ತರಕಾರಿ ವ್ಯಾಪಾರಿಗಳೊಂದಿಗೆ ರಾಹುಲ್ ಗಾಂಧಿ ಸಂವಾದ: ಹಣದುಬ್ಬರ ಕುರಿತು ಕೇಂದ್ರದ ವಿರುದ್ಧ ವಾಗ್ದಾಳಿ

Update: 2023-08-07 15:59 GMT

ಹೊಸದಿಲ್ಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ದಿಲ್ಲಿಯ ಆಝಾದ್ಪುರ ಮಂಡಿಯಲ್ಲಿ ಕೆಲವು ತರಕಾರಿ ಮತ್ತು ಹಣ್ಣು ಮಾರಾಟಗಾರರು ಹಾಗೂ ವ್ಯಾಪಾರಿಗಳೊಂದಿಗೆ ತನ್ನ ಸಂವಾದದ ವೀಡಿಯೊವೊಂದನ್ನು ಸೋಮವಾರ ಶೇರ್ ಮಾಡಿಕೊಂಡಿದ್ದಾರೆ. ಇದೇ ವೇಳೆ ಹೆಚ್ಚುತ್ತಿರುವ ಹಣದುಬ್ಬರ ಕುರಿತು ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿರುವ ಅವರು,ಅದು ಬಡವರ ಧ್ವನಿಗಳಿಗೆ ಕಿವಿಗೊಡುತ್ತಿಲ್ಲ ಎಂದು ಆರೋಪಿಸಿದ್ದಾರೆ.

ಮಾರುಕಟ್ಟೆಯಲ್ಲಿ ಹೆಚ್ಚುತ್ತಲೇ ಇರುವ ಆಹಾರ ಸಾಮಗ್ರಿಗಳ ಬೆಲೆಗಳ ಕುರಿತು ಸಾರ್ವಜನಿಕರು ಮತ್ತು ಆಡಳಿತಾರೂಢ ಸರಕಾರದ ಗಮನ ಸೆಳೆಯಲು ರಾಹುಲ್ ಕಳೆದ ಮಂಗಳವಾರ ಆಝಾದ್ಪುರ ಮಂಡಿಗೆ ಭೇಟಿ ನೀಡಿದ್ದರು.

ಸಂವಾದದ ವೀಡಿಯೊ ತುಣುಕನ್ನು ಶೇರ್ ಮಾಡಿಕೊಂಡಿರುವ ರಾಹುಲ್,ಮಾರುಕಟ್ಟೆಯಲ್ಲಿ ಹಿಂಜರಿತವೇಕಿದೆ ಎಂದು ಪ್ರಶ್ನಿಸಿದ್ದಾರೆ. ‘ಸಮಯವು ಬದಲಾಗಲಿದೆ,ಭಾರತವು ಒಗ್ಗೂಡಲಿದೆ, ಬಡವರ ಕಂಬನಿಗಳು ಒರೆಸಲ್ಪಡಲಿವೆ’ ಎಂದೂ ಅವರು ಟ್ವೀಟ್ ಮಾಡಿದ್ದಾರೆ.

ತಾನು ಮಾರುಕಟ್ಟೆಯಲ್ಲಿ ಮಾತುಕತೆ ನಡೆಸಿದ ಕಾರ್ಮಿಕನ ಗೋಳಿನ ಕಥೆಯನ್ನೂ ರಾಹುಲ್ ಬರೆದಿದ್ದಾರೆ. ‘ತನ್ನ ಕೆಲಸದಿಂದಾಗಿ ಕಳೆದ ಒಂದು ವರ್ಷದಿಂದಲೂ ತನ್ನ ಮನೆಗೆ ತೆರಳಲು,ತನ್ನ ಕುಟುಂಬವನ್ನು ಭೇಟಿಯಾಗಲು ಜಟಾಶಂಕರಗೆ ಸಾಧ್ಯವಾಗಿಲ್ಲ.ಅವರು ಹೇಗೆ ಹೋಗುತ್ತಾರೆ? ಕೆಲಸವನ್ನು ತಪ್ಪಿಸಿದರೆ ಅವರ ವೇತನ ಕಡಿತವಾಗುತ್ತದೆ ಮತ್ತು ಇದರಿಂದ ಈ ಹಣದುಬ್ಬರದಲ್ಲಿ ಬದುಕುಳಿಯುವುದು ಅವರಿಗೆ ಇನ್ನಷ್ಟು ಕಷ್ಟವಾಗುತ್ತದೆ ’ಎಂದಿದ್ದಾರೆ.

ನಷ್ಟದಿಂದಾಗಿ ವಾರಕ್ಕೆ ಎರಡು ಅಥವಾ ಮೂರು ರಾತ್ರಿ ತಾನು ಖಾಲಿ ಹೊಟ್ಟೆಯಲ್ಲೇ ಮಲಗುವಂತಾಗಿದೆ ಎಂದು ಅಂಗಡಿಕಾರನೋರ್ವ ತನ್ನ ಅಳಲು ತೋಡಿಕೊಂಡ. ದೇಶದ ಬಡವರ ಸಮಸ್ಯೆಗಳನ್ನು ಬಗೆಹರಿಸುವುದಿರಲಿ,ಈ ಸರಕಾರವು ಅವರ ಧ್ವನಿಗಳನ್ನೂ ಆಲಿಸುತ್ತಿಲ್ಲ ಎಂದು ರಾಹುಲ್ ಬರೆದಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News