ರಾಹುಲ್ ಗಾಂಧಿಯ 37 ನಿಮಿಷ ಭಾಷಣದಲ್ಲಿ ಕೇವಲ 14 ನಿಮಿಷ ಪ್ರಸಾರ ಮಾಡಿದ ಸಂಸದ್ ಟಿವಿ: ಕಾಂಗ್ರೆಸ್ ಆರೋಪ

Update: 2023-08-09 17:56 GMT

ಹೊಸದಿಲ್ಲಿ: ಬುಧವಾರದಂದು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿ ಅವರು ಲೋಕಸಭೆಯಲ್ಲಿ ನಡೆಯುತ್ತಿರುವ ಅವಿಶ್ವಾಸ ನಿರ್ಣಯ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದರು. ಈ ಸಂದರ್ಭದಲ್ಲಿ 37 ನಿಮಿಷಗಳ ಕಾಲದ ರಾಹುಲ್ ಗಾಂಧಿಯವರ ಭಾಷಣದ ಪೈಕಿ ಕೇವಲ 14 ನಿಮಿಷದ ಅವಧಿಯ ಭಾಷಣವನ್ನು ಮಾತ್ರ ಸಂಸದ್ ಟಿವಿ ಪ್ರಸಾರ ಮಾಡಿದೆ ಎಂದು ಕಾಂಗ್ರೆಸ್ ಪಕ್ಷವು ಆರೋಪಿಸಿದೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, “ರಾಹುಲ್ ಗಾಂಧಿ ಅವರು ತಮ್ಮ ಪ್ರಥಮ ಭಾಷಣವನ್ನು ಮಧ್ಯಾಹ್ನ 12.09ರಿಂದ 12.46ರವರೆಗೆ ಮಾಡಿದ್ದಾರೆ. ಅರ್ಥಾತ್, ಅವಿಶ್ವಾಸ ನಿರ್ಣಯದ ಸಂದರ್ಭದಲ್ಲಿ 37 ನಿಮಿಷಗಳ ಕಾಲ ಭಾಷಣ ಮಾಡಿದ್ದಾರೆ. ಆದರೆ, ಸಂಸದ್ ಟಿವಿಯ ಕ್ಯಾಮೆರಾವು 37 ನಿಮಿಷಗಳ ಪೈಕಿ 14 ನಿಮಿಷಗಳ ಭಾಷಣವನ್ನು ಮಾತ್ರ ಪ್ರಸಾರ ಮಾಡಿದೆ. ಅದು ಶೇ. 40ಕ್ಕಿಂತ ಕಡಿಮೆ ಪರದೆಯ ಅವಧಿ! ಮೋದಿ ಯಾವುದರ ಬಗ್ಗೆ ಹೆದರುತ್ತಿದ್ದಾರೆ?” ಎಂದು ವ್ಯಂಗ್ಯವಾಗಿ ಪ್ರಶ್ನಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಹಿರಿಯ ಪದಾಧಿಕಾರಿ ಸಂದೀಪ್ ಸಿಂಗ್ ಟ್ವೀಟ್ ಮಾಡಿ, “… ಮಣಿಪುರದ ಕುರಿತು ರಾಹುಲ್ ಅವರು 15 ನಿಮಿಷ 42 ಸೆಕೆಂಡ್ ಗಳ ಕಾಲ ಭಾಷಣ ಮಾಡಿದರು. ಈ ಪೈಕಿ ಸಂಸದ್ ಟಿವಿ ಕ್ಯಾಮೆರಾವು 11 ನಿಮಿಷ 8 ಸೆಕೆಂಡ್ ಗಳ ಕಾಲ ಸಭಾಧ್ಯಕ್ಷರನ್ನು ತೋರಿಸಿತು. ಈ ಸಂದರ್ಭದಲ್ಲಿ ರಾಹುಲ್ ಗಾಂಧಿಗೆ ನೀಡಲಾದ ಪರದೆಯ ಅವಧಿ ಕೇವಲ 4 ನಿಮಿಷ. ಪುಕ್ಕಲ ರಾಜ ಯಾಕೆ ಸತ್ಯಕ್ಕೆ ಹೆದರುತ್ತಿದ್ದಾರೆ?” ಎಂದು ಗೇಲಿ ಮಾಡಿದ್ದಾರೆ.

ಮಂಗಳವಾರ, ಅವಿಶ‍್ವಾಸ ನಿರ್ಣಯ ಚರ್ಚೆಯ ಸಂದರ್ಭದಲ್ಲಿ ಸಂಸದ್ ಟಿವಿ ಸರ್ಕಾರದ ಸಾಧನೆಗಳ ಕುರಿತ ಸುದ್ದಿ ತುಣುಕುಗಳ ಪ್ರಸಾರ ಮಾಡಿದ್ದನ್ನು ವಿರೋಧ ಪಕ್ಷಗಳು ಪ್ರತಿಭಟಿಸಿದ್ದವು. ಸರ್ಕಾರದ ಅಭಿವೃದ್ಧಿಪರ ಕಾರ್ಯಗಳನ್ನು ಎತ್ತಿ ತೋರಿಸುತ್ತಿದ್ದ ಸುದ್ದಿ ತುಣುಕುಗಳನ್ನು ಸಂಸದ್ ಟಿವಿ ಪ್ರಸಾರ ಮಾಡುತ್ತಿದ್ದುದನ್ನು ವಿರೋಧ ಪಕ್ಷಗಳ ಸಂಸದರು ಪ್ರತಿಭಟಿಸಿದ್ದರಿಂದಾಗಿ ಕೆಲಕಾಲ ಲೋಕಸಭಾ ಕಲಾಪ ಅಸ್ತವ್ಯಸ್ತಗೊಂಡಿತ್ತು. ಬಿಜೆಪಿ ಸಂಸದ ನಿಶಿಕಾಂತ್ ದುಬೆ ಅವಿಶ್ವಾಸ ನಿರ್ಣಯದ ವಿರುದ್ಧ ಮಾತನಾಡಲು ಶುರು ಮಾಡುತ್ತಿದ್ದಂತೆಯೆ, ಈ ಸಂಗತಿಯ ಕುರಿತು ಹಲವಾರು ವಿರೋಧ ಪಕ್ಷಗಳ ಸಂಸದರು ಪ್ರತಿಭಟಿಸಿದ್ದರು.

ಇದಕ್ಕೆ ಪ್ರತಿಯಾಗಿ, “ವಿರೋಧ ಪಕ್ಷಗಳು ಸರ್ಕಾರ ಕೈಗೊಂಡಿರುವ ಅಭಿವೃದ್ಧಿಪರ ಕಾರ್ಯಗಳ ಕುರಿತು ಯಾವುದೇ ವಿಷಯವನ್ನು ಪ್ರಸ್ತಾಪ ಮಾಡುವಲ್ಲಿ ಅಸಮರ್ಥವಾಗಿವೆ” ಎಂದು ಸಚಿವ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು. ನಂತರ ಸಭಾಧ್ಯಕ್ಷ ಓಂ ಬಿರ್ಲಾ ಅವರು, ಸುದ್ದಿ ತುಣುಕು ಪ್ರಸಾರವನ್ನು ಸ್ಥಗಿತಗೊಳಿಸುವಂತೆ ನಿರ್ದೇಶನ ನೀಡಿದ್ದೇನೆ ಎಂದು ಸದನಕ್ಕೆ ಮಾಹಿತಿ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News