“ನಾವು ಹೋರಾಡಲು ಮತ್ತೊಂದು ದಿನ ಬರುತ್ತೇವೆ”
ಹೊಸದಿಲ್ಲಿ: ಸಲಿಂಗ ವಿವಾಹದ ಕುರಿತು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಸಲಿಂಗಿ ದಂಪತಿಗಳು, ನಾವು ಮತ್ತೊಂದು ದಿನ ಹೋರಾಡುತ್ತೇವೆ ಎಂದು ಶಪಥ ಮಾಡಿದ್ದಾರೆ ಎಂದು ndtv.com ವರದಿ ಮಾಡಿದೆ.
ಇಂದು ಸುಪ್ರೀಂಕೋರ್ಟ್ ಎದುರು ಉಂಗುರ ಬದಲಿಸಿಕೊಂಡ ಲೇಖಕ ಅನನ್ಯ ಕೋಟಿಯ ಮತ್ತು ವಕೀಲ ಉತ್ಕರ್ಷ್ ಸಕ್ಸೇನಾ, ತಮ್ಮ ನಿಶ್ಚಿತಾರ್ಥವನ್ನು ಪ್ರಕಟಿಸಿದರು.
ಸುಪ್ರೀಂಕೋರ್ಟ್ ಸಲಿಂಗ ವಿವಾಹವನ್ನು ಮಾನ್ಯ ಮಾಡಲು ನಿರಾಕರಿಸಿತಾದರೂ, ಯಾವುದೇ ವ್ಯಕ್ತಿಗಳು ಒಂದಾಗಿ ಬದುಕಲು ಬಯಸಿದರೆ, ಅಂತಹ ವ್ಯಕ್ತಿಗಳ ಹಕ್ಕನ್ನು ಕೇವಲ ಆತನ ಲೈಂಗಿಕ ಆಸಕ್ತಿ ಆಧರಿಸಿ ನಿರ್ಬಂಧಿಸಲಾಗುವುದಿಲ್ಲ ಎಂದು ಒತ್ತಿ ಹೇಳಿತ್ತು. ಐದು ಮಂದಿ ನ್ಯಾಯಾಧೀಶರನ್ನೊಳಗೊಂಡ ನ್ಯಾಯಪೀಠವು ಪ್ರಾಥಮಿಕವಾಗಿ ಸಲಿಂಗಿ ದಂಪತಿಗಳ ದತ್ತು ಪಡೆಯುವ ಹಕ್ಕಿನ ಕುರಿತು ನಾಲ್ಕು ವಿಭಿನ್ನ ತೀರ್ಪುಗಳನ್ನು ನೀಡಿತ್ತು.
ಈ ನ್ಯಾಯಪೀಠದ ನ್ಯಾಯಾಧೀಶರು, ಸಲಿಂಗಿ ದಂಪತಿಗಳು ಪಡಿತರ ಚೀಟಿಗಳು, ಪಿಂಚಣಿ, ಗ್ರಾಚ್ಯುಟಿ ಹಾಗೂ ಉತ್ತರಾಧಿಕಾರಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಎದುರಿಸುತ್ತಿರುವ ಪ್ರಾಯೋಗಿಕ ಸಮಸ್ಯೆಗಳ ಕುರಿತು ಅಧ್ಯಯನ ನಡೆಸಲು ಸಮಿತಿಯೊಂದನ್ನು ರಚಿಸಲು ಮುಂದಾಗಬೇಕು ಎಂದು ಕೇಂದ್ರ ಸರ್ಕಾರಕ್ಕೆ ಸೂಚಿಸಿದ್ದರು.
ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಅನನ್ಯ ಕೋಟಿಯ, “ಭೂತಕಾಲದಲ್ಲಿ ನಾವು ಕಾನೂನು ಹೋರಾಟದಲ್ಲಿ ಸೋಲುಂಡಿದ್ದೇವಾದರೂ, ನಾವು ಈ ವಿಷಯವನ್ನು ಇಲ್ಲಿಗೇ ಕೈಬಿಡುವುದಿಲ್ಲ” ಎಂಬ ಸೂಚನೆಯನ್ನು ನೀಡಿದ್ದಾರೆ.
ಈ ಪೋಸ್ಟ್ ನಲ್ಲಿ ಸುಪ್ರೀಂ ಕೋರ್ಟ್ ಗೋಪುರದ ಹಿನ್ನೆಲೆಯಲ್ಲಿ, ಸುಪ್ರೀಂ ಕೋರ್ಟ್ ಮುಂದಿರುವ ಉದ್ಯಾನವನದಲ್ಲಿ ಸಲಿಂಗಿ ದಂಪತಿಗಳಾದ ಅನನ್ಯ ಕೋಟಿಯ ಹಾಗೂ ಉತ್ಕರ್ಷ್ ಸಕ್ಸೇನಾ ಪರಸ್ಪರ ಉಂಗುರ ವಿನಿಮಯ ಮಾಡಿಕೊಳ್ಳುತ್ತಿರುವ ಫೋಟೊವನ್ನು ಹಂಚಿಕೊಳ್ಳಲಾಗಿದೆ.