್ಷೇತ್ರದಲ್ಲಿ ಆರು ಮಂದಿ ಸೇರಿ ಚಕ್ರವ್ಯೂಹ ರಚಿಸಿ ಅಭಿಮನ್ಯುವನ್ನು ಕೊಲೆ ಮಾಡಿದ್ದರು. ಚಕ್ರವ್ಯೂಹ ಎಂದರೆ ಭಯ ಹಾಗೂ ಹಿಂಸೆ. ಇಂದು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಆರ್‌ಎಸ್ಎಸ್‌ ಮುಖ್ಯಸ್ಥ ಮೋಹನ್ ಭಾಗವತ್‌, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ಡೊಭಾಲ್, ಉದ್ಯಮಪತಿಗಳಾದ ಅಂಬಾನಿ ಹಾಗೂ ಅದಾನಿ ಸೇರಿ ದೇಶವನ್ನು ಚಕ್ರವ್ಯೂಹದಲ್ಲಿ ಸಿಲುಕಿಸಿದ್ದಾರೆ. ಚಕ್ರವ್ಯೂಹವನ್ನು ಪದ್ಮವ್ಯೂಹವೆಂದೂ ಕರೆಯುತ್ತಾರೆ. ಅದು ಕಮಲದ ಹೂವಿನ ಹಾಗೆ ಕಾಣಿಸುತ್ತದೆ. ಕಮಲದ ಹೂವಿನ ಚಿತ್ರವನ್ನು ಪ್ರಧಾನಿ ಮೋದಿಯವರು ಎದೆಗೆ ಸಿಕ್ಕಿಸಿಕೊಂಡು ಓಡಾಡುತ್ತಾರೆ' ಎಂದು ಅವರು ಹೇಳಿಕೆ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News