ಕಾಂಗ್ರೆಸ್ ವಿರುದ್ಧ ಪ್ರತಿಭಟಿಸಿದ್ದಕ್ಕೆ ಕ್ಷಮಿಸುವಂತೆ ಮನವಿ ಮಾಡಿದ ನೋಯ್ಡಾದ ಗಲ್ಗೋತಿಯಾಸ್ ವಿವಿ ವಿದ್ಯಾರ್ಥಿಗಳು

Update: 2024-05-02 18:15 GMT

Laxmi Sharma, student at Galtias University | X

ಹೊಸದಿಲ್ಲಿ : ಗಲ್ಗೋತಿಯಾಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಲಕ್ಷ್ಮಿ ಶರ್ಮಾ, ವಾಸ್ತವತೆಯ ಬಗ್ಗೆ ತಿಳುವಳಿಕೆಯಿಲ್ಲದೆ ಕಾಂಗ್ರೆಸ್ ಪಕ್ಷದ ವಿರುದ್ಧ ಇತರ ವಿದ್ಯಾರ್ಥಿಗಳೊಂದಿಗೆ ಪ್ರತಿಭಟನೆ ನಡೆಸಿದ್ದಕ್ಕಾಗಿ ಎಕ್ಸ್‌ನಲ್ಲಿ ಕ್ಷಮೆಯಾಚಿಸಿದ್ದಾರೆ.

ತಮ್ಮ ಎಕ್ಸ್ ಖಾತೆಯ ಪೋಸ್ಟ್ ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಅವರು, "ನಮ್ಮ ತಪ್ಪುಗಳನ್ನು ನಾವು ಅರಿತುಕೊಂಡಿದ್ದೇವೆ. ಇದು ಪ್ರಚಾರ ಅಭಿಯಾನ ಎಂದು ನಮಗೆ ತಿಳಿದಿರಲಿಲ್ಲ. ಕಂಗನಾ ರನೌತ್ ಅವರನ್ನು ಭೇಟಿ ಮಾಡಲು ನಮಗೆ ಅವಕಾಶ ಸಿಗುತ್ತದೆ ಎಂದು ನಮಗೆ ತಿಳಿಸಲಾಗಿತ್ತು” ಎಂದು ಹೇಳಿದ್ದಾರೆ.

"ವಿಶ್ವವಿದ್ಯಾಲಯದ ಆಡಳಿತವು ನಮಗೆ ಆ ಫಲಕಗಳನ್ನು ಕೊಟ್ಟು ಭಾಗವಹಿಸುವಂತೆ ಒತ್ತಾಯಿಸಿತು. ನಾವು ಯಾವುದೇ ರಾಜಕೀಯ ಪಕ್ಷದ ಪರ ಇರುವವರಲ್ಲ. ನಮಗೆ ಸಂಪೂರ್ಣ ಇಂಟರ್ನಲ್ ಅಂಕಗಳನ್ನು ನೀಡುವುದಾಗಿ ಭರವಸೆ ನೀಡಲಾಯಿತು" ಎಂದು ಅವರು ಆರೋಪಿಸಿದರು.

ವಿದ್ಯಾರ್ಥಿಗಳು ಕಾಂಗ್ರೆಸ್ ವಿರುದ್ಧ ಪ್ರಬಲ ಹೇಳಿಕೆ ನೀಡಿದರೆ ಇತ್ತೀಚೆಗೆ ರಾಜಕೀಯಕ್ಕೆ ಸೇರಿರುವ ಕಂಗನಾ ರಣಾವತ್ ಅವರನ್ನು ಭೇಟಿ ಮಾಡಲು ಅವಕಾಶ ಸಿಗುತ್ತದೆ ಎಂದು ವಿಶ್ವವಿದ್ಯಾಲಯದ ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಹೇಳಿತ್ತು ಎಂದು ಶರ್ಮಾ ಹೇಳಿದ್ದಾರೆ.

ತನ್ನ ಎಕ್ಸ್ ಪೋಸ್ಟ್‌ನಲ್ಲಿ, ವಿದ್ಯಾರ್ಥಿಗಳಿಗೆ ವಾಸ್ತವತೆಯ ಬಗ್ಗೆ ಅರವಿರಲಿಲ್ಲ. ವಿವಾದ ಭುಗಿಲೆದ್ದ ನಂತರ, ವಿದ್ಯಾರ್ಥಿಗಳು X ನಲ್ಲಿ ಪ್ರತಿಭಟನೆ ನಡೆಸುತ್ತಿರುವ ಎಲ್ಲಾ ಫೋಟೋಗಳನ್ನು ಅಳಿಸಿ ಹಾಕಿದ್ದಾರೆ ಎಂದು ಶರ್ಮಾ ಅವರು ವಿವರಿದ್ದಾರೆ.

ವಿವಾದ ಶುರುವಾಗಿದ್ದು ಹೇಗೆ?

