ನಿಮ್ಮ ಮದುವೆ ಯಾವಾಗ ಎಂದು ಕೇಳಿದ ಮೆಕ್ಯಾನಿಕ್:‌ ರಾಹುಲ್‌ ಗಾಂಧಿ ನೀಡಿದ ಉತ್ತರವೇನು ನೋಡಿ

Update: 2023-07-09 12:45 GMT
Screengrab : Twitter / @RahulGandhi

ಹೊಸದಿಲ್ಲಿ: ದಿಲ್ಲಿಯ ಕರೋಲ್ ಬಾಗ್ ನಲ್ಲಿರುವ ಗ್ಯಾರೇಜ್ ಗಳಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ದಿಢೀರ್ ಭೇಟಿ ನೀಡಿ, ಮೆಕ್ಯಾನಿಕ್‌ಗಳೊಂದಿಗೆ ಸಂವಾದ ನಡೆಸಿರುವ ಸಂಪೂರ್ಣ ವಿಡಿಯೋ ಇಂದು ಬಿಡುಗಡೆಯಾಗಿದೆ.

ಬೈಕ್‌ನ ಸರ್ವಿಸ್‌ ಮಾಡಿದ ರಾಹುಲ್ ಗಾಂಧಿ ಅಂಗಡಿಗಳಲ್ಲಿ ಕೆಲಸ ಮಾಡುವವರಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಆಲಿಸಿದ್ದಾರೆ.

ಕರೋಲ್ ಬಾಗ್ ನಲ್ಲಿ ಬೈಕ್ ಸರ್ವಿಸ್ ಮಾಡುತ್ತಿದ್ದಾಗ ಮೆಕ್ಯಾನಿಕ್ ಒಬ್ಬರು ನಿಮ್ಮ ಮದುವೆ ಯಾವಾಗ ಎಂದು ರಾಹುಲ್ ಗಾಂಧಿ ಬಳಿ ಕೇಳಿದ್ದು, ಇದಕ್ಕೆ ಮುಗುಳ್ನಕ್ಕ ರಾಹುಲ್, ನೋಡೋಣ ಎಂದುತ್ತರಿಸಿದ್ದಾರೆ.

ರಾಹುಲ್ ಮೆಕ್ಯಾನಿಕ್ ಕಡೆ ತಿರುಗಿ ನಿನಗೆ ಮದುವೆ ಆಯ್ತೇ ಎಂದು ಮರು ಪ್ರಶ್ನಿಸಿದ್ದು, ಅದಕ್ಕೆ ಮೆಕ್ಯಾನಿಕ್‌, ಅಪ್ಪ ಹುಡುಗಿ ನೋಡು ಅಂದಿದ್ದಾರೆ, ಈಗ ಸಂಬಳ ಕಡಿಮೆ. ನಾವು ತಿಂಗಳಿಗೆ 14-15 ಸಾವಿರ ಸಂಪಾದಿಸುತ್ತೇವೆ, ಈ ಮೊತ್ತದಲ್ಲಿ ನಾವು ನಮ್ಮ ಕುಟುಂಬವನ್ನು ಹೇಗೆ ನಡೆಸುತ್ತೇವೆ ಎಂದು ಪ್ರಶ್ನಿಸಿದ್ದಾರೆ.

ನಿಮ್ಮ ಬಳಿ ಯಾವ ಬೈಕ್ ಇದೆ ಎಂದು ರಾಹುಲ್‌ಗೆ ಮೆಕ್ಯಾನಿಕ್ ಕೇಳಿದ್ದು, ʼನನ್ನ ಬಳಿ ಕೆಟಿಎಂ 390 ಇದೆ, ಆದರೆ, ಸೆಕ್ಯೂರಿಟಿಯವರು ಓಡಾಡಲು ಬಿಡದ ಕಾರಣ ಬೈಕ್ ಓಡಿಸಲು ಸಾಧ್ಯವಾಗುತ್ತಿಲ್ಲʼ ಎಂಬ ರಾಹುಲ್ ಹೇಳಿದ್ದಾರೆ.

