ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದತಿ ವಿರುದ್ಧದ ಅರ್ಜಿಗಳನ್ನು ಆಗಸ್ಟ್ 2 ರಿಂದ ಆಲಿಸಲು ಸುಪ್ರೀಂ ಕೋರ್ಟ್ ತೀರ್ಮಾನ
ಹೊಸದಿಲ್ಲಿ: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಿರುವ ಕೇಂದ್ರ ಸರಕಾರದ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳನ್ನು ಆಗಸ್ಟ್ 2ರಿಂದ ಆಲಿಸಲು ಸುಪ್ರೀಂಕೋರ್ಟ್ ನಿರ್ಧರಿಸಿದೆ ಎಂದು NDTV ವರದಿ ಮಾಡಿದೆ.
ಮೂರು ವರ್ಷಗಳ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ 370 ನೇ ವಿಧಿಯನ್ನು ರದ್ದುಗೊಳಿಸುವುದು ಹಾಗೂ ರಾಜ್ಯವನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಭಜಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ಇಂದು ಕೈಗೆತ್ತಿಕೊಂಡಿದ್ದು, ಅರ್ಜಿಗಳನ್ನು ಆಗಸ್ಟ್ 2 ರಿಂದ ದಿನನಿತ್ಯವೂ ವಿಚಾರಣೆ ನಡೆಸಲು ನಿರ್ಧರಿಸಿದೆ.
ಸಂವಿಧಾನ ಪೀಠದ ಮುಂದೆ ಅರ್ಜಿಗಳ ವಿಚಾರಣೆಯು ಆಗಸ್ಟ್ 2, ಬೆಳಗ್ಗೆ 10:30 ರಂದು ಪ್ರಾರಂಭವಾಗುತ್ತದೆ. ನಂತರ ವಿವಿಧ ದಿನಗಳನ್ನು ಹೊರತುಪಡಿಸಿ, ಸೋಮವಾರ ಹಾಗೂ ಶುಕ್ರವಾರದಂದು ದೈನಂದಿನ ಆಧಾರದ ಮೇಲೆ ಮುಂದುವರಿಯುತ್ತದೆ ”ಎಂದು ಭಾರತದ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹೇಳಿದರು.
ಇಂದಿನ ವಿಚಾರಣೆಯಲ್ಲಿ, ಹಿರಿಯ ವಕೀಲ ರಾಜು ರಾಮಚಂದ್ರನ್ ಅವರು ಏಳು ಅರ್ಜಿದಾರರ ಪರವಾಗಿ ವಾದಿಸುತ್ತಿದ್ದೇನೆ. ಶಾ ಫೈಸಲ್ ಹಾಗೂ ಶೆಹ್ಲಾ ರಶೀದ್ ತಮ್ಮ ಹೆಸರನ್ನು ಅಳಿಸಲು ಬಯಸುತ್ತಾರೆ ಎಂದು ಹೇಳಿದರು.
ಫೈಸಲ್ ಐಎಎಸ್ ಅಧಿಕಾರಿಯಾಗಿದ್ದು, ಹೀಗಾಗಿ ಅವರು ಈ ವಿಷಯವನ್ನು ಮುಂದುವರಿಸಲು ಬಯಸುವುದಿಲ್ಲ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು. ಸಿಜೆಐ ಅಳಿಸುವಿಕೆಗೆ ಅವಕಾಶ ಮಾಡಿಕೊಟ್ಟರು.
370ನೇ ವಿಧಿಯನ್ನು ಆಗಸ್ಟ್ 2019 ರಲ್ಲಿ ಶಾಸಕಾಂಗ ಮತ್ತು ಕಾರ್ಯಕಾರಿ ನಿರ್ಧಾರಗಳ ಮೂಲಕ ರದ್ದುಗೊಳಿಸಲಾಯಿತು, ನಂತರ ರಾಜ್ಯವನ್ನು ವಿಭಜಿಸಲು ಜಮ್ಮು ಮತ್ತು ಕಾಶ್ಮೀರ ಮರುಸಂಘಟನೆ ಕಾಯಿದೆಯನ್ನು ಸಂಸತ್ತು ಅಂಗೀಕರಿಸಿತು.