ಶ್ರೀಲಂಕಾದಿಂದ 27 ಭಾರತೀಯ ಮೀನುಗಾರರ ಬಂಧನ

Update: 2023-10-15 17:36 GMT

ರಾಮನಾಥಪುರಂ: ಡೆಲ್ಫ್ ಐಲ್ಯಾಂಡ್ (ನೆಡುಂತೀವು) ಬಳಿ ಅಂತರ್ರಾಷ್ಟ್ರೀಯ ಜಲಗಡಿ ರೇಖೆಯನ್ನು ಉಲ್ಲಂಘಿಸಿದ ಮತ್ತು ಮೀನುಗಾರಿಕೆ ನಡೆಸುತ್ತಿದ್ದ ಆರೋಪದಲ್ಲಿ ಶ್ರೀಲಂಕಾ ನೌಕಾಪಡೆಯು 27 ಭಾರತೀಯ ಮೀನುಗಾರರನ್ನು ಬಂಧಿಸಿದೆ. ಈ ಮೀನುಗಾರರು ಇಲ್ಲಿಯ ರಾಮೇಶ್ವರಂ ನಿವಾಸಿಗಳಾಗಿದ್ದಾರೆ. ಮೀನುಗಾರರಿಗೆ ಸೇರಿದ ಐದು ದೋಣಿಗಳನ್ನೂ ವಶಪಡಿಸಿಕೊಂಡಿರುವ ನೌಕಾಪಡೆಯು ಮುಂದಿನ ಕ್ರಮಕ್ಕಾಗಿ ಶ್ರೀಲಂಕಾ ಮೀನುಗಾರಿಕೆ ಇಲಾಖೆಯ ಇನ್ಸ್ಪೆಕ್ಟರ್ ಗೆ ಹಸ್ತಾಂತರಿಸಿದೆ.

ಶನಿವಾರ ರಾಮೇಶ್ವರಂನಿಂದ 500ಕ್ಕೂ ಅಧಿಕ ಮತ್ತು ಮಂಡಬಂನಿಂದ 373 ದೋಣಿಗಳು ಮೀನುಗಾರಿಕೆಗೆ ತೆರಳಿದ್ದವು. ರಾತ್ರಿ ಮೀನುಗಾರಿಕೆಯಲ್ಲಿ ತೊಡಗಿದ್ದ ಕೆಲವು ದೋಣಿಗಳನ್ನು ಶ್ರೀಲಂಕಾ ನೌಕಾಪಡೆಯು ಬೆನ್ನಟ್ಟಿತ್ತು ಹಾಗೂ ರಾಮೇಶ್ವರಂನ ನಾಲ್ಕು ಮತ್ತು ಮಂಡಬಂನ ಒಂದು ದೋಣಿಯನ್ನು ವಶಕ್ಕೆ ತೆಗೆದುಕೊಂಡಿದ್ದು,ಅವುಗಳಲ್ಲಿ ಒಟ್ಟು 27 ಮೀನುಗಾರರಿದ್ದರು ಎಂದು ಮೀನುಗಾರಿಕೆ ಇಲಾಖೆ ಮೂಲಗಳು ತಿಳಿಸಿವೆ.

ಮೀನುಗಾರರ ಬಂಧನವನ್ನು ಖಂಡಿಸಿರುವ ಮೀನುಗಾರರ ಸಂಘವು, ಅವರ ಮತ್ತು ದೋಣಿಗಳ ಬಿಡುಗಡೆಗಾಗಿ ಅಗತ್ಯ ಕ್ರಮವನ್ನು ತೆಗೆದುಕೊಳ್ಳುವಂತೆ ಕೇಂದ್ರ ಸರಕಾರವನ್ನು ಆಗ್ರಹಿಸಿದೆ. ಅಲ್ಲದೆ ಉಭಯ ದೇಶಗಳ ನಡುವಿನ ದೀರ್ಘಕಾಲೀನ ಸಮಸ್ಯೆಗಳನ್ನು ಬಗೆಹರಿಸಲು ಮತ್ತು ಉಭಯ ದೇಶಗಳ ಮೀನುಗಾರರು ಸಮುದ್ರದಲ್ಲಿ ಮುಕ್ತವಾಗಿ ಮೀನುಗಾರಿಕೆ ನಡೆಸಲು ಅವಕಾಶವನ್ನು ಕಲ್ಪಿಸಲು ಮಾತುಕತೆಗಳನ್ನೂ ನಡೆಸುವಂತೆಯೂ ಅದು ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News