ಮಹಿಳೆಯರೇ ನಿರ್ವಹಿಸುವ ಚಾಕಲೆಟ್ ಫ್ಯಾಕ್ಟರಿಗೆ ಭೇಟಿ ನೀಡಿ ಚಾಕಲೆಟ್ ತಯಾರಿಸಿದ ರಾಹುಲ್ ಗಾಂಧಿ: ವಿಡಿಯೋ ವೈರಲ್
ಊಟಿ: ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ರವಿವಾರ ತಮಿಳುನಾಡಿನ ಊಟಿಯಲ್ಲಿರುವ ಚಾಕಲೆಟ್ ಕಾರ್ಖಾನೆಗೆ ಭೇಟಿ ನೀಡಿದ ವೀಡಿಯೊವನ್ನು ಹಂಚಿಕೊಂಡಿದ್ದಾರೆ.
ಮೋಡಿಸ್ ಚಾಕಲೆಟ್ ಕಾರ್ಖಾನೆಯ ಕೆಲಸಗಾರರೊಂದಿಗೆ ರಾಹುಲ್ ಗಾಂಧಿ ಚಾಕಲೆಟ್ ತಯಾರಿಸಿದ್ದು, ಇದೇ ವೇಳೆ ಸಿಹಿ ಮಿಠಾಯಿ ವಸ್ತುಗಳ ಮೇಲಿನ ಜಿಎಸ್‌ಟಿ ಕುರಿತು ಚರ್ಚಿಸಿದ್ದಾರೆ.
ಚಾಕಲೆಟ್ ಫ್ಯಾಕ್ಟರಿಯ ವಿವಿಧ ಕೆಲಸಗಳನ್ನು ಮಾಡಲು 70 ಮಹಿಳೆಯರನ್ನು ಮೋಡಿಸ್ ಸಂಸ್ಥೆ ನೇಮಿಸಿಕೊಂಡಿದ್ದು, ಚಾಕಲೆಟ್‌ಗಳನ್ನು ಹೇಗೆ ತಯಾರಿಸಲಾಗುತ್ತದೆ ಎಂಬ ವಿವರವಾದ ಮಾಹಿತಿಯನ್ನು ರಾಹುಲ್ ಗಾಂಧಿ ಕೇಳಿ ತಿಳಿದುಕೊಂಡಿದ್ದಾರೆ.
ʼ70 ಮಹಿಳೆಯರ ಅದ್ಭುತ ತಂಡವು, ಊಟಿಯ ಖ್ಯಾತ ಚಾಕೊಲೇಟ್ ಫ್ಯಾಕ್ಟರಿಗಳಲ್ಲಿ ಒಂದನ್ನು ನಿರ್ವಹಿಸುತ್ತಿದೆ. ಮೋಡಿಸ್ ಚಾಕಲೆಟ್ ಸಂಸ್ಥೆಯು ಭಾರತದ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳ ಮಹಾನ್ ಸಾಮರ್ಥ್ಯಕ್ಕೆ ಗಮನಾರ್ಹವಾದ ಸಾಕ್ಷಿಯಾಗಿದೆ. ನನ್ನ ಇತ್ತೀಚಿನ ನೀಲಗಿರಿ ಭೇಟಿಯ ಸಂದರ್ಭದಲ್ಲಿ ತೆರೆದುಕೊಂಡದ್ದು ಇಲ್ಲಿದೆ” ಎಂದು ಚಾಕಲೆಟ್ ಫ್ಯಾಕ್ಟರಿಗೆ ಭೇಟಿ ನೀಡಿರುವ ವಿಡಿಯೋವನ್ನು ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ.
ರಾಹುಲ್ ಗಾಂಧಿಯವರು ಕೇರಳದ ವಯನಾಡ್‌ನಲ್ಲಿರುವ ತಮ್ಮ ಲೋಕಸಭಾ ಕ್ಷೇತ್ರಕ್ಕೆ ಹೋಗುತ್ತಿರುವಾಗ ಊಟಿಗೂ ಭೇಟಿ ನೀಡಿದ್ದರು
ಜಿಎಸ್‌ಟಿಯನ್ನು "ಗಬ್ಬರ್ ಸಿಂಗ್ ಟ್ಯಾಕ್ಸ್" ಎಂದು ಮತ್ತೆ ಕರೆದ ಅವರು, "ಭಾರತದಾದ್ಯಂತ ಇರುವ ಅಸಂಖ್ಯಾತ ಸಣ್ಣ ಮತ್ತು ಮಧ್ಯಮ ವ್ಯವಹಾರಗಳಂತೆ, ಮೋಡಿಸ್ ಕೂಡಾ “ಗಬ್ಬರ್ ಸಿಂಗ್ ಟ್ಯಾಕ್ಸ್” ಜೊತೆಗೆ ಸೆಣಸುತ್ತಿದೆ” ಎಂದು ಅವರು ಹೇಳಿದ್ದಾರೆ.
"ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯಕ್ಕೆ ಹಾನಿಯಾಗುವಂತೆ ಸರ್ಕಾರವು ದೊಡ್ಡ ಸಂಸ್ಥೆಗಳಿಗೆ ಒಲವು ತೋರುತ್ತಿದೆ” ಆರೋಪಿಸಿದ ಅವರು, ಎಂಎಸ್‌ಎಂಇಗಳನ್ನು ರಕ್ಷಿಸಲು ಒಂದೇ ಜಿಎಸ್‌ಟಿ ದರ ವಿಧಿಸಲು ಕರೆ ನೀಡಿದರು.