ಮುಂಬೈನಲ್ಲಿ ಆಗಸ್ಟ್ 25-26ರಂದು I.N.D.I.A.ಮೈತ್ರಿಕೂಟದ ಮೂರನೇ ಸಭೆ
ಮುಂಬೈ: I.N.D.I.A ಪಕ್ಷಗಳ ಮುಂದಿನ ಸಭೆಯು ಮುಂಬೈನಲ್ಲಿ ಆಗಸ್ಟ್ 25-26 ರಂದು ನಡೆಯಲಿದ್ದು, ಪ್ರತಿಪಕ್ಷಗಳ ಉನ್ನತ ನಾಯಕರು I.N.D.I.Aದ ಸಮನ್ವಯ ಸಮಿತಿ, ಜಂಟಿ ಕಾರ್ಯದರ್ಶಿ ಹಾಗೂ ಇತರ ಪ್ಯಾನೆಲ್ ಗಳ ಹೆಸರನ್ನು ಅಂತಿಮಗೊಳಿಸುವ ನಿರೀಕ್ಷೆಯಿದೆ ಎಂದು ಮೂಲಗಳು ಗುರುವಾರ ತಿಳಿಸಿವೆ.
ಮುಂಬೈನಲ್ಲಿ ಶಿವಸೇನೆಯ (ಯುಬಿಟಿ) ಉದ್ಧವ್ ಠಾಕ್ರೆ ಹಾಗೂ ಎನ್ ಸಿಪಿಯ ಶರದ್ ಪವಾರ್ ಆತಿಥ್ಯ ವಹಿಸಿರುವ ಸಭೆಯು ಆಗಸ್ಟ್ 25 ಮತ್ತು 26 ರಂದು ನಡೆಯಲಿದೆ ಮತ್ತು ಸಂಸತ್ತಿನ ಮುಂಗಾರು ಅಧಿವೇಶನದ ನಂತರ ಇದು ನಡೆಯಲಿದೆ.
ಮುಂಬೈನಲ್ಲಿ ಜಂಟಿ ರ್ಯಾಲಿ ನಡೆಸಲು ಸಹ ಯೋಜಿಸಲಾಗಿದೆ ಆದರೆ ರ್ಯಾಲಿ ನಡೆಸುವ ಸಮಯದಲ್ಲಿ ರಾಜ್ಯದ ಹವಾಮಾನ ಪರಿಸ್ಥಿತಿಗಳನ್ನು ಪರಿಗಣಿಸಿ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು.
ಸಂಸತ್ತಿನ ಅಧಿವೇಶನ ಮುಗಿದ ನಂತರ ಒಂದು ದಿನ ಅಥವಾ ಎರಡು ದಿನದಲ್ಲಿ ದಿನಾಂಕಗಳನ್ನು ಅಂತಿಮಗೊಳಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ವಿರೋಧ ಪಕ್ಷದ ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.
ಸಮನ್ವಯ ಸಮಿತಿಗಳ ಸಂಯೋಜನೆಯ ಕುರಿತು ಸಮಾಲೋಚನೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ. ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್, ಡಿಎಂಕೆ, ಎಎಪಿ, ಜೆಡಿ(ಯು), ಆರ್ ಜೆಡಿ, ಶಿವಸೇನೆ (ಯುಬಿಟಿ), ಎನ್ ಸಿಪಿ, ಜೆಎಂಎಂ, ಸಮಾಜವಾದಿ ಪಕ್ಷ ಹಾಗೂ ಸಿಪಿಐ(ಎಂ) 11 ಪಕ್ಷಗಳ ಪ್ರತಿನಿಧಿಗಳು ಇರುತ್ತಾರೆ.
ಮುಂಬೈ ಸಮಾವೇಶದಲ್ಲಿ, ನಾಯಕರು ಪ್ರಚಾರ., ಮಾಧ್ಯಮಗಳು (ಸಾಮಾಜಿಕ ಮಾಧ್ಯಮ ಸೇರಿದಂತೆ) ಹಾಗೂ ಇತರ ಆಂದೋಲನಕ್ಕಾಗಿ "I.N.D.I.A ಸಮಿತಿಗಳನ್ನು" ರಚಿಸುವ ಸಾಧ್ಯತೆಯಿದೆ. "ನಾವು ಇದನ್ನು ಉಪಸಮಿತಿ ಎಂದು ಕರೆಯದೆ I.N.D.I.A ಸಮಿತಿಗಳು ಎಂದು ಕರೆಯಲು ನಿರ್ಧರಿಸಿದ್ದೇವೆ" ಎಂದು ಹಿರಿಯ ನಾಯಕರೊಬ್ಬರು ಹೇಳಿದರು.
ಮೂರು ತಿಂಗಳಲ್ಲಿ ಇದು ಜಂಟಿ ವಿರೋಧ ಪಕ್ಷದ ಮೂರನೇ ಸಭೆಯಾಗಿದೆ. ಮೊದಲ ಸಭೆ ಜೂನ್ 23 ರಂದು ಪಾಟ್ನಾದಲ್ಲಿ ನಂತರ ಜುಲೈ 17 ಮತ್ತು 18 ರಂದು ಬೆಂಗಳೂರಿನಲ್ಲಿ 2ನೇ ಸಭೆ ನಡೆದಿದೆ. ಮುಂಬೈನಲ್ಲಿ ಮೂರನೇ ಸಭೆ ನಡೆಯಲಿದೆ. ಬೆಂಗಳೂರಿನ ಸಭೆಯಲ್ಲಿ, ವಿಪಕ್ಷಗಳ ಗುಂಪು ತನ್ನನ್ನು I.N.D.I.A (ಭಾರತೀಯ ರಾಷ್ಟ್ರೀಯ ಅಭಿವೃದ್ಧಿ ಅಂತರ್ಗತ ಒಕ್ಕೂಟ) ಎಂದು ನಾಮಕರಣ ಮಾಡಿತು.
ಪಾಟ್ನಾ ಸಭೆಯಲ್ಲಿ 15 ಪಕ್ಷಗಳು ಭಾಗವಹಿಸಿದ್ದರೆ, ಬೆಂಗಳೂರಿನಲ್ಲಿ ಪಕ್ಷಗಳ ಸಂಖ್ಯೆ 26 ಕ್ಕೆ ಏರಿತು. ಪಕ್ಷಗಳು ಸಂಸತ್ತಿನಲ್ಲಿ ಒಗ್ಗಟ್ಟಿನಿಂದ ಹೋರಾಟ ನಡೆಸಲು ನಿರ್ಧರಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರ ಹೇಳಿಕೆಗೆ ಒತ್ತಾಯಿಸಿ ಚರ್ಚೆ ನಡೆಸುತ್ತಿವೆ.
I.N.D.I.A ಪಕ್ಷಗಳು ಕಳೆದ ಸೋಮವಾರ ಮಣಿಪುರ ವಿಷಯವಾಗಿ ಸಂಸತ್ತಿನ ಗಾಂಧಿ ಪ್ರತಿಮೆ ಬಳಿ ಮೊದಲ ಜಂಟಿ ಪ್ರತಿಭಟನೆ ನಡೆಸಿದ್ದವು.