ಪಿತ್ರಾರ್ಜಿತ ಆಸ್ತಿ ತೆರಿಗೆ ಮತ್ತು ಸಂಪತ್ತು ಹಂಚಿಕೆಗೆ ಸಂಬಂಧಿಸಿದಂತೆ ನಡೆಯುತ್ತಿರುವ ವಿವಾದಾತ್ಮಕ ವಿಷಯಗಳ ವಿರುದ್ಧ ಪ್ರತಿಭಟಿಸಲು ದಿಲ್ಲಿಯ ಕಾಂಗ್ರೆಸ್ ಪ್ರಧಾನ ಕಛೇರಿಯತ್ತ ಪಾದಯಾತ್ರೆ ನಡೆಸುತ್ತಿದ್ದ ಗಲ್ಗೋತಿಯಾಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳನ್ನು ಆಜ್ ತಕ್ ಪತ್ರಕರ್ತ ಸಂದರ್ಶಿಸುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ವರದಿಗಾರರು ಕೇಳಿದ ಪ್ರಶ್ನೆಗಳಿಗೆ ಯಾವುದೇ ವಿದ್ಯಾರ್ಥಿಗೆ ನಿಖರವಾಗಿ ಉತ್ತರಿಸಲು ಸಾಧ್ಯವಾಗಲಿಲ್ಲ. ಆಜ್ ತಕ್ ಪ್ರಕಾರ, ಎಲ್ಲಾ ವಿದ್ಯಾರ್ಥಿಗಳು ಗ್ರೇಟರ್ ನೋಯ್ಡಾದ ಗಲ್ಗೋತಿಯಾಸ್ ವಿಶ್ವವಿದ್ಯಾಲಯದವರು.

ಲಕ್ಷ್ಮಿ ಶರ್ಮಾ ಗಲ್ಗೋತಿಯಾಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿ ಎಂದು ತಕ್ಷಣವೇ ಪರಿಶೀಲಿಸಲು ಸಾಧ್ಯವಾಗಲಿಲ್ಲ. ಆದರೆ X ನಲ್ಲಿ ಘಟನೆಯ ಕುರಿತು ಅವರ ಕಮೆಂಟ್‌ಗಳು ವೈರಲ್ ಆಗಿವೆ. ಆಕೆ ಗಲ್ಗೋತಿಯಾಸ್ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯಾಗಿರಬಹುದು ಎಂದು ಭಾವಿಸಿ ಎಕ್ಸ್ ಬಳಕೆದಾರರು ಆಕೆಗೆ ಬೆಂಬಲ ನೀಡಿದ್ದಾರೆ.

ವಿಡಿಯೋ ವರದಿಯು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ, ಸಾಮಾಜಿಕ ಜಾಲತಾಣದ ಬಳಕೆದಾರರು ಶಿಕ್ಷಣದ ಸ್ಥಿತಿ ಮತ್ತು ವಿದ್ಯಾರ್ಥಿಗಳ ಜಾಗೃತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. ವಿದ್ಯಾರ್ಥಿಗಳಿಗೆ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ವಿಷಯಗಳು ಮತ್ತು ಇಲ್ಲಿನ ವಾಸ್ತವತೆಯ ಬಗ್ಗೆ ತಿಳುವಳಿಕೆಯ ಕೊರತೆಯಿರುವುದಕ್ಕೆ ಅನೇಕರು ವಿದ್ಯಾರ್ಥಿಗಳನ್ನು ಟ್ರೋಲ್ ಮಾಡಿದ್ದಾರೆ.

ಖಾಸಗಿ ಗಲ್ಗೋತಿಯಾಸ್ ವಿಶ್ವವಿದ್ಯಾಲಯದ ಆಡಳಿತವು ರಾಜಕೀಯ ಪಕ್ಷದ ಮುಖ್ಯ ಕಚೇರಿಯ ಕಡೆಗೆ ವಿದ್ಯಾರ್ಥಿಗಳ ಪ್ರತಿಭಟನಾ ಮೆರವಣಿಗೆಯನ್ನು ಏಕೆ ಆಯೋಜಿಸಿದರು ಎಂದು ಹಲವರು ಪ್ರಶ್ನೆಗಳನ್ನು ಎತ್ತಿದ್ದಾರೆ.

ವಿದ್ಯಾರ್ಥಿಗಳ ಮೆರವಣಿಗೆಯ ಬಗ್ಗೆ ಬಹಿರಂಗವಾಗಿ ಮಾತನಾಡಿರುವ ಎಕ್ಸ್ ಬಳಕೆದಾರ ರೋಶನ್ ರೈ, ಲಕ್ಷ್ಮಿ ಶರ್ಮಾ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಕ್ಕಾಗಿ ಶ್ಲಾಘಿಸಿದ್ದಾರೆ. ಅವರು ತಮ್ಮ ಅಧ್ಯಯನದ ಮೇಲೆ ಉತ್ತಮವಾಗಿ ಗಮನ ಹರಿಸುವಂತೆ ಸಲಹೆ ನೀಡಿದ್ದಾರೆ. "ತಪ್ಪನ್ನು ಒಪ್ಪಿಕೊಳ್ಳುವ ನಿಮ್ಮ ಧೈರ್ಯವನ್ನು ಮೆಚ್ಚಬೇಕು. ನಿಮ್ಮ ತಪ್ಪನ್ನು ಅರಿತುಕೊಂಡಿರುವುದು ಗಮನಾರ್ಹ, ನಿಮ್ಮ ಅಧ್ಯಯನದತ್ತ ಗಮನಹರಿಸಿ. ನಿಮ್ಮ ಭವಿಷ್ಯಕ್ಕಾಗಿ ಆಲ್ ದಿ ಬೆಸ್ಟ್" ಎಂದು ಅವರು ಪ್ರತಿಕ್ರಿಯಿಸಿದ್ದಾರೆ.

