ನಾಳೆ (ಅ.10) ಪಾಕಿಸ್ತಾನಕ್ಕೆ ಶ್ರೀಲಂಕಾದ ಸ್ಪಿನ್ ಸವಾಲು
ಹೈದರಾಬಾದ್ : ಇತ್ತೀಚೆಗೆ ನೆದರ್ಲ್ಯಾಂಡ್ಸ್ ತಂಡದ ವಿರುದ್ಧ ವಿಶ್ವಕಪ್ ಪಂದ್ಯದಲ್ಲಿ 81 ರನ್ನಿಂದ ಗೆಲುವು ದಾಖಲಿಸಿದ್ದ ಪಾಕಿಸ್ತಾನ ಕ್ರಿಕೆಟ್ ತಂಡ ಶ್ರೀಲಂಕಾ ವಿರುದ್ಧ ಮಂಗಳವಾರ ಆಡಲಿರುವ ವಿಶ್ವಕಪ್ನ ತನ್ನ 2ನೇ ಪಂದ್ಯದಲ್ಲಿ ತನ್ನ ಅನಿಶ್ಚಿತ ಫಾರ್ಮ್‌ನ್ನು ಕಾಯ್ದುಕೊಳ್ಳುವ ವಿಶ್ವಾಸದಲ್ಲಿದೆ.
ಅಸೋಸಿಯೇಟೆಡ್ ದೇಶ ನೆದರ್ಲ್ಯಾಂಡ್ಸ್ ವಿರುದ್ಧ ಪಾಕಿಸ್ತಾನದ ಪ್ರದರ್ಶನವು ಕೆಲವು ವಿಭಾಗದಲ್ಲಿ ಸುಧಾರಿಸಬೇಕಾದ ಅಗತ್ಯವಿದೆ ಎಂಬ ಸುಳಿವು ನೀಡಿತ್ತು. ಅತಿ ಮುಖ್ಯವಾಗಿ ಬ್ಯಾಟಿಂಗ್ ನಲ್ಲಿ ಪಾಕ್ ಸುಧಾರಣೆಯಾಗಬೇಕಾಗಿದೆ.ಶ್ರೀಲಂಕಾ ತಂಡದಲ್ಲಿ ಸ್ಪಿನ್ನರ್‌ಗಳೇ ಪ್ರಬಲ ಅಸ್ತ್ರವಾಗಿದ್ದು, ಪಾಕ್ಗೆ ಸ್ಪಿನ್ ಭೀತಿ ಎದುರಾಗಿದೆ.
ಸಾಂಪ್ರದಾಯಿಕವಾಗಿ ಪಾಕಿಸ್ತಾನವು ಸ್ಪಿನ್ ಬೌಲಿಂಗ್ ಎದುರು ಚೆನ್ನಾಗಿಯೇ ಆಡುತ್ತದೆ. ಮಹೀಶ್ ತೀಕ್ಷಣ ಹಾಗೂ ಡುನಿತ್ ವೆಲ್ಲಲಗೆ ಅವರಂತಹ ಬೌಲರ್ಗಳನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ.
ಶ್ರೀಲಂಕಾವು ದಕ್ಷಿಣ ಆಫ್ರಿಕಾದ ವಿರುದ್ಧ ದಿಲ್ಲಿಯಲ್ಲಿ ಅಡಿರುವ ಪಂದ್ಯದಲ್ಲಿ ರನ್ ಹೊಳೆಯಲ್ಲಿ ಕೊಚ್ಚಿಹೋಗಿತ್ತು.
ಏಶ್ಯಕಪ್ ಅಭಿಯಾನ ಮುಗಿದ ತಕ್ಷಣ ಭಾರತಕ್ಕೆ ಬಂದಿರುವ ಪಾಕಿಸ್ತಾನದ ಆಟಗಾರರು 10 ದಿನಗಳಿಂದ ಹೈದರಾಬಾದ್ ನಗರದಲ್ಲಿದ್ದಾರೆ. ಈಗಾಗಲೇ ಅಭ್ಯಾಸ ಪಂದ್ಯ ಸಹಿತ ಹಲವು ಪಂದ್ಯಗಳನ್ನು ಆಡಿ ರಾಜೀವ್ಗಾಂಧಿ ಸ್ಟೇಡಿಯಮ್ ವಾತಾವರಣಕ್ಕೆ ಹೊಂದಿಕೊಂಡಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ಬೌಲರ್ಗಳೆದುರು ಪಾಕ್ ಬ್ಯಾಟರ್ಗಳು ಪರದಾಟ ನಡೆಸಿದ್ದರು. 38 ರನ್ಗೆ 3 ವಿಕೆಟ್ಗಳನ್ನು ಕಳೆದುಕೊಂಡಿದ್ದ ಪಾಕ್ ತಂಡಕ್ಕೆ ಮುಹಮ್ಮದ್ ರಿಝ್ವಾನ್ ಹಾಗೂ ಸೌದ್ ಶಕೀಲ್ ಆಧಾರವಾಗಿದ್ದರು. ತಂಡದ ಮೊತ್ತವನ್ನು 286ಕ್ಕೆ ವಿಸ್ತರಿಸಿದ್ದರು.
ನೆದರ್ಲ್ಯಾಂಡ್ಸ್ ವಿರುದ್ಧ ಪ್ರದರ್ಶನವನ್ನು ಲಂಕಾದ ಎದುರು ಪುನರಾವರ್ತಿಸುವುದು ಪಾಕಿಸ್ತಾನಕ್ಕೆ ಹೆಚ್ಚು ಸವಾಲಿನದ್ದಾಗಿದೆ. ಪಾಕಿಸ್ತಾನಕ್ಕೆ ಡಚ್ಚರಿಗಿಂತ ಹೆಚ್ಚು ಸ್ಪರ್ಧೆ ನೀಡಲು ಶ್ರೀಲಂಕಾ ಸಿದ್ದತೆ ನಡೆಸಿದೆ.
1996ರ ವಿಶ್ವಕಪ್ ಚಾಂಪಿಯನ್ ಶ್ರೀಲಂಕಾ ತನ್ನದೇ ಆದ ಸಮಸ್ಯೆಯನ್ನು ಎದುರಿಸುತ್ತಿದೆ. ಇತ್ತೀಚೆಗೆ ದಿಲ್ಲಿಯಲ್ಲಿ ಹಲವು ಬ್ಯಾಟಿಂಗ್ ದಾಖಲೆ ನಿರ್ಮಿಸಿದ್ದ ದಕ್ಷಿಣ ಆಫ್ರಿಕಾ ವಿರುದ್ಧ ಲಂಕಾವು 102 ರನ್ನಿಂದ ಸೋತಿತ್ತು. ಐಪಿಎಲ್ನಲ್ಲಿ ಆಡಿರುವ ಲಂಕಾದ ಹಲವು ಆಟಗಾರರಿಗೆ ಭಾರತದ ವಾತಾವರಣದ ಪರಿಚಯವಿದೆ. ಪಾಕಿಸ್ತಾನದ ವಿರುದ್ಧ ಐಪಿಎಲ್ನಲ್ಲಿ ಆಡಿರುವ ಅನುಭವ ಬಳಸಿಕೊಳ್ಳಲು ಲಂಕಾ ಬಯಸಿದೆ.
*ಏಕದಿನ ಕ್ರಿಕೆಟ್ ನಲ್ಲಿ ಹೆಡ್-ಟು ಹೆಡ್
ಪಾಕಿಸ್ತಾನ ಹಾಗೂ ಶ್ರೀಲಂಕಾ ಒಟ್ಟು 156 ಪಂದ್ಯಗಳನ್ನು ಆಡಿದ್ದು ಈ ಪೈಕಿ ಪಾಕಿಸ್ತಾನ 92 ಪಂದ್ಯಗಳನ್ನು ಜಯಿಸಿದರೆ, ಶ್ರೀಲಂಕಾ ತಂಡ 59 ಪಂದ್ಯಗಳಲ್ಲಿ ಜಯ ಸಾಧಿಸಿದೆ. 1 ಪಂದ್ಯ ಟೈ ಆಗಿದೆ.
ವಿಶ್ವ ರ್ಯಾಂಕಿಂಗ್ ನಲ್ಲಿ 2ನೇ ಸ್ಥಾನದಲ್ಲಿರುವ ಪಾಕಿಸ್ತಾನವು ಕಳೆದ 5 ಏಕದಿನ ಪಂದ್ಯಗಳಲ್ಲಿ 2ರಲ್ಲಿ ಗೆಲುವು, 2ರಲ್ಲಿ ಸೋತಿದ್ದು, ಒಂದು ಪಂದ್ಯ ರದ್ದಾಗಿತ್ತು. ಅದೇ ರೀತಿ 8ನೇ ರ್ಯಾಂಕಿನಲ್ಲಿರುವ ಶ್ರೀಲಂಕಾವು ಹಿಂದಿನ 5 ಪಂದ್ಯಗಳಲ್ಲಿ 2ರಲ್ಲಿ ಗೆಲುವು ಸಾಧಿಸಿದರೆ, ಮೂರರಲ್ಲಿ ಸೋಲುಂಡಿದೆ.
ವಿಶ್ವಕಪ್ ಟೂರ್ನಿಗಳಲ್ಲಿ ಪಾಕಿಸ್ತಾನ ತಂಡ ಲಂಕಾ ವಿರುದ್ಧ ಆಡಿರುವ 8 ಪಂದ್ಯಗಳಲ್ಲಿ 7ರಲ್ಲಿ ಜಯ ಸಾಧಿಸಿ ಸಂಪೂರ್ಣ ಪ್ರಾಬಲ್ಯ ಮೆರೆದಿದೆ.