ಅರುಣಾಚಲದ 30 ಸ್ಥಳಗಳಿಗೆ ಚೀನಾದ ಮರುನಾಮಕರಣಕ್ಕೆ ಅಮೆರಿಕದ ಪ್ರಬಲ ವಿರೋಧ
ಹೊಸದಿಲ್ಲಿ : ಅರುಣಾಚಲಪ್ರದೇಶದ ಮೇಲೆ ತನ್ನ ಹಕ್ಕು ಸ್ಥಾಪಿಸುವ ಯತ್ನವಾಗಿ ಚೀನಾವು ಆ ರಾಜ್ಯದ 30 ಸ್ಥಳಗಳಿಗೆ ಹೊಸ ಚೀನಿ ಹೆಸರುಗಳನ್ನು ಘೋಷಿಸಿರುವುದಕ್ಕೆ ಅಮೆರಿಕವು ಬುಧವಾರ ಬಲವಾಗಿ ಖಂಡಿಸಿದೆ.
‘‘ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ಮಿಲಿಟರಿ ಅಥವಾ ನಾಗರಿಕರಿಂದ ಒಳನುಸುಳುವಿಕೆ ಅಥವಾ ಅತಿಕ್ರಮಣ ನಡೆಸುವ ಮೂಲಕ ಪ್ರಾಂತೀಯ ಹಕ್ಕು ಸ್ಥಾಪನೆಗೆ ಏಕಪಕ್ಷೀಯವಾಗಿ ನಡೆಸುವ ಯಾವುದೇ ಪ್ರಯತ್ನವನ್ನು ಅಮೆರಿಕವು ಬಲವಾಗಿ ವಿರೋಧಿಸುತ್ತದೆ’’ ಅಮೆರಿಕನ್ ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇಂಡೊ-ಪೆಸಿಫಿಕ್ ಪ್ರಾಂತದಲ್ಲಿ ಚೀನಾದ ಪ್ರಭಾವವನ್ನು ತಡೆಗಟ್ಟುವ ತನ್ನ ಆಯಕಟ್ಟಿನ ತಂತ್ರಗಾರಿಕೆಯ ಭಾಗವಾಗಿ ಅಮೆರಿಕವು ಭಾರತ ಜೊತೆ ಕೈಜೋಡಿಸಿದ್ದು, ಬೇಹುಗಾರಿಕೆ ಮಾಹಿತಿಯನ್ನು ಹಂಚಿಕೊಳ್ಳುತ್ತಿದೆ ಹಾಗೂ ದ್ವಿಪಕ್ಷೀಯ ಸಹಕಾರವನ್ನು ಬಲಪಡಿಸಿಕೊಂಡಿದೆ.
ಈ ಮಧ್ಯೆ ಭಾರತದ ವಿದೇಶಾಂಗ ಇಲಾಖೆಯ ಅಧಿಕಾರಿಯೊಬ್ಬರು ಹೇಳಿಕೆ ನೀಡಿ, ಅರುಣಾಚಲಪ್ರದೇಶದ ಸ್ಥಳಗಳನ್ನು ಮರುನಾಮಕರಣಗೊಳಿಸುವ ಚೀನಾದ ವಿವೇಕರಹಿತ ಪ್ರಯತ್ನಗಳನ್ನು ಭಾರತವು ದೃಢವಾಗಿ ವಿರೋಧಿಸುತ್ತದೆ. ಶೋಧಿಸಿದ ಹೆಸರುಗಳನ್ನು ಇಡುವುದರಿಂದ ಅರುಣಾಚಲ ಪ್ರದೇಶದ ವಾಸ್ತವತೆಯನ್ನು ಬದಲಿಸಲು ಸಾಧ್ಯವಿಲ್ಲ ಮತ್ತು ಎಂದಿಗೂ ಅದು ಭಾರತದ ಅವಿಭಾಜ್ಯ ಹಾಗೂ ಸಮಗ್ರ ಭಾಗವಾಗಿಯೇ ಇರುವುದು ಎಂದು ಹೇಳಿದ್ದಾರೆ.
