ಕಳೆದ 7 ವರ್ಷಗಳಲ್ಲಿ ಒಂದೇ ಒಂದು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ ಎಂದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್!
ಹೊಸದಿಲ್ಲಿ: ಕಳೆದ 7 ವರ್ಷಗಳಲ್ಲಿ ಒಂದೇ ಒಂದು ಪ್ರಶ್ನೆ ಪತ್ರಿಕೆ ಸೋರಿಕೆಯಾಗಿಲ್ಲ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಸಂಸತ್ತಿನಲ್ಲಿ ಹೇಳಿದ್ದಾರೆ. ಅಲ್ಲದೇ ಸಾವಿರಾರು ವಿದ್ಯಾರ್ಥಿಗಳನ್ನು ಸುಳ್ಳರು ಎಂದು ಪ್ರಧಾನ್ ಹೇಳಿದ್ದಾರೆ.
ಅವರ ಹೇಳಿಕೆಗೆ ಸಂಸತ್ತಿನಲ್ಲಿ ಭಾರೀ ಗದ್ದಲ ನಡೆದಿದೆ.
ಕಳೆದ 7 ವರ್ಷಗಳಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಯಾವುದೇ ಪುರಾವೆಗಳು ಕಂಡುಬಂದಿಲ್ಲ. NEET ವಿಷಯ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. NTA ಸ್ಥಾಪನೆಯಾದ ನಂತರ 240 ಕ್ಕೂ ಹೆಚ್ಚು ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ನಾನು ಸಂಪೂರ್ಣ ಜವಾಬ್ದಾರಿಯಿಂದ ಹೇಳಬಲ್ಲೆ ಎಂದು ಸಚಿವರು ಹೇಳಿದರು.
ಕೇಂದ್ರ ಸಚಿವರ ಹೇಳಿಕೆಯ ಸತ್ಯಾಂಶವೇನು?:
ಅನೇಕ ಪರೀಕ್ಷೆಗಳ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ನಂತರ ಆ ಪರೀಕ್ಷೆಗಳು ರದ್ದುಗೊಂಡ ಅನೇಕ ಘಟನೆಗಳು ವರದಿಯಾಗಿದೆ. ಇಲ್ಲಿದೆ ವಿವರ...
ಸೇನಾ ಸಾಮಾನ್ಯ ಪ್ರವೇಶ ಪರೀಕ್ಷೆ 2021:
ಸೇನಾ ಸಾಮಾನ್ಯ ಪ್ರವೇಶ ಪರೀಕ್ಷೆ 2021 ರಲ್ಲಿ ಪ್ರಶ್ನೆ ಪತ್ರಿಕೆ ಸೋರಿಕೆಯ ಹಲವು ಆರೋಪಗಳು ಕೇಳಿ ಬಂದಿದ್ದವು. ಪ್ರಶ್ನೆ ಪತ್ರಿಕೆ ಸೋರಿಕೆ ಘಟನೆಯ ನಂತರ ಸೈನಿಕರ ಅಖಿಲ ಭಾರತ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ನಡೆಯಬೇಕಿದ್ದ ನಿರ್ಧರಿತ ಸಮಯದ ಕೆಲವು ಘಂಟೆಗಳ ಮುಂಚೆ ಸೇನೆ ರದ್ದುಗೊಳಿಸಿತ್ತು.
ಮಿಲಿಟರಿ ಗುಪ್ತಚರ, ಪುಣೆ ಮತ್ತು ಪುಣೆ ನಗರ ಪೊಲೀಸರ ಅಪರಾಧ ವಿಭಾಗವು ಜಂಟಿಯಾಗಿ ಮಹಾರಾಷ್ಟ್ರದ ವಿವಿಧ ಸ್ಥಳಗಳಲ್ಲಿ ನಿರ್ದಿಷ್ಟ ಕಾರ್ಯಾಚರಣೆಗಳನ್ನು ನಡೆಸಿ ಸಾಮಾನ್ಯ ಪ್ರವೇಶ ಪರೀಕ್ಷೆಯ ಸೋರಿಕೆಯಾದ ಪ್ರಶ್ನೆ ಪತ್ರಿಕೆಯನ್ನು ವಶಪಡಿಸಿಕೊಂಡಿತ್ತು. ಹಲವರ ಬಂಧನವೂ ಆಗಿತ್ತು.
CBSE ಬೋರ್ಡ್ ಎಕ್ಸಾಂ 2018:
ಆಗ ಈ ವಿಷಯದಲ್ಲಿ ಮಾತನಾಡಿದ್ದ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ರಾಜ್ಯ ಸಚಿವ ಸತ್ಯಪಾಲ್ ಸಿಂಗ್ ಸರ್ಕಾರವು ಭವಿಷ್ಯದಲ್ಲಿ ಯಾವುದೇ ಪ್ರಶ್ನೆ ಪತ್ರಿಕೆ ಸೋರಿಕೆ ನಡೆಯದಂತೆ ನೋಡಿಕೊಳ್ಳುವ ಕಾರ್ಯವಿಧಾನವನ್ನು ಸಿದ್ಧಪಡಿಸಲು ಕೆಲಸ ಮಾಡುತ್ತಿದೆ ಎಂದು ಹೇಳಿದ್ದರು. ಸಂಸತ್ತಿನಲ್ಲೇ ದಿಲ್ಲಿ ಪುಲೀಸರು ಪರೀಕ್ಷಾ ಪತ್ರಿಕೆ ಸೋರಿಕೆಯಾಗಿದೆ ಎಂದು ಮಾಹಿತಿ ನೀಡಿದ್ದಾರೆಂದು ಆಗ ಸಚಿವರು ಹೇಳಿದ್ದರು.
ದೆಹಲಿ ಪೊಲೀಸರ ಅಪರಾಧ ವಿಭಾಗವು ಸಿಬಿಎಸ್‌ಇ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣದ ತನಿಖೆ ನಡೆಸಿ ಕೆಲವರನ್ನು ಬಂಧಿಸಿತ್ತು. ಖಾಸಗಿ ಸಂಸ್ಥೆಗಳ ಶಿಕ್ಷಕರೂ ಇದರಲ್ಲಿ ಸೇರಿದ್ದರು.
SSC ಪರೀಕ್ಷೆ 2017:
SSC ಕಂಬೈನ್ಡ್ ಗ್ರಾಜುಯೇಟ್ ಲೆವೆಲ್ (CGL) 2017 ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಕೇಳಿ ಬಂದಿದ್ದು SSC ಮರು ಪರೀಕ್ಷೆ ನಡೆಸಿತ್ತು. ಈ ವಿಷಯವನ್ನು ಸಂಸತ್ತಿನಲ್ಲಿ ಆಗ ರಾಜ್ಯ ಖಾತೆಯ ಸಚಿವರಾಗಿದ್ದ ಜಿತೇಂದ್ರ ಸಿಂಗ್ ಒಪ್ಪಿಕೊಂಡಿದ್ದರು ಮತ್ತು SSC ಕೋರಿಕೆಯ ಮೇರಿಗೆ ಸಿ ಬಿ ಐ ತನಿಖೆಗೆ ಸರಕಾರ ಆದೇಶಿಸಿತ್ತು. ನೀಟ್ 2021 ಪ್ರಶ್ನೆ ಪತ್ರಿಕೆ ಸೋರಿಕೆ ವಿಷಯ ಕೇಳಿ ಬಂದಿದ್ದು ಪೊಲೀಸರು ಜೈಪುರ ಸಹಿತ ಹಲವೆಡೆ 8 ಜನರನ್ನು ಬಂಧಿಸಿತ್ತು.
2021 ಜೆಇಇ ಮೈನ್ಸ್ ಪರೀಕ್ಷೆಯಲ್ಲೂ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಕೇಳಿ ಬಂದಿದ್ದು ಸಿಬಿಐ ಪ್ರಮುಖ ಆರೋಪಿ ವಿನಯ್ ದಹಿಯಾನನ್ನು ