ವಿಶಾಖಪಟ್ಟಣಂಗೆ ಬನ್ನಿ : ಕರ್ನಾಟಕದ ಐಟಿ ಉದ್ಯಮಗಳಿಗೆ ಆಹ್ವಾನ ನೀಡಿದ ಆಂಧ್ರಪ್ರದೇಶದ ಸಚಿವ

Update: 2024-07-17 16:30 GMT

ನಾರಾ ಲೋಕೇಶ್ | PC : NDTV 

ಅಮರಾವತಿ : ವಿಶಾಖಪಟ್ಟಣಂಗೆ ಸ್ಥಳಾಂತರಗೊಂಡರೆ ಅತ್ಯುತ್ತಮ ದರ್ಜೆಯ ಸೌಲಭ್ಯ ಒದಗಿಸಲಾಗುವುದು ಎಂದು ನಾಸ್ಕಾಮ್ ಸಂಘಟನೆಯ ಸದಸ್ಯರಿಗೆ ಆಂಧ್ರಪ್ರದೇಶ ಸಚಿವ ಹಾಗೂ ತೆಲುಗು ದೇಶಂ ಪಕ್ಷದ ನಾಯಕ ನಾರಾ ಲೋಕೇಶ್ ಆಹ್ವಾನ ನೀಡಿದ್ದಾರೆ.

ಕರ್ನಾಟಕ ಸರಕಾರವು ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ಮೀಸಲಾತಿ ಪ್ರಸ್ತಾವ ಚರ್ಚೆಯಲ್ಲಿರುವುದರಿಂದ ನಾಸ್ಕಾಮ್ ಸಂಘಟನೆ ಕಳವಳ ವ್ಯಕ್ತಪಡಿಸಿರುವ ಬೆನ್ನಿಗೇ ಆಂಧ್ರ ಸಚಿವರಿಂದ ಈ ಹೇಳಿಕೆ ಹೊರ ಬಿದ್ದಿದೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ನಾರಾ ಲೋಕೇಶ್, "ನಮಗೆ ನಿಮ್ಮ ನಿರಾಶೆ ಅರ್ಥವಾಗುತ್ತದೆ. ನಮ್ಮ ವಿಶಾಖಪಟ್ಟಣಂ ಐಟಿ, ಐಟಿ ಸೇವೆಗಳು, ಕೃತಕ ಬುದ್ಧಿಮತ್ತೆ ಹಾಗೂ ದತ್ತಾಂಶ ಕೇಂದ್ರಗಳ ಕ್ಲಸ್ಟರ್‌ನಲ್ಲಿ ನೀವು ನಿಮ್ಮ ಐಟಿ ಉದ್ಯಮಗಳನ್ನು ಸ್ಥಳಾಂತರಿಸಲು ಅಥವಾ ವಿಸ್ತರಿಸಲು ನಾವು ಸ್ವಾಗತಿಸುತ್ತೇವೆ" ಎಂದು ತಿಳಿಸಿದ್ದಾರೆ.

ಐಟಿ ಉದ್ಯಮಗಳಿಗೆ ಅತ್ಯಂತ ಸೂಕ್ತವಾದ ಕುಶಲ ಪ್ರತಿಭೆಗಳೊಂದಿಗೆ ಸರಕಾರದ ಯಾವುದೇ ನಿರ್ಬಂಧಗಳಿಲ್ಲದೆ ಅತ್ಯುತ್ತಮ ದರ್ಜೆಯ ಸೌಲಭ್ಯ, ತಡೆರಹಿತ ವಿದ್ಯುತ್ ಪೂರೈಕೆ, ಮೂಲಭೂತ ಸೌಕರ್ಯ ಹಾಗೂ ಅತ್ಯಂತ ಸೂಕ್ತ ಸೌಕರ್ಯಗಳನ್ನು ಒದಗಿಸಲಾಗುವುದು ಎಂದು ಅವರು ನಾಸ್ಕಾಮ್ ಸಂಘಟನೆಗೆ ಭರವಸೆ ನೀಡಿದ್ದಾರೆ.

ತೆಲುಗು ದೇಶಂ ಪಕ್ಷವು ಬಿಜೆಪಿಯ ಮೈತ್ರಿ ಪಕ್ಷವಾಗಿದ್ದು, ಕರ್ನಾಟಕದಲ್ಲಿ ವಿರೋಧ ಪಕ್ಷವಾಗಿರುವ ಬಿಜೆಪಿಯು ಈ ಪ್ರಸ್ತಾಪಕ್ಕೆ ವಿರೋಧ ವ್ಯಕ್ತಪಡಿಸಿ, ಇದೊಂದು ರಾಜಕೀಯ ನಾಟಕವೆಂದು ಟೀಕಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News