ಸಂವಿಧಾನದ ಹೊಸ ಪ್ರತಿಗಳಲ್ಲಿ ‘ಸಮಾಜವಾದಿ’, ‘ಜಾತ್ಯತೀತ’ ಪದಗಳು ಕಣ್ಮರೆ: ಕಾಂಗ್ರೆಸ್ ನಾಯಕ ಆರೋಪ

Update: 2023-09-20 07:10 GMT

ಅಧೀರ್ ರಂಜನ್ ಚೌಧರಿ (PTI)

ಹೊಸ ದಿಲ್ಲಿ: ಸಂವಿಧಾನದ ವಿರುದ್ಧ ನಡೆಯುತ್ತಿರುವ ದಾಳಿಯ ವಿರುದ್ಧ ಕಳವಳ ವ್ಯಕ್ತಪಡಿಸಿರುವ ಲೋಕಸಭೆಯ ಕಾಂಗ್ರೆಸ್ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ, " ನೂತನ ಸಂಸತ್ ಭವನದ ಕಾರ್ಯಕಲಾಪಗಳ ಆರಂಭದ ದಿನದಂದು ರಾಜಕಾರಣಿಗಳಿಗೆ ವಿತರಿಸಲಾಗಿರುವ ನೂತನ ಸಂವಿಧಾನ ಪ್ರತಿಗಳಲ್ಲಿ 'ಸಮಾಜವಾದಿ’, ‘ಜಾತ್ಯತೀತ' ಪದಗಳು ಕಣ್ಮರೆಯಾಗಿವೆ ಎಂದು ಆರೋಪಿಸಿದ್ದಾರೆ ಎಂದು ndtv.com ವರದಿ ಮಾಡಿದೆ.

ಸೆ. 19ರಂದು ನಮಗೆ ನೀಡಲಾದ ನೂತನ ಸಂವಿಧಾನ ಪ್ರತಿಗಳ ಸಂವಿಧಾನ ಪೀಠಿಕೆಯಲ್ಲಿ 'ಸಮಾಜವಾದಿ, ಜಾತ್ಯತೀತ' ಪದಗಳು ಇರಲಿಲ್ಲ ಎಂದು ಅವರು ಮಂಗಳವಾರ ANI ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

"1976ರಲ್ಲಿ ಆ ಪದಗಳನ್ನು ತಿದ್ದುಪಡಿಯ ನಂತರ ಸಂವಿಧಾನ ಪೀಠಿಕೆಗೆ ಸೇರ್ಪಡೆ ಮಾಡಲಾಯಿತು ಎಂಬ ಸಂಗತಿ ನಮಗೆ ತಿಳಿದಿದೆ. ಆದರೆ, ಈಗ ಆ ಪದಗಳಿಲ್ಲದ ಸಂವಿಧಾನ ಪ್ರತಿಯನ್ನು ನೀಡಿದರೆ ಅದು ಕಳವಳಕಾರಿ ಸಂಗತಿಯಾಗಿದೆ" ಎಂದೂ ಅವರು ಆತಂಕ ವ್ಯಕ್ತಪಡಿಸಿದ್ದಾರೆ.

"ಅವರ ಉದ್ದೇಶಗಳು ಸಂಶಯಾಸ್ಪದವಾಗಿವೆ. ಇದನ್ನು ತುಂಬಾ ಜಾಣ್ಮೆಯಿಂದ ಮಾಡಲಾಗಿದೆ. ಇದು ನನ್ನ ಪಾಲಿಗೆ ಕಳವಳಕಾರಿ ಸಂಗತಿಯಾಗಿದೆ" ಎಂದು ಅವರು ಆರೋಪಿಸಿದ್ದಾರೆ.

"ನಾನು ಈ ವಿಷಯವನ್ನು ಪ್ರಸ್ತಾಪಿಸಲು ಪ್ರಯತ್ನಿಸಿದೆನಾದರೂ, ಅದಕ್ಕೆ ನನಗೆ ಅವಕಾಶ ದೊರೆಯಲಿಲ್ಲ" ಎಂದೂ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News