ಕೇಂದ್ರ ಸಚಿವ ಕಿರಣ್ ರಿಜಿಜು ಅರು ಈ ಬಗ್ಗೆ ಪ್ರತಿಕ್ರಿಯಿಸುತ್ತಾ, ಚೀನಾವು ಅರುಣಾಚಲ ಪ್ರದೇಶದ ಕೆಲವು ಸ್ಥಳಗಳಿಗೆ ಕೆಲವು ರೀತಿಯ ಹೆಸರುಗಳನ್ನು ನೀಡಿದೆ. ಆದರೆ ಅವರು (ಚೀನಾ) ಯಾಕೆ ಹಾಗೆ ಮಾಡುತ್ತಾರೆಂದು ನನಗೆ ತಿಳಿದಿಲ್ಲ. ನಮಗೆ ತೀವ್ರ ಅಸಮಾಧಾನವಾಗಿದೆ. ಚೀನಾ ಸರಕಾರವು ನಡೆಸುತ್ತಿರುವ ಈ ರೀತಿಯ ದುರುದ್ದೇಶಭರಿತ ಚಟುವಟಿಕೆಗಳನ್ನು ನಾವು ಸಂಪೂರ್ಣವಾಗಿ ತಿರಸ್ಕರಿಸುತ್ತೇವೆ.ಅಮೆರಿಕದ ವಿದೇಶಾಂಗ ಸಚಿವಾಲಯ ಕೂಡಾ ಈ ಬಗ್ಗೆ ಅತ್ಯಂತ ಸಮರ್ಪಕವಾಗಿ ಪ್ರತಿಕ್ರಿಯಿಸಿದೆ. ಚೀನಾವು ವಿಚಲಿತವಾಗಿದೆಯೆಂದು ನಾನು ಭಾವಿಸುತ್ತೇನೆ. ಕಾಂಗ್ರೆಸ್ ಆಳ್ವಿಕೆಯ ಸಮಯದಲ್ಲಿ ಈ ಪ್ರದೇಶಗಳು ಅಭಿವೃದ್ಧಿಯಾಗದೆ ಉಳಿದಿತ್ತು. ಮೋದಿಜಿಯವರ ಅವಧಿಯಲ್ಲಿ ಎಲ್ಲಾ ಪ್ರಮುಖ ಹೆದ್ದಾರಿಗಳು, ರಸ್ತೆಗಳು, ಸೇತುವೆಗಳು, 4ಜಿ ನೆಟ್ವರ್ಕ್ಗಳು, ನೀರಿನ ಪೂರೈಕೆ, ವಿದ್ಯುತ್ ಸೌಲಭ್ಯಗಳನ್ನು ಗಡಿಪ್ರದೇಶಗಳಿಗೆ ಅದರಲ್ಲೂ ದೀರ್ಘ ಸಮಯದಿಂದ ಕಡೆಗಣಿಸಲ್ಪಟ್ಟಿದ್ದ ಅರುಣಾಚಲಪ್ರದೇಶಕ್ಕೆ ಒದಗಿಸಲಾಗಿದೆ’’ ಎಂದರು.
ಮೋದಿ ಆಡಳಿತದಲ್ಲಿ ಭಾರತವು ಮಹಾನ್ ಶಕ್ತಿಯಾಗಿ ಹೊರಹೊಮ್ಮಿದೆ ಎಂದು ಗಮನಸೆಳೆದ ಅವರು, ಭಾರತವು ಇತರರಿಗೆ ಸಮಸ್ಯೆಗಳನ್ನು ಸೃಷ್ಟಿಸುವುದಿಲ್ಲ. ಆದರೆ ಒಂದು ವೇಳೆ ತನಗೆ ತೊಂದರೆ ನೀಡಿದಲ್ಲಿ ಅದು ಸೂಕ್ತ ಉತ್ತರವನ್ನು ನೀಡುತ್ತದೆ ಎಂದು ರಿಜಿಜು ಹೇಳಿಕೆಯಲ್ಲಿ ತಿಳಿಸಿದ್ದಾರೆ.