ಪ್ರಧಾನಿ ಮೋದಿ, ಅಮಿತ್ ಶಾ ವಿರುದ್ಧ ಕಾನೂನು ಕ್ರಮದ ಎಚ್ಚರಿಕೆ ನೀಡಿದ ಸುಬ್ರಮಣಿಯನ್ ಸ್ವಾಮಿ; ಕಾರಣವೇನು?
ಹೊಸದಿಲ್ಲಿ: ಬ್ರಿಟಿಷ್ ಪೌರತ್ವ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಮತ್ತು ಲೋಕಸಭೆಯಲ್ಲಿ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರನ್ನು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ರಕ್ಷಿಸುತ್ತಿದ್ದಾರೆ ಎಂದು ಆರೋಪಿಸುತ್ತಿರುವ ಹಿರಿಯ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ತಾವು ಮೋದಿ ಹಾಗೂ ಶಾ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗುವುದಾಗಿ ಎಚ್ಚರಿಸಿದ್ದಾರೆ.
ರಾಹುಲ್ ಗಾಂಧಿ 2003ರಲ್ಲಿ ಬ್ರಿಟಿಷ್ ಪೌರತ್ವ ಪಡೆದು ಲಂಡನ್‌ನಲ್ಲಿ ಬ್ಯಾಕ್ ಆಪ್ಸ್ ಎಂಬ ಕಂಪನಿ ಸ್ಥಾಪಿಸಿದ್ದರು ಎಂದು ಸ್ವಾಮಿ ಬಹಳ ಹಿಂದಿನಿಂದಲೂ ಆರೋಪಿಸುತ್ತಿದ್ದು ರಾಹುಲ್ ಹೀಗೆ ಮಾಡಿರುವುದರಿಂದ ಅವರ ಭಾರತೀಯ ಪೌರತ್ವ ಅಮಾನ್ಯವಾಗುತ್ತದೆ ಎಂದು ಅವರು ವಾದಿಸುತ್ತಲೇ ಬಂದಿದ್ದಾರೆ.
“ರಾಹುಲ್ ಗಾಂಧಿ ಅವರು 2003ರಲ್ಲಿ ಬ್ರಿಟಿಷ್ ಪೌರತ್ವ ಪಡೆದು ಅಲ್ಲಿ ಬ್ಯಾಕ್ ಆಪ್ಸ್ ಎಂಬ ಕಂಪನಿಯನ್ನು ಲಂಡನ್‌ನಲ್ಲಿ ಆರಂಭಿಸಿದ ಹೊರತಾಗಿಯೂ ವಿದೇಶಿ ನಾಗರಿಕರಾಗಿರುವ ರಾಹುಲ್ ಗಾಂಧಿ ಅವರನ್ನು ಮೋದಿ ಮತ್ತು ಶಾ ಏಕೆ ರಕ್ಷಿಸುತ್ತಿದ್ದಾರೆ? ಅವರ ಭಾರತೀಯ ಪೌರತ್ವ ಅಮಾನ್ಯವಾಗಿದೆ. ಮೋದಿ ಅವರನ್ನು ರಕ್ಷಿಸುವುದನ್ನು ಮುಂದುವರಿಸಿದರೆ, ನಾನು ಅವರ ವಿರುದ್ಧ (ಮೋದಿ, ಶಾ) ಪ್ರಕರಣ ದಾಖಲಿಸಬೇಕಾಗಬಹುದು,” ಎಂದು ಸ್ವಾಮಿ ಟ್ವೀಟ್ ಮಾಡಿದ್ದಾರೆ.
ತಾವು 2019ರಲ್ಲಿ ರಾಹುಲ್ ವಿರುದ್ಧ ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಸಲ್ಲಿಸಿದ ದೂರಿನ ಪ್ರತಿಯನ್ನೂ ಸ್ವಾಮಿ ಹಂಚಿಕೊಂಡಿದ್ದಾರೆ. ಈ ದೂರಿನ ಆಧಾರದಲ್ಲಿ ಆಗ ಕೇಂದ್ರ ಸರ್ಕಾರ ರಾಹುಲ್ ಅವರಿಗೆ ನೋಟಿಸ್ ಜಾರಿಗೊಳಿಸಿ ಸ್ವಾಮಿ ಆರೋಪದ ಕುರಿತು ಅವರ ಪ್ರತಿಕ್ರಿಯೆ ಕೇಳಿದ್ದರು.
ಇನ್ನೊಂದು ಪೋಸ್ಟ್‌ನಲ್ಲಿ ಅವರು ರಾಹುಲ್ ಗಾಂಧಿ ಬ್ರಿಟಿಷ್ ಸರ್ಕಾರಕ್ಕೆ ಸಲ್ಲಿಸಿದ್ದರೆನ್ನಲಾದ ವಾರ್ಷಿಕ ರಿಟರ್ನ್ಸ್‌ನ ಪ್ರತಿಯೊಂದನ್ನು ಹಂಚಿಕೊಂಡಿದ್ದಾರೆ.
ರಾಹುಲ್ ಗಾಂಧಿ ಅವರ ಭಾರತೀಯ ಪೌರತ್ವವನ್ನು ರದ್ದುಗೊಳಿಸಬೇಕೆಂದು ಸ್ವಾಮಿ 2015ರಿಂದ ಆಗ್ರಹಿಸುತ್ತಿದ್ದಾರೆ. ಸುಪ್ರೀಂ ಕೋರ್ಟ್ 2015ರಲ್ಲಿ ರಾಹುಲ್ ಪೌರತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿಯನ್ನು ವಜಾಗೊಳಿಸಿತ್ತು ಹಾಗೂ ಅದನ್ನು ಕ್ಷುಲ್ಲಕ ಎಂದು ವಿವರಿಸಿತ್ತು. ಇದೇ ವಿಚಾರದಲ್ಲಿ ದಿಲ್ಲಿಯ ಇಬ್ಬರು ನಿವಾಸಿಗಳು ಸಲ್ಲಿಸಿದ್ದ ಅರ್ಜಿಗಳನ್ನು ಮೇ 2019ರಲ್ಲಿ ಸುಪ್ರೀಂ ಕೋರ್ಟ್ ಮತ್ತೆ ವಜಾಗೊಳಿಸಿತ್ತು.