ಮತ್ತೊಬ್ಬ X ಬಳಕೆದಾರರು, "ನಿಮ್ಮ ಪ್ರಾಮಾಣಿಕತೆಯನ್ನು ನಾನು ಪ್ರಶಂಸಿಸುತ್ತೇನೆ. ಇದು ವಿದ್ಯಾರ್ಥಿಗಳ ತಪ್ಪಲ್ಲ. ವಿವಿ ಆಡಳಿತವನ್ನು ದೂಷಿಸಬೇಕಾಗಿದೆ" ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಲಕ್ಷ್ಮೀ ಶರ್ಮಾ, "ನಮ್ಮನ್ನು ಮೂರ್ಖರು ಎಂದು ಕರೆಯಲಾಗುತ್ತಿದೆ. ನಾವೆಲ್ಲರೂ ಇದರಿಂದ ಸಂಕಷ್ಟಕ್ಕೊಳಗಾಗಿದ್ದೇವೆ. ಒಂದು ದಿನ ನಮ್ಮ ಜೀವನವನ್ನು ಬದಲಾಯಿಸಿದೆ" ಎಂದು ಹೇಳಿದ್ದಾರೆ.

ವಿಶ್ವವಿದ್ಯಾನಿಲಯದ ಕುರಿತು ಪ್ರತಿಕ್ರಿಯಿಸಿದ ಎಕ್ಸ್ ಬಳಕೆದಾರರು, ಬಿಜೆಪಿಯ ಅಪಪ್ರಚಾರದ ಹೊರತಾಗಿ ವಿಶ್ವವಿದ್ಯಾನಿಲಯವು ನೀಡಿದ ಮೂರನೇ ದರ್ಜೆಯ ಶಿಕ್ಷಣವೂ ಬಹಿರಂಗಗೊಂಡಿದೆ ಎಂದು ಹೇಳಿದರು. "ಈಗ ನಿಮಗೆ ಯಾರು ಕೆಲಸ ಕೊಡುತ್ತಾರೆ?", ಅವರು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

ಅಪಪ್ರಚಾರದ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ಮತ್ತೊಬ್ಬ ಬಳಕೆದಾರರು ಕಾಂಗ್ರೆಸ್‌ ಪಕ್ಷದ ಕಾನೂನು ಕೋಶವನ್ನು ಟ್ಯಾಗ್ ಮಾಡಿ, ಚುನಾವಣಾ ಸಮಯದಲ್ಲಿ ಅಪಪ್ರಚಾರವನ್ನು ಹರಡುವುದರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಕಮೆಂಟ್ ಮಾಡಿ ಕೇಳಿಕೊಂಡಿದ್ದಾರೆ.

ಹಲವಾರು X ಬಳಕೆದಾರರು ಶರ್ಮಾ ಅವರನ್ನು ಟೀಕಿಸಿದ್ದಾರೆ. ಒಬ್ಬ X ಬಳಕೆದಾರರು ಒಂದು ಕಡೆ ನೀವು ರಾಜಕೀಯ ಒಲವಿರುವವರು ಎಂದು ಹೇಳಿಕೊಳ್ಳುತ್ತೀರಿ. ಮತ್ತೊಂದೆಡೆ, ನೀವು ರಾಜಕೀಯದ ಮೂಲ ವಾಸ್ತವಗಳ ಬಗ್ಗೆ ಸಂಪೂರ್ಣವಾಗಿ ತಿಳಿದಿಲ್ಲ ಎಂದೂ ಹೇಳುತ್ತೀರಿ. ನಿಮ್ಮ ನಡೆಗೆ ವಿರೋಧ ವ್ಯಕ್ತವಾಗಿರದಿದ್ದರೆ ನೀವು ಖಂಡಿತವಾಗಿಯೂ ಕ್ಷಮೆಯಾಚಿಸುತ್ತಿರಲಿಲ್ಲ. ಆಜ್ಞೆಗಳನ್ನು ಕುರುಡಾಗಿ ಪಾಲಿಸುವ ಎಲ್ಲರಿಗೂ ಇಲ್ಲಿ ಪಾಠವಿದೆ. ನೀವು ಸಣ್ಣ ವಯಸ್ಸಿನವರು, ನಿಮ್ಮನ್ನು ಕ್ಷಮಿಸಲೇಬೇಕು" ಎಂದು ಹೇಳಿದ್ದಾರೆ.

ಸೌಜನ್ಯ : freepressjournal.in

Tags:    

Writer - ವಾರ್ತಾಭಾರತಿ

contributor

Editor - Musaveer

contributor

Byline - ವಾರ್ತಾಭಾರತಿ

contributor

Similar News