ಮಸೀದಿಗಳ ಕೆಳಗೆ ದೇವಸ್ಥಾನಗಳನ್ನು ಹುಡುಕುವವರಿಗೆ ಶಾಂತಿ ಬೇಕಿಲ್ಲ : ಎಸ್‌ಪಿ ವರಿಷ್ಠ ಅಖಿಲೇಶ್‌ ಯಾದವ್‌

Update: 2024-12-13 15:17 GMT

ಅಖಿಲೇಶ್‌ ಯಾದವ್‌ | PC : PTI 

ಹೊಸದಿಲ್ಲಿ : ಮಸೀದಿಗಳು ಸೇರಿದಂತೆ ಆರಾಧನಾ ಸ್ಥಳಗಳ ಸಮೀಕ್ಷೆಗಳಿಗೆ ಸರ್ವೋಚ್ಛ ನ್ಯಾಯಾಲಯವು ಗುರುವಾರ ತಡೆ ನೀಡಿದ ಬೆನ್ನಲ್ಲೇ ಸಮಾಜವಾದಿ ಪಾರ್ಟಿಯ ವರಿಷ್ಠ ಹಾಗೂ ಕನೌಜ್ ಸಂಸದ ಅಖಿಲೇಶ್‌ ಯಾದವ್‌ ಅವರು, ಮಸೀದಿಗಳ ಕೆಳಗೆ ದೇವಸ್ಥಾನಗಳನ್ನು ಹುಡುಕುವವರಿಗೆ ಶಾಂತಿ ಬೇಕಾಗಿಲ್ಲ ಎಂದು ಹೇಳಿದರು.

ಶುಕ್ರವಾರ ಲೋಕಸಭೆಯಲ್ಲಿ ಸಂವಿಧಾನದ ಕುರಿತು ಚರ್ಚೆಯ ವೇಳೆ ಯಾದವ್‌ ಅವರ ಈ ಹೇಳಿಕೆ ಹೊರಬಿದ್ದಿದೆ. ಇತರ ನಿದರ್ಶನಗಳ ಜೊತೆಗೆ ಕಳೆದ ತಿಂಗಳು ಉತ್ತರ ಪ್ರದೇಶದ ಸಂಭಲ್ ಪಟ್ಟಣದಲ್ಲಿ ಮಸೀದಿ ಸರ್ವೆಯ ವೇಳೆ ಹಲವಾರು ಜನರು ಸಾವನ್ನಪ್ಪಿದ್ದ ಹಿಂಸಾಚಾರವನ್ನೂ ಅವರು ಉಲ್ಲೇಖಿಸಿದರು.

ಬಿಜೆಪಿ ಭಾರತೀಯ ಮತದಾರರನ್ನು ಗೌರವಿಸುವುದಿಲ್ಲ ಎಂದು ಹೇಳಿದ ಅವರು, ಉತ್ತರ ಪ್ರದೇಶದಲ್ಲಿ ಹಲವರಿಗೆ ಲೋಕಸಭಾ ಚುನಾವಣೆಗಳಲ್ಲಿ ಮತ ಚಲಾಯಿಸಲು ಅವಕಾಶ ನೀಡಲಾಗಿರಲಿಲ್ಲ. ಅವರನ್ನು ಪೋಲಿಸರು ತಡೆದಿದ್ದರು ಎಂದು ಆರೋಪಿಸಿದರು.

ಸಂವಿಧಾನವು ಭಾರತವನ್ನು ಸುರಕ್ಷಿತವಾಗಿ ಮತ್ತು ಒಗ್ಗಟ್ಟಿನಿಂದ ಇರಿಸಿದ್ದು, ಅದು ಪ್ರಜಾಪ್ರಭುತ್ವದ ಆತ್ಮವಾಗಿದೆ ಎಂದರು.

ಗಡಿಗಳುದ್ದಕ್ಕೂ ಭದ್ರತೆ,ಆರ್ಥಿಕ ಸ್ಥಿತಿ ಮತ್ತು ನಾಗರಿಕ ಆಂತರಿಕ ಸುರಕ್ಷತೆ ಕುರಿತು ಶಂಕೆಗಳನ್ನು ವ್ಯಕ್ತಪಡಿಸಿದ ಅಖಿಲೇಶ್‌ ಚೀನಾದ ಅತಿಕ್ರಮಣಗಳನ್ನು ಪ್ರಸ್ತಾವಿಸಿ, ಭಾರತದ ಗಡಿಗಳು ಕುಗ್ಗುತ್ತಿವೆ ಎಂದು ಹೇಳಿದರು.

ದೇಶದಲ್ಲಿಯ 20 ಕೋ.ಅಲ್ಪಸಂಖ್ಯಾತರನ್ನು,ವಿಶೇಷವಾಗಿ ಮುಸ್ಲಿಮರನ್ನು ಎರಡನೇ ದರ್ಜೆಯ ನಾಗರಿಕರನ್ನಾಗಿ ಮಾಡಲು ಪ್ರಯತ್ನಗಳು ನಡೆಯುತ್ತಿವೆ ಎಂದು ಹೇಳಿದ ಅವರು,’ಜಾತಿ ಗಣತಿಯು ಜಾತಿಗಳ ನಡುವಿನ ಅಂತರವನ್ನು ತಗ್ಗಿಸುತ್ತದೆ. ನಮಗೆ ಅವಕಾಶ ಸಿಕ್ಕಿದಾಗ ನಾವು ಜಾತಿ ಗಣತಿಯನ್ನು ನಡೆಸುತ್ತೇವೆ ’ಎಂದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News