ಇದು ‘ವಿಕಸಿತ ಭಾರತ’ದ ‘ವಿಕಸಿತ ಉತ್ತರಪ್ರದೇಶ’: ಸಿಎಂ ಆದಿತ್ಯನಾಥ್
ಲಕ್ನೊ: ಕಳೆದ 6ರಿಂದ 7 ವರ್ಷಗಳಲ್ಲಿ ಉತ್ತರಪ್ರದೇಶ ಗಮನಾರ್ಹ ರೂಪಾಂತರಕ್ಕೆ ಒಳಗಾಗಿದೆ. ಇದು ‘ನೂತನ ಭಾರತ’ದ ‘ನೂತನ ಉತ್ತರ ಪ್ರದೇಶ’, ‘ವಿಕಸಿತ ಭಾರತದ ವಿಕಸಿತ ಉತ್ತರಪ್ರದೇಶ’ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರು ಮಂಗಳವಾರ ಹೇಳಿದ್ದಾರೆ.
ಇಂದಿರಾ ಗಾಂದಿ ಪ್ರತಿಷ್ಠಾನ ಇಲ್ಲಿ ಆಯೋಜಿಸಿದ್ದ ‘‘ವಿದೇಶಿ ಹೂಡಿಕೆಗೆ ತಾಣವಾಗಿ ಹೊರಹೊಮ್ಮುತ್ತಿರುವ ಉತ್ತರಪ್ರದೇಶ’’ ಶೀರ್ಷಿಕೆಯ ವಿದೇಶಿ ನೇರ ಹೂಡಿಕೆ ಸಮಾವೇಶದಲ್ಲಿ ಅವರು ಮಾತನಾಡಿದರು.
‘‘7 ವರ್ಷಗಳ ಹಿಂದೆ ಉತ್ತರ ಪ್ರದೇಶ ಬೀಮಾರು ರಾಜ್ಯ ಎಂಬ ಹಣೆ ಪಟ್ಟಿ ಹೊಂದಿತ್ತು. ರಾಷ್ಟ್ರದ ಪ್ರಗತಿಗೆ ಇದು ಅಡ್ಡಿ ಎಂದು ಪರಿಗಣಿಸಲಾಗಿತ್ತು. ಆದರೆ, ಇಂದು ಉತ್ತರ ಪ್ರದೇಶ ಈ ಹಣೆಪಟ್ಟಿಯನ್ನು ತೊಡೆದು ಹಾಕಿದೆ. ಅಪರಿಮಿತ ಸಾಮರ್ಥ್ಯ’’ದ ರಾಜ್ಯವಾಗಿ ಹೊರ ಹೊಮ್ಮಿದೆ’’ ಎಂದು ಅವರು ಹೇಳಿದ್ದಾರೆ.
ನಾವು ಪ್ರಕೃತಿ, ಪರಮಾತ್ಮ ಹಾಗೂ ಪ್ರತಿಭೆಯನ್ನು ಹೊಂದಿದ್ದೇವೆ. ನಾವು ಈ ಸಂಗಮದ ಮೂಲಕ ಪ್ರಧಾನಿ ಅವರ ಮಾರ್ಗದರ್ಶನ ಹಾಗೂ ನಾಯಕತ್ವದಲ್ಲಿ ಉತ್ತರಪ್ರದೇಶವನ್ನು ಮುನ್ನಡೆಸುತ್ತಿದ್ದೇವೆ. ನಾವು ಕಳೆದ 7 ವರ್ಷಗಳಲ್ಲಿ ರಾಜ್ಯದ ಆರ್ಥಿಕತೆ ಹಾಗೂ ತಲಾ ಆದಾಯ ದ್ವಿಗುಣಗೊಳಿಸಿರುವುದು ಸೇರಿದಂತೆ ಗಮನಾರ್ಹ ಮೈಲುಗಲ್ಲನ್ನು ಸ್ಥಾಪಿಸಿದ್ದೇವೆ’’ ಎಂದು ಅವರು ಹೇಳಿದರು.
ಸಮಾವೇಶದ ಸಂದರ್ಭ ಕೇಂದ್ರ ಸಚಿವರು ಹಾಗೂ ಇತರ ಗಣ್ಯರೊಂದಿಗೆ ಮುಖ್ಯಮಂತ್ರಿ ಅವರು ಕಿರುಪುಸ್ತಕ ಬಿಡುಗಡೆ ಮಾಡಿದರು. ಉತ್ತರಪ್ರದೇಶದ ರೂಪಾಂತರವನ್ನು ಚಿತ್ರಿಸುವ ಕಿರು ಚಿತ್ರವನ್ನು ಪ್ರದರ್ಶಿಸಲಾಯಿತು.