2020ರಿಂದ ದೈಹಿಕವಾಗಿ ಮಲವನ್ನು ಹೊರುವ ಘಟನೆ ನಡೆದಿಲ್ಲ : ಕೇಂದ್ರ ಸರಕಾರ

Update: 2024-07-25 16:15 GMT

ಸಾಕೇತ್ ಗೋಖಲೆ | PC : X 

ಹೊಸದಿಲ್ಲಿ : ಸಂಸತ್ತಿನಲ್ಲಿ ಟಿಎಂಸಿ ರಾಜ್ಯಸಭಾ ಸದಸ್ಯ ಸಾಕೇತ್ ಗೋಖಲೆಯವರು ಎತ್ತಿದ್ದ ಪ್ರಶ್ನೆ ಮತ್ತು ಅದಕ್ಕೆ ಉತ್ತರಕ್ಕೆ ಎಕ್ಸ್ ನಲ್ಲಿ ಅವರ ಪ್ರತಿಕ್ರಿಯೆ ಸಾಕಷ್ಟು ಗಮನವನ್ನು ಸೆಳೆದಿದೆ.

ಕಳೆದ ಐದು ವರ್ಷಗಳಲ್ಲಿ ಭಾರತದಲ್ಲಿ ದೈಹಿಕವಾಗಿ ಮಲಹೊರುವ ಘಟನೆಗಳ ಒಟ್ಟು ಸಂಖ್ಯೆಯನ್ನು ಗೋಖಲೆ ಕೇಳಿದ್ದರು. ಇದಕ್ಕೆ ಉತ್ತರಿಸಿದ್ದ ಸಚಿವ ರಾಮದಾಸ ಅಠಾವಳೆ ಅವರು, ಕಳೆದ ಐದು ವರ್ಷಗಳಲ್ಲಿ ಇಂತಹ ಯಾವುದೇ ಘಟನೆ ನಡೆದಿಲ್ಲ ಎಂದು ತಿಳಿಸಿದ್ದರು.

ಎಕ್ಸ್ ನಲ್ಲಿ ಈ ಉತ್ತರದ ಬಗ್ಗೆ ಅಪನಂಬಿಕೆಯನ್ನು ವ್ಯಕ್ತಪಡಿಸಿರುವ ಗೋಖಲೆ, ಮೋದಿ ಸರಕಾರವು ಸಂಸತ್ತಿನಲ್ಲಿ ಬಹಿರಂಗವಾಗಿ ಸುಳ್ಳುಗಳನ್ನು ಹೇಳುತ್ತಿದೆ ಎಂದು ಆರೋಪಿಸಿದ್ದಾರೆ. ಇದು ಸದನದಲ್ಲಿ ಬಹಿರಂಗವಾಗಿ ಸುಳ್ಳುಗಳನ್ನು ಉದುರಿಸುವ ಲಜ್ಜೆಗೇಡಿತನವನ್ನು ಹೊಸ ಎತ್ತರಕ್ಕೊಯ್ದಿದೆ ಎಂದು ಅವರು ಕುಟುಕಿದ್ದರು.

ಮ್ಯಾನ್ಯುವಲ್ ಸ್ಕ್ಯಾವೆಂಜಿಂಗ್ ಕಾಯ್ದೆ, 2013 ಜಾರಿಗೊಂಡ ಬಳಿಕ ದೈಹಿಕವಾಗಿ ಮಲಹೊರುವ ಪದ್ಧತಿಯನ್ನು ನಿಷೇಧಿಸಲಾಗಿದೆ ಎಂದು ಸಚಿವರು ಉತ್ತರದಲ್ಲಿ ತಿಳಿಸಿದ್ದರು.

