ಅಖಿಲೇಶ್ ಪಕ್ಷದಿಂದ ಗೆದ್ದವರಲ್ಲಿ ಶೇಕಡ 86ರಷ್ಟು ಮಂದಿ ಅಹಿಂದ ಅಭ್ಯರ್ಥಿಗಳು
ಲಕ್ನೋ: ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರ ಪಿಡಿಎ (ಪಿಚ್ಡಾ, ದಲಿತ್, ಅಲ್ಪಸಂಖ್ಯಾಕ್) ಕೇಂದ್ರಿತ ಚುನಾವಣಾ ತಂತ್ರಗಾರಿಕೆ ಉತ್ತರ ಪ್ರದೇಶದಲ್ಲಿ ನಿರೀಕ್ಷೆಗೂ ಮೀರಿದ ಪ್ರತಿಫಲ ನೀಡಿದ್ದು, ಪಕ್ಷದಿಂದ ಹೊಸದಾಗಿ ಆಯ್ಕೆಯಾದ ಸಂಸದರ ಪೈಕಿ ಶೇಕಡ 86ರಷ್ಟು ಮಂದಿ ಹಿಂದುಳಿದ ವರ್ಗ, ದಲಿತ ಮತ್ತು ಮುಸ್ಲಿಂ ಸಮುದಾಯಕ್ಕೆ ಸೇರಿದವರು.
ಸಮಾಜವಾದಿ ಪಕ್ಷದ 37 ಸಂಸದರ ಪೈಕಿ 20 ಮಂದಿ ಇತರ ಹಿಂದುಳಿದ ವರ್ಗಕ್ಕೆ ಸೇರಿದವರು. ಪರಿಶಿಷ್ಟ ಜಾತಿಯ ಎಂಟು ಮಂದಿ ಹಾಗೂ ಮುಸ್ಲಿಂ ಸಮುದಾಯದ ನಾಲ್ಕು ಮಂದಿ ಪಕ್ಷದಿಂದ ಸಂಸತ್ತಿಗೆ ಆಯ್ಕೆಯಾಗಿದ್ದಾರೆ, ಮೇಲ್ವರ್ಗಕ್ಕೆ ಸೇರಿದ ಬ್ರಾಹ್ಮಣ (ಸನಾತನ ಪಾಂಡೆ), ವೈಶ್ಯ (ರುಚಿ ವೀರಾ) ಮತ್ತು ಭುಮಿಹಾರ್ (ರಾಜೀವ್ ರಾಯ್) ತಲಾ ಒಬ್ಬರು ಆಯ್ಕೆಯಾಗಿದ್ದರೆ, ಠಾಕೂರ್ ಸಮುದಾಯದ ಆನಂದ್ ಭಡೋರಿಯಾ ಹಾಗೂ ಬೀರೇಂದ್ರ ಸಿಂಗ್ ಗೆಲುವು ಸಾಧಿಸಿದ್ದಾರೆ.
ಮೀರಠ್ ಮತ್ತು ಫೈಝಾಬಾದ್ ಕ್ಷೇತ್ರದಿಂದ ಪರಿಶಿಷ್ಟ ವರ್ಗದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಮೂಲಕ ಸಮಾಜವಾದಿ ಪಕ್ಷ, ಸಾಮಾನ್ಯ ಕ್ಷೇತ್ರದಿಂದ ದಲಿತರನ್ನು ಕಣಕ್ಕಿಳಿಸುವ ಹೊಸ ಪ್ರಯೋಗ ಮಾಡಿತ್ತು.
ಎಸ್ಪಿ ದಲಿತ ಅಭ್ಯರ್ಥಿ ಅವಧೇಶ್ ಪ್ರಸಾದ್ ಅವರು ಫೈಝಾಬಾದ್ ಕ್ಷೇತ್ರದಲ್ಲಿ ಬಿಜೆಪಿಯ ಲಲ್ಲು ಸಿಂಗ್ ಅವರನ್ನು 54,567 ಮತಗಳಿಂದ ಪರಾಭವಗೊಳಿಸಿದರೆ, ಮೀರಠ್ನಲ್ಲಿ ಪಕ್ಷ ಸುನಿತಾ ವರ್ಮಾ ಎಂಬ ದಲಿತ ಮಹಿಳೆಯನ್ನು ಕಣಕ್ಕೆ ಇಳಿಸಿತ್ತು. ಅವರು ಬಿಜೆಪಿಯ ಅರುಣ್ ಗೋವಿಲ್ ವಿರುದ್ಧ ಕೇವಲ 10500 ಮತಗಳ ಅಂತರದಿಂದ ಸೋಲು ಅನುಭವಿಸಿದರು.