ರಾಹುಲ್ ಗಾಂಧಿ ತೆರಳಿದ ಬಳಿಕ ಮಾತನಾಡಿದ ಮೆಕ್ಯಾನಿಕ್, ರಾಹುಲ್ ಗಾಂಧಿಯೇ ನಮ್ಮನ್ನು ಭೇಟಿ ಮಾಡಲು ಬಂದಿದ್ದರು, ಬಡವರು ಹೇಗೆ ಬದುಕುತ್ತಿದ್ದಾರೆ ಎಂದು ನಮ್ಮಿಂದ ತಿಳಿದುಕೊಂಡಿದ್ದಾರೆ ಎಂದು ಅವರು ಹೇಳಿದ್ದಾರೆ.

ರಾಹುಲ್ ಜೊತೆ ಮುಖಾಮುಖಿಯಾಗಿ ಟೀ ಕುಡಿಯಬಹುದು ಎಂದು ನಾವು ಅಂದುಕೊಂಡಿರಲಿಲ್ಲ ಎಂದು ಮತ್ತೊಬ್ಬ ಮೆಕ್ಯಾನಿಕ್ ಹೇಳಿದ್ದಾರೆ.

ʼರಾಹುಲ್ ಗಾಂಧಿ ಯಾವುದೇ ರಾಜಕೀಯದ ಬಗ್ಗೆ ಮಾತನಾಡಿಲ್ಲʼ ಎಂದು ಅಂಗಡಿ ಮಾಲಕರೊಬ್ಬರು ಹೇಳಿದ್ದಾರೆ. ʼಅವರು ಕೆಲವು ಅಗತ್ಯದ ವಿಷಯಗಳನ್ನು ಕೇಳಿದರು. ಒಬ್ಬ ಸಾಮಾನ್ಯ ಮೆಕ್ಯಾನಿಕ್ ಯಾವ ರೀತಿಯ ಜೀವನವನ್ನು ನಡೆಸುತ್ತಾನೆ, ಆ ಸಾಮಾನ್ಯ ಮೆಕ್ಯಾನಿಕ್ ಎದುರಿಸುವ ಸಮಸ್ಯೆಗಳೇನು. ಅವನಿಗೆ ಬ್ಯಾಂಕ್ ಸಾಲ ಹೇಗೆ ಸಿಗುತ್ತದೆ, ಅವನ ಮಕ್ಕಳು ಹೇಗೆ ಓದುತ್ತಾರೆ ಮೊದಲಾದ ವಿಷಯಗಳನ್ನೆಲ್ಲಾ ಕೇಳಿ ತಿಳಿದುಕೊಂಡರುʼ ಎಂದು ಮೆಕ್ಯಾನಿಕ್‌ ಒಬ್ಬರು ಹೇಳಿದ್ದಾರೆ.

ಇತ್ತೀಚೆಗಿನ ಅಮೆರಿಕ ಪ್ರವಾಸದ ವೇಳೆ ರಾಹುಲ್ ಗಾಂಧಿ ಕೂಡ ಟ್ರಕ್ ಸವಾರಿ ಮಾಡಿದ್ದರು. ಅವರು ವಾಷಿಂಗ್ಟನ್‌ನಿಂದ ನ್ಯೂಯಾರ್ಕ್‌ಗೆ 190 ಕಿಲೋಮೀಟರ್ ಟ್ರಕ್ ಮೂಲಕ ಪ್ರಯಾಣಿಸಿದ್ದರು. ಈ ವೇಳೆ ಅವರು ಟ್ರಕ್ ಚಾಲಕ ತೇಜಿಂದರ್ ಗಿಲ್ ಅವರೊಂದಿಗೂ ಮಾತನಾಡಿದ್ದರು. ಈ ಸಂಭಾಷಣೆಯ ವಿಡಿಯೋವನ್ನು ರಾಹುಲ್ ಕೂಡ ಶೇರ್ ಮಾಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News