ಸಚಿವಾಲಯವು ಅಸ್ವಚ್ಛ ಶೌಚಾಲಯಗಳು ಮತ್ತು ಮ್ಯಾನ್ಯುವಲ್ ಸ್ಕ್ಯಾವೆಂಜರ್ಗಳ ಬಗ್ಗೆ ಮಾಹಿತಿಗಳನ್ನು ಸಂಗ್ರಹಿಸಲು 2020ರಲ್ಲಿ ‘ಸ್ವಚ್ಛತಾ ಅಭಿಯಾನ’ ಮೊಬೈಲ್ ಆ್ಯಪ್ನ್ನೂ ಆರಂಭಿಸಿತ್ತು. 114 ಜಿಲ್ಲೆಗಳಿಂದ ಆ್ಯಪ್ನಲ್ಲಿ ಅಪ್ಲೋಡ್ ಮಾಡಲಾದ ಎಲ್ಲ 6,256 ಪ್ರಕರಣಗಳನ್ನು ಪರಿಶೀಲಿಸಲಾಗಿದೆ ಮತ್ತು ಅವು ವಿಶ್ವಾಸಾರ್ಹವಲ್ಲ ಎನ್ನುವುದು ಕಂಡು ಬಂದಿದೆ ಎಂದು ಸಚಿವಾಲಯವು ತಿಳಿಸಿತ್ತು.

ಈ ಅಧಿಕೃತ ಹೇಳಿಕೆಗಳ ಹೊರತಾಗಿಯೂ ಹಲವಾರು ವರದಿಗಳು ಸಚಿವಾಲಯದ ನಿಲುವನ್ನು ವಿರೋಧಿಸಿವೆ. ದೈಹಿಕವಾಗಿ ಮಲಹೊರುವ ಪದ್ಧತಿಯು ಈಗಲೂ ಭಾರತದ ಹಲವಾರು ಭಾಗಗಳಲ್ಲಿ ಕಟು ವಾಸ್ತವವಾಗಿ ಉಳಿದುಕೊಂಡಿದೆ. ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ ಮತ್ತು ರಾಜಸ್ಥಾನದಂತಹ ರಾಜ್ಯಗಳಲ್ಲಿ ದೈಹಿಕವಾಗಿ ಮಲ ಹೊರುವ ಪದ್ಧತಿ ಜೀವಂತವಾಗಿದೆ ಎಂದು ವರದಿಗಳು ಸೂಚಿಸಿವೆ.

ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು 2021ರಲ್ಲಿ ಸರಕಾರದ ಹೇಳಿಕೆಗಳಿಗೆ ವಿರುದ್ಧವಾಗಿ, ದೈಹಿಕವಾಗಿ ಮಲ ಹೊರುವ ಪದ್ಧತಿಯ ನಿವಾರಣೆ ಇನ್ನೂ ತುಂಬ ದೂರದಲ್ಲಿದೆ ಎಂದು ತಿಳಿಸಿತ್ತು. ಮಾಧ್ಯಮ ವರದಿಯಂತೆ 2018 ಮತ್ತು 2023ರ ನಡುವೆ ಒಳಚರಂಡಿಗಳು ಮತ್ತು ಸೆಪ್ಟಿಕ್ ಟ್ಯಾಂಕ್ಗಳನ್ನು ಸ್ವಚ್ಛಗೊಳಿಸುವಾಗ 339 ವ್ಯಕ್ತಿಗಳು ಮೃತಪಟ್ಟಿದ್ದಾರೆ ಎಂದು ಸರಕಾರಿ ದತ್ತಾಂಶಗಳು ತೋರಿಸಿವೆ.

ಆಗ ಸಚಿವ ಅಠಾವಳೆ ಸಾವುಗಳು ಸಂಭವಿಸಿದ್ದನ್ನು ಒಪ್ಪಿಕೊಂಡಿದ್ದರು ಮತ್ತು 2018ರಿಂದ 2023ರವರೆಗಿನ ವರ್ಷವಾರು ಸಾವುಗಳ ಸಂಖ್ಯೆಗಳನ್ನು ತಿಳಿಸಿದ್ದರು.

ಕರ್ನಾಟಕ ಸಫಾಯಿ ಕರ್ಮಚಾರಿ ಆಯೋಗದ ಹೇಳಿಕೆಯಂತೆ ಕರ್ನಾಟಕವೊಂದರಲ್ಲೇ 2020ರಿಂದ 90 ಮ್ಯಾನ್ಯುವಲ್ ಸ್ಕ್ಯಾವೆಂಜರ್ಗಳು ಸಾವನ್ನಪ್ಪಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News