ಗುಜರಾತ್ ನಿಂದ ಮೇಘಾಲಯದವರೆಗಿನ ಎರಡನೇ ಹಂತದ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲಿರುವ ರಾಹುಲ್ ಗಾಂಧಿ

Update: 2023-08-08 16:45 GMT

ಮುಂಬೈ: ಗುಜರಾತ್ ನಿಂದ ಈಶಾನ್ಯ ರಾಜ್ಯವಾದ ಮೇಘಾಲಯದವರೆಗೆ ರಾಹುಲ್ ಗಾಂಧಿ ಅವರು ಎರಡನೆ ಹಂತದ ಭಾರತ್ ಜೋಡೋ ಯಾತ್ರೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಮಾಧ್ಯಮ ಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಹಾರಾಷ್ಟ್ರ ಕಾಂಗ್ರೆಸ್ ಪಕ್ಷದ ಮುಖ್ಯಸ್ಥ ನಾನಾ ಪಟೋಲೆ ಈ ಸುದ್ದಿಯನ್ನು ದೃಢಪಡಿಸಿದ್ದು, ಪಕ್ಷದ ನಾಯಕರು ರಾಜ್ಯದೊಳಗೆ ಭಾರತ್ ಜೋಡೋ ಯಾತ್ರೆಗೆ ಸಮಾನಾಂತರವಾಗಿ ಮತ್ತೊಂದು ಪಾದಯಾತ್ರೆಯನ್ನು ಕೈಗೊಳ್ಳಲಿದ್ದಾರೆ ಎಂದು ವರದಿಗಾರರಿಗೆ ತಿಳಿಸಿದ್ದಾರೆ ಎಂದು hindustantimes.com ವರದಿ ಮಾಡಿದೆ.

‘ರಾಹುಲ್ ಗಾಂಧಿಯವರ ಎರಡನೆ ಹಂತದ ಭಾರತ್ ಜೋಡೋ ಯಾತ್ರೆಯು ಗುಜರಾತ್ ನಿಂದ ಮೇಘಾಲಯದವರೆಗೆ ನಡೆಯಲಿದೆ’ ಎಂದು ಪಟೋಲೆ ಹೇಳಿದ್ದಾರೆ.

ರಾಹುಲ್ ಗಾಂಧಿ ಈ ಯಾತ್ರೆಯಲ್ಲಿ ಪಶ್ಚಿಮ ರಾಜ್ಯಗಳ ವಿವಿಧ ಭಾಗಗಳಲ್ಲಿ ಸಂಚರಿಸಲಿದ್ದಾರೆ.

ಭಾರತ್ ಜೋಡೋ ಯಾತ್ರೆಯ ಮೊದಲ ಹಂತದಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ರಾಹುಲ್ ಗಾಂಧಿ ಸರಿಸುಮಾರು 4,000 ಕಿಮೀಯನ್ನು ಕ್ರಮಿಸಿದ್ದರು.

ಕಳೆದ ವರ್ಷ ಸೆಪ್ಟೆಂಬರ್ 7ರಂದು ಕನ್ಯಾಕುಮಾರಿಯಿಂದ ಪ್ರಾರಂಭಗೊಂಡಿದ್ದ ಭಾರತ್ ಜೋಡೋ ಯಾತ್ರೆಯು 3,970 ಕಿಮೀ ದೂರ, 12 ರಾಜ್ಯಗಳು ಹಾಗೂ ಎರಡು ಕೇಂದ್ರಾಡಳಿತ ಪ್ರದೇಶಗಳ ಮೂಲಕ ಹಾದು ಹೋಗಿ ಜನವರಿ 30ರಂದು ಶ್ರೀನಗರದಲ್ಲಿ ಸಮಾರೋಪಗೊಂಡಿತ್ತು. ಈ ಯಾತ್ರೆಯು 130ಕ್ಕೂ ಹೆಚ್ಚು ದಿನಗಳ ಕಾಲ ನಡೆದಿತ್ತು.

ಹೀಗಿದ್ದೂ, ಎರಡನೆ ಹಂತದ ಯಾತ್ರೆಯ ಹೊಸ ಮಾರ್ಗ ಹಾಗೂ ದಿನಾಂಕಗಳ ಕುರಿತ ಯಾವುದೇ ವಿವರಗಳು ಈವರೆಗೆ ದೃಢಪಟ್ಟಿಲ್ಲ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News