ವಿಶ್ವದ ಜನಸಂಖ್ಯೆ 2080ರ ವೇಳೆಗೆ 10.3 ಶತಕೋಟಿ

Update: 2024-07-12 02:58 GMT

ಸಾಂದರ್ಭಿಕ ಚಿತ್ರ PC: PTI

ಹೊಸದಿಲ್ಲಿ: ಜಾಗತಿಕ ಜನಸಂಖ್ಯೆ ಈ ಶತಮಾನದಲ್ಲೇ 10.3 ಶತಕೋಟಿ ತಲುಪುವ ನಿರೀಕೆ ಇದೆ. 2080ರ ದಶಕದ ಮಧ್ಯಭಾಗದ ವೇಳೆಗೆ ಜಗತ್ತಿನ ಜನಸಂಖ್ಯೆ ಹಾಲಿ ಇರುವ 8.2 ಶತಕೋಟಿಯಿಂದ 10.3 ಶತಕೋಟಿ ಆಗಲಿದೆ. ಈ ಗರಿಷ್ಠ ಮಟ್ಟ ತಲುಪಿದ ಬಳಿಕ ಜನಸಂಖ್ಯೆ ನಿಧಾನವಾಗಿ ಇಳಿಕೆ ಪ್ರವೃತ್ತಿ ಕಂಡು ಶತಮಾನದ ಅಂತ್ಯದ ವೇಳೆಗೆ 10.2 ಶತಕೋಟಿ ಆಗಲಿದೆ.

ಚೀನಾ ಮತ್ತು ಜಪಾನ್ ಸೇರಿದಂತೆ 63 ದೇಶಗಳ ಜನಸಂಖ್ಯೆ 2024ಕ್ಕೆ ಮುನ್ನವೇ ಗರಿಷ್ಠ ಮಟ್ಟವನ್ನು ತಲುಪಿದ್ದು, ಭಾರತ ಹಾಗೂ ಅಮೆರಿಕ ಸೇರಿದಂತೆ 126 ದೇಶಗಳ ಜನಸಂಖ್ಯೆ ಈ ಶತಮಾನದ ಉತ್ತರಾರ್ಧದಲ್ಲಿ ಅಥವಾ 2100ರ ಬಳಿಕ ಗರಿಷ್ಠಮಟ್ಟವನ್ನು ತಲುಪಲಿದೆ ಎಂದು ಅಂದಾಜಿಸಲಾಗಿದೆ.

ಮಹತ್ವದ ಅಂಶವೆಂದರೆ ಪ್ರತಿ ನಾಲ್ಕು ಜನರ ಪೈಕಿ ಒಬ್ಬರು, ಈಗಾಗಲೇ ಗರಿಷ್ಠ ಜನಸಂಖ್ಯಾ ಮಟ್ಟವನ್ನು ತಲುಪಿದ ದೇಶಗಳಲ್ಲಿ ವಾಸಿಸುತ್ತಿದ್ದಾರೆ.

ವಿಶ್ವಸಂಸ್ಥೆ ಗುರುವಾರ ಬಿಡುಗಡೆ ಮಾಡಿದ ವಿಶ್ವ ಜನಸಂಖ್ಯಾ ಸಾಧ್ಯತೆಗಳು-2024 ವರದಿಯಲ್ಲಿ ಈ ಅಂದಾಜನ್ನು ನೀಡಲಾಗಿದೆ. 2022ರ ಬಳಿಕ ನಿರೀಕ್ಷಿತ ಜೀವಿತಾವಧಿ ಎಲ್ಲ ದೇಶ ಹಾಗೂ ಪ್ರದೇಶಗಳಲ್ಲಿ ಬಹುತೇಕ ಕೋವಿಡ್ ಪೂರ್ವ ಮಟ್ಟ ತಲುಪಿದೆ. ಕೋವಿಡ್ ಸಾಂಕ್ರಾಮಿಕದ ವೇಳೆ ಅಲ್ಪಮಟ್ಟಿಗೆ ನಿರೀಕ್ಷಿತ ಜೀವಿತಾವಧಿ ಇಳಿದಿದ್ದರೂ, 2024ರಲ್ಲಿ ಇದು 73.3 ವರ್ಷಕ್ಕೇರಿದೆ. ಕೋವಿಡ್ ಅವಧಿಯಲ್ಲಿ ಇದು 70.9 ವರ್ಷಗಳಾಗಿದ್ದರೂ, 1996ಕ್ಕೆ ಹೋಲಿಸಿದರೆ ನಿರೀಕ್ಷಿತ ಜೀವಿತಾವಧಿ 8.4 ವರ್ಷಗಳಷ್ಟು ಹೆಚ್ಚಿದೆ.

ಜಾಗತಿಕವಾಗಿ ನಿರೀಕ್ಷಿತ ಜೀವಿತಾವಧಿ 2054ರ ವೇಳೆಗೆ 77.4 ವರ್ಷಗಳಿಗೆ ಏರುವ ಸಾಧ್ಯತೆ ಇದೆ. 2050ರ ದಶಕದ ಕೊನೆಗೆ ಈ ಜೀವಿತಾವಧಿ 80 ವರ್ಷಕ್ಕೇರಲಿದ್ದು, 1995ಕ್ಕೆ ಹೋಲಿಸಿದರೆ ಶೇಕಡ 17ರಷ್ಟು ಸುಸ್ಥಿರ ಅಭಿವೃದ್ಧಿಯಾಗಲಿದೆ ಎಂದು ವರದಿ ಅಂದಾಜಿಸಿದೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News