ಸೊಲ್ಲಾಪುರ: ಅಧಿಕೃತ ಅಂಕಿ ಅಂಶಕ್ಕೆ ಸವಾಲು ಹಾಕಲಿರುವ 'ಮರುಮತದಾನ'
ಪುಣೆ: ಮಹಾರಾಷ್ಟ್ರ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗದ ಅಂಕಿ ಅಂಶಗಳಿಗೆ ಸವಾಲು ಹಾಕುವ ನಿಟ್ಟಿನಲ್ಲಿ ಎಂವಿಎ ಬೆಂಬಲಿಗರೇ ಅಧಿಕವಾಗಿರುವ ಮರ್ಕವಾಡಿಯಲ್ಲಿ ಗ್ರಾಮಸ್ಥರು ಅನಧಿಕೃತವಾಗಿ 'ಮರು ಮತದಾನ' ಆಯೋಜಿಸಿದ್ದು, ಇವಿಎಂ ಬದಲಾಗಿ ಮತಪತ್ರಗಳ ಮೂಲಕ ತಮ್ಮ ಹಕ್ಕು ಚಲಾಯಿಸಲಿದ್ದಾರೆ.
ಮರ್ಕವಾಡಿ ಸೊಲ್ಲಾಪುರದ ಮಲ್ಶಿರಾಸ್ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಇಲ್ಲಿ ಎನ್ಸಿಪಿ (ಶರದ್ ಪವಾರ್ ಬಣ)ಯ ಉತ್ತಮರಾವ್ ಜನ್ಕರ್, ಬಿಜೆಪಿಯ ಮಾಜಿ ಶಾಸಕ ರಾಮ್ ಸಾತ್ಪುಳೆ ವಿರುದ್ಧ ಜಯ ಸಾಧಿಸಿದ್ದರು. ಜನ್ಕರ್ ಗೆಲುವು ಸಾಧಿಸಿದರೂ, ಈ ಗ್ರಾಮದ ಎಂವಿಎ ಬೆಂಬಲಿಗರು ಚುನಾವಣಾ ಆಯೋಗ ಬಿಡುಗಡೆ ಮಾಡಿರುವ ಅಂಕಿ ಅಂಶಗಳಿಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಧಿಕೃತ ಅಂಕಿ ಅಂಶಗಳ ಪ್ರಕಾರ, ಗ್ರಾಮದಲ್ಲಿ ಬಿಜೆಪಿ ಅಭ್ಯರ್ಥಿಗೆ ಮುನ್ನಡೆ ದೊರಕಿತ್ತು. ಆದ್ದರಿಂದ ತಮ್ಮ ಬೆಂಬಲವನ್ನು ಸಾಬೀತುಪಡಿಸುವ ಸಲುವಾಗಿ "ಮರು ಮತದಾನ"ಕ್ಕೆ ಗ್ರಾಮಸ್ಥರು ಮುಂದಾಗಿದ್ದಾರೆ.
"ಮರು ಮತದಾನ"ಕ್ಕೆ ಒಂದು ದಿನ ಮೊದಲು ಸೊಲ್ಲಾಪುರ ಜಿಲ್ಲಾ ಆಡಳಿತ ಕೆಲ ಗ್ರಾಮಸ್ಥರಿಗೆ ನೋಟಿಸ್ ನೀಡಿ, ಇದು ಸಂಘರ್ಷಕ್ಕೆ ಕಾರಣವಾಗುವುದರಿಂದ ಮರು ಮತದಾನದ ಕ್ರಮ ಕೈಬಿಡಬೇಕು ಎಂದು ಸೂಚಿಸಿದೆ. ಸೋಮವಾರ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಸೊಲ್ಲಾಪುರ ಎಸ್ಪಿ ಅತುಲ್ ಕುಲಕರ್ಣಿ ಈ ಬಗ್ಗೆ ವಿವರ ನೀಡಿ, "ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ವಹಿಸುವಂತೆ ನೋಟಿಸ್ ನೀಡಲಾಗಿದೆ. ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ತರಬಹುದಾದ ಈ ಕ್ರಮ ಕೈಬಿಡುವಂತೆ ಗ್ರಾಮಸ್ಥರ ಮನವೊಲಿಸಲಾಗುತ್ತಿದೆ" ಎಂದು ಹೇಳಿದ್ದಾರೆ.
ಗ್ರಾಮಸ್ಥರಾದ ರಂಜೀತ್ ಮರ್ಕಡ್ ಈ ಬಗ್ಗೆ ಹೇಳಿಕೆ ನೀಡಿ "ನವೆಂಬರ್ 20ರಂದು ನಡೆದ ಚುನಾವಣೆಯಲ್ಲಿ ಗ್ರಾಮದ 2000 ಮಂದಿ ಅರ್ಹ ಮತದಾರರ ಪೈಕಿ 1900ಕ್ಕೂ ಹೆಚ್ಚು ಮಂದಿ ಮತ ಚಲಾಯಿಸಿದ್ದರು. ನಮ್ಮ ಗ್ರಾಮದಲ್ಲಿ ಮತದಾರರು ಜನ್ಕರ್ ಮತ್ತು ಮೋಹಿತೆ ಪಾಟೀಲ್ ಕುಟುಂಬವನ್ನು ಬೆಂಬಲಿಸುತ್ತಾ ಬಂದಿದ್ದರು. ಆದರೆ ಈ ಬಾರಿ ಜನ್ಕರ್ ಗೆ 843 ಮತಗಳು ಬಂದಿದ್ದರೆ, ಸಾತ್ಪುತೆ 1003 ಮತಗಳನ್ನು ಪಡೆದಿದ್ದಾರೆ. ಚುನಾವಣಾ ಆಯೋಗದ ಅಂಕಿ ಅಂಶದ ಬಗ್ಗೆ ನಂಬಿಕೆ ಇಲ್ಲ. ಆದ್ದರಿಂದ ಡಿಸೆಂಬರ್ 3ರಂದು ಮತಪತ್ರಗಳ ಮೂಲಕ ಮರು ಮತದಾನ ಆಯೋಜಿಸಿ, ಮತ ಹಂಚಿಕೆ ಬಗ್ಗೆ ಪುರಾವೆ ತೋರಿಸಲಿದ್ದೇವೆ" ಎಂದು ಹೇಳಿದ್ದಾರೆ.
ಗ್ರಾಮಸ್ಥರೇ ಹಣ ಸಂಗ್ರಹಿಸಿ ಎಲ್ಲ ಅಭ್ಯರ್ಥಿಗಳ ಭಾವಚಿತ್ರ ಹಾಗೂ ಹೆಸರನ್ನು ಒಳಗೊಂಡ ಮತಪತ್ರ ಮುದ್ರಿಸಿದ್ದಾರೆ. ಮತಪತ್ರದ ಮೂಲಕ ತಮ್ಮ ಹಕ್ಕು ಚಲಾಯಿಸುವಂತೆ ಬ್ಯಾನರ್ ಗಳನ್ನೂ ಗ್ರಾಮದಲ್ಲಿ ಹಾಕಲಾಗಿದೆ. ಇಡೀ ಪ್ರಕ್ರಿಯೆಯನ್ನು ನಾವು ಅನುಸರಿಸಲಿದ್ದು, ಗ್ರಾಮಸ್ಥರೆಲ್ಲರೂ ಮತ ಚಲಾಯಿಸುವಂತೆ ಕೋರಿದ್ದೇವೆ ಎಂದು ಅಮಿತ್ ವಾಘ್ಮೋರೆ ವಿವರಿಸಿದ್ದಾರೆ.