ಲೈಂಗಿಕ ಕಿರುಕುಳ ಆರೋಪ: ಪೊಲೀಸ್ ಪೇದೆ ಅಮಾನತು
ಗಾಜಿಯಾಬಾದ್: ಸಾರ್ವಜನಿಕ ಉದ್ಯಾನವನದಲ್ಲಿದ್ದ ಜೋಡಿಯನ್ನು ಬೈದು, ಲೈಂಗಿಕ ಕಿರುಕುಳ ನೀಡಿದ ಆರೋಪದಲ್ಲಿ ಗಾಜಿಯಾಪಾದ್ ಠಾಣೆಯ ಪೊಲೀಸ್ ಪೇದೆಯೊಬ್ಬನನ್ನು ಅಮಾನತು ಮಾಡಲಾಗಿದೆ.
ಈ ಘಟನೆ 15 ದಿನಗಳ ಹಿಂದೆಯೇ ನಡೆದಿದ್ದರೂ, 12 ದಿನಗಳ ಕಾಲ ಎಫ್ಐಆರ್ ದಾಖಲಿಸಲು ಸತತ ಹೋರಾಟ ನಡೆಸಿದ ಬಳಿಕ ಬೆಳಕಿಗೆ ಬಂದಿದೆ. ಪೊಲೀಸ್ ಪೇದೆಗೆ 1000 ರೂಪಾಯಿಗಳನ್ನು ಪೇಟಿಯಂ ಪ್ಲಾಟ್ಫಾರಂ ಮೂಲಕ ವರ್ಗಾಯಿಸಿದ ಬಳಿಕವಷ್ಟೇ ಪೊಲೀಸ್ ಈ ಜೋಡಿಯನ್ನು ಬಿಟ್ಟಿದ್ದ ಎಂದು ದೂರಿನಲ್ಲಿ ವಿವರಿಸಲಾಗಿದೆ. ಇದಕ್ಕೂ ಮುನ್ನ ಮೂರು ಗಂಟೆ ಕಾಲ
ಕಿರುಕುಳ ನೀಡಿದ್ದ ಎಂದು ಆಪಾದಿಸಲಾಗಿದೆ.
"ಪೊಲೀಸ್ ಪೇದೆ ನನ್ನ ಗುಪ್ತಾಂಗವನ್ನು ಸ್ಪರ್ಶಿಸಿದ್ದಲ್ಲದೇ, ಲೈಂಗಿಕ ಚಟುವಟಿಕೆಯಲ್ಲಿ ತೊಡಗುವಂತೆ ಒತ್ತಾಯಿಸಿದ್ದ. ಆರೋಪಿ ಜತೆಗಿದ್ದ ಮತ್ತೊಬ್ಬ ವ್ಯಕ್ತಿ ನಮ್ಮಿಂದ 5-6 ಲಕ್ಷ ರೂಪಾಯಿ ನೀಡುವಂತೆ ಆಗ್ರಹಿಸಿದ್ದ" ಎಂದು FIR ನಲ್ಲಿ ಹೇಳಲಾಗಿದೆ.
ದೂರಿನ ಆಧಾರದಲ್ಲಿ ಕೊತ್ವಾಲಿನಗರ ಠಾಣೆಯ 112-PRV ಸಿಬ್ಬಂದಿ ಸಾಯಿ ಪವನ್ ಎಂತಾತನನ್ನು ಅಮಾನತುಗೊಳಿಸಲಾಗಿದೆ.
ಈ ಜೋಡಿಗೆ 112-PRV ಯ ಮತ್ತಿಬ್ಬರು ಸಿಬ್ಬಂದಿ ಕೂಡಾ ಕಿರುಕುಳ ನೀಡಿದ್ದಾರೆ ಮತ್ತು ಅಕ್ರಮವಾಗಿ ಈಕೆಯಿಂದ ಹಾಗೂ ಭಾವಿ ಪತಿಯಿಂದ ಹಣ ಕೀಳಲು ಯತ್ನಿಸಿದ್ದಾರೆ ಎಂದು ಆಪಾದಿಸಲಾಗಿದೆ.