ಎನ್‌ಡಿಎಗೆ ಮರಳಲು ಟಿಡಿಪಿ ಸಜ್ಜು: ಮುಂದಿನ ವಾರ ಬಿಜೆಪಿ ಜೊತೆ ಮೈತ್ರಿ ಘೋಷಣೆ ಸಾಧ್ಯತೆ

Update: 2024-02-17 17:43 GMT

ಎನ್.ಚಂದ್ರಬಾಬು ನಾಯ್ಡು Photo: PTI

ಹೈದರಾಬಾದ್ : ತೆಲುಗು ದೇಶಂ ಪಕ್ಷ (ಟಿಡಿಪಿ)ವು ಬಿಜೆಪಿ ನೇತೃತ್ವದ ಎನ್‌ ಡಿ ಎ ಗೆ ಮರಳಲು ಸಜ್ಜಾಗಿದ್ದು, ಈ ಕುರಿತು ಮುಂದಿನ ವಾರ ಘೋಷಣೆ ಹೊರಬೀಳುವ ಸಾಧ್ಯತೆಯಿದೆ. ಮುಂಬರುವ ವಿಧಾನಸಭಾ ಮತ್ತು ಲೋಕಸಭಾ ಚುನಾವಣೆಗಳಿಗಾಗಿ ಸ್ಥಾನ ಹಂಚಿಕೆ ಮಾತುಕತೆಗಳು ಹೆಚ್ಚು ಕಡಿಮೆ ಅಂತಿಮಗೊಂಡಿವೆ ಎಂದು ಉನ್ನತ ಮೂಲಗಳು ಸುದ್ದಿಸಂಸ್ಥೆಗೆ ದೃಢಪಡಿಸಿವೆ.

ಟಿಡಿಪಿ ವರಿಷ್ಠ ಹಾಗೂ ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಅವರು ದಿಲ್ಲಿಯಲ್ಲಿ ಕೇಂದ್ರ ಗೃಹಸಚಿವ ಅಮಿತ್ ಶಾ ಅವರೊಂದಿಗೆ ಮಾತುಕತೆ ನಡೆಸಿದ ಸುಮಾರು 10 ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.

ಫೆ.20 ಅಥವಾ 21ರಂದು ಪ್ರಕಟಣೆ ಹೊರಬೀಳಬಹುದು. ಟಿಡಿಪಿ ಮತ್ತು ಬಿಜೆಪಿ ನಡುವೆ ಯಾವುದೇ ಹಗೆತನವಿಲ್ಲ, 2019ರ ಚುನಾವಣೆಗಳಿಗೆ ಮುನ್ನ ತಾನು ಎನ್‌ ಡಿ ಎ ತೊರೆಯಲು ಕಾರಣವಾಗಿದ್ದ ಸಂದರ್ಭಗಳನ್ನು ನಾಯ್ಡು ಶಾ ಅವರಿಗೆ ವಿವರಿಸಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿದವು.

ಮೈತ್ರಿಯ ಭಾಗವಾಗಿ ಟಿಡಿಪಿ 30 ವಿಧಾನಸಭಾ ಮತ್ತು 10 ಲೋಕಸಭಾ ಸ್ಥಾನಗಳನ್ನು ಬಿಜೆಪಿ-ಜನಸೇನಾ ಕೂಟಕ್ಕೆ ಬಿಟ್ಟುಕೊಡಬಹುದು. ಬಿಜೆಪಿ 5ರಿಂದ 10 ವಿಧಾನಸಭಾ ಸ್ಥಾನಗಳಿಗೆ ಸ್ಪರ್ಧಿಸಬಹುದು ಮತ್ತು ಉಳಿದ ಕ್ಷೇತ್ರಗಳನ್ನು ನಟ ಪವನ್ ಕಲ್ಯಾಣ್ ರ ಜನಸೇನೆಗೆ ನೀಡಬಹುದು. ಆದರೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಏಳು ಸ್ಥಾನಗಳಿಗೆ ಸ್ಪರ್ಧಿಸಬಹುದು ಮತ್ತು ಉಳಿದ ಮೂರನ್ನು ಜನಸೇನೆಗೆ ನೀಡಬಹುದು ಎಂದು ಅವು ತಿಳಿಸಿದವು.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News