ಸಮಾಜವಾದಿ ಪಕ್ಷದ ಮಿತ್ರಪಕ್ಷವಾದ ಕಾಂಗ್ರೆಸ್ ಆರು ಸ್ಥಾನಗಳನ್ನು ಗೆದ್ದಿದ್ದು, ಇವರಲ್ಲಿ ಹಿಂದುಳಿದ ವರ್ಗ (ರಾಕೇಶ್ ರಾಥೋಡ್), ಪರಿಶಿಷ್ಟ ಜಾತಿ (ತನುಜ್ ಪುನಿಯಾ) ಮತ್ತು ಮುಸ್ಲಿಂ (ಇಮ್ರಾನ್ ಮಸೂದ್) ಸಮುದಾಯದವರು. ಇತರ ಮೂವರ ಪೈಕಿ ರಾಹುಲ್ಗಾಂಧಿ ಕಾಶ್ಮೀರಿ ಬ್ರಾಹ್ಮಣ, ಉಜ್ವಲ್ ರೆಯೋತಿ ರಮಣ್ ಸಿಂಗ್ ಭುಮಿಹಾರ್ ಸಮುದಾಯ ಹಾಗೂ ಕೆ.ಎಲ್.ಶರ್ಮಾ ಪಂಜಾಬಿ ಸಮುದಾಯಕ್ಕೆ ಸೇರಿದವರು. ಎಸ್ಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳ ಪಟ್ಟಿಯಲ್ಲಿ 33 ಮಂದಿ ಹಿಂದುಳಿದ ವರ್ಗದವರು, 19 ಮಂದಿ ಪರಿಶಿಷ್ಟರು ಹಾಗೂ ಆರು ಮುಸ್ಲಿಮರು ಸೇರಿದ್ದರು.
ಇನ್ನೊಂದೆಡೆ ಬಿಜೆಪಿಯ ಸಂಸದರಲ್ಲಿ ಪಕ್ಷದ ಸಾಂಪ್ರದಾಯಿಕ ಮತದಾರರಾಗಿರುವ ಮೇಲ್ವರ್ಗದವರೇ ಅಧಿಕ. ಬಿಜೆಪಿಯ ಒಟ್ಟು 33 ಸಂಸದರ ಪೈಕಿ 15 ಮಂದಿ ಮೇಲ್ವರ್ಗಕ್ಕೆ ಸೇರಿದವರು. ಎಂಟು ಮಂದಿ ಬ್ರಾಹ್ಮಣರು, ಠಾಕೂರ್ ಸಮುದಾಯದ ಐವರು ಹಾಗೂ ವೈಶ್ಯ ಸಮುದಾಯದ ಇಬ್ಬರು ಸೇರಿದ್ದಾರೆ. ಅಂದರೆ ಪಕ್ಷದ ಒಟ್ಟು ಸಂಸದರ ಪೈಕಿ ಶೇಕಡ 45ರಷ್ಟು ಮಂದಿ, ಶೇಕಡ 20ರಷ್ಟು ಮತದಾರರನ್ನು ಹೊಂದಿರುವ ಮೇಲ್ವರ್ಗದವರು. ಉಳಿದಂತೆ 10 ಮಂದಿ ಹಿಂದುಳಿದ ವರ್ಗದವರು, ಎಂಟು ಮಂದಿ ಪರಿಶಿಷ್ಟರು ಸೇರಿದ್ದಾರೆ. ಅಂದರೆ ಶೇಕಡ 55ರಷ್ಟು ಮಂದಿ ಈ ವರ್ಗಗಳಿಗೆ ಸೇರಿದ್ದಾರೆ.
ಬಿಜೆಪಿ ಮಿತ್ರಪಕ್ಷವಾದ ಆರ್ಎಲ್ಡಿ ಮತ್ತು ಅಪ್ನಾದಳದಿಂದ ಇತರ ಮೂವರು ಓಬಿಸಿ ಅಭ್ಯರ್ಥಿಗಳು ಆಯ್ಕೆಯಾಗಿದ್ದಾರೆ. ರಾಜ್ಕುಮಾರ್ ಸಂಗ್ವಾನ್ (ಜಾಟ್), ಚಂದನ್ ಚೌಹಾಣ್ (ಗುರ್ಜರ್) ಮತ್ತು ಅಪ್ನಾದಳ ಮುಖ್ಯಸ್ಥೆ ಅನುಪ್ರಿಯಾ ಪಟೇಲ್ (ಕುರ್ಮಿ) ಗೆಲುವು ಸಾಧಿಸಿದ್ದಾರೆ.