ರಾಜ್ಯದ ಸ್ಥಾನಮಾನ ಆಗ್ರಹಿಸುವ ಮೊಟ್ಟಮೊದಲ ಸಂಪುಟ ನಿರ್ಣಯ: ಉಮರ್ ಅಬ್ದುಲ್ಲಾ

Update: 2024-10-10 04:16 GMT

Photo: PTI 

ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ನೀಡುವಂತೆ ಆಗ್ರಹಿಸುವ ನಿರ್ಣಯವನ್ನು ನೂತನ ಸಚಿವ ಸಂಪುಟ ಮೊದಲ ನಿರ್ಣಯವಾಗಿ ಆಂಗೀಕರಿಸಲಿದೆ ಎಂದು ನ್ಯಾಷನಲ್ ಕಾನ್ಫರೆನ್ಸ್ ಉಪಾಧ್ಯಕ್ಷ ಉಮರ್ ಅಬ್ದುಲ್ಲಾ ಪ್ರಕಟಿಸಿದ್ದಾರೆ. ಈ ನಿರ್ಣಯವನ್ನು ಬಳಿಕ ಪ್ರಧಾನಿ ನರೇಂದ್ರ ಮೋದಿಯವರ ಬಳಿಗೆ ಒಯ್ಯಲಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಸಂವಿಧಾನದ 370ನೇ ವಿಧಿಯನ್ನು ರದ್ದುಪಡಿಸಿದ ಬಳಿಕ ಕಳೆದುಕೊಂಡ ರಾಜ್ಯದ ಸ್ಥಾನಮಾನ ಮತ್ತೆ ಜಮ್ಮು ಮತ್ತು ಕಾಶ್ಮೀರಕ್ಕೆ ಸಿಗಬೇಕು ಎನ್ನುವುದು ಧೀರ್ಘಕಾಲದ ಬೇಡಿಕೆ ಎಂದು ಅವರು ಸ್ಪಷ್ಟಪಡಿಸಿದರು.

"ನಮ್ಮ ಸಂಪುಟದ ಮೊದಲ ನಡಾವಳಿ ರಾಜ್ಯದ ಸ್ಥಾನಮಾನವನ್ನು ಮರಳಿ ನೀಡುವಂತೆ ಒತ್ತಾಯಿಸುವ ನಿರ್ಣಯವನ್ನು ಆಂಗೀಕರಿಸುವುದು. ಯಾರೇ ಮುಖ್ಯಮಂತ್ರಿಯಾದರೂ, ಆ ನಿರ್ಣಯದೊಂದಿಗೆ ದೆಹಲಿಗೆ ತೆರಳಿ, ತಮ್ಮ ಭರವಸೆಯನ್ನು ಈಡೇರಿಸುವಂತೆ ದೇಶದ ಹಿರಿಯ ನಾಯಕತ್ವವನ್ನು ಒತ್ತಾಯಿಸುವರು. ಜಮ್ಮು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಎನ್ನುವುದು ಇಡೀ ರಾಜ್ಯಕ್ಕೆ ನೀಡಿದ ಭರವಸೆ. ಯಾವುದೇ ಪಕ್ಷ ಅಥವಾ ಸರ್ಕಾರಕ್ಕೆ ನೀಡಿದ ಭರವಸೆಯಲ್ಲ" ಎಂದು ವಿಶ್ಲೇಷಿಸಿದರು.

ರಾಜ್ಯದಲ್ಲಿ ಸರ್ಕಾರ ರಚನೆ ಪ್ರಕ್ರಿಯೆಯನ್ನು ಆರಂಭಿಸುವ ಮೊದಲ ಹಂತವಾಗಿ ನ್ಯಾಷನಲ್ ಕಾನ್ಫರೆನ್ಸ್ ಶಾಸಕಾಂಗ ಪಕ್ಷದ ಸಭೆ ಗುರುವಾರ ನಡೆಯಲಿದೆ ಎಂದು ಪ್ರಕಟಿಸಿದರು.

ಸಂವಿಧಾನದ 370ನೇ ವಿಧಿ ಬಗ್ಗೆ ಪ್ರಸ್ತಾವಿಸಿದ ಅವರು, "ನಾವು ತಕ್ಷಣಕ್ಕೆ ನೀಡಲಾಗದ ಭರವಸೆಯನ್ನು ನೀಡುವ ಮೂಲಕ ನಾವು ಜನರನ್ನು ಮೂರ್ಖರನ್ನಾಗಿಸುವುದಿಲ್ಲ. ಆದಾಗ್ಯೂ 370ನೇ ವಿಧಿ ಬಗ್ಗೆ ಮಾತುಕತೆ ಮುಂದುವರಿಸುತ್ತೇವೆ ಹಾಗೂ ರಾಷ್ಟ್ರಮಟ್ಟದಲ್ಲಿ ಭವಿಷ್ಯದ ಸರ್ಕಾರ, ಈ ವಿಚಾರದಲ್ಲಿ ನಮ್ಮ ಜತೆಗೆ ಇರಲು ಬಯಸಬಹುದು" ಎಂಬ ಆಶಯ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - Safwan

contributor

Byline - ವಾರ್ತಾಭಾರತಿ

contributor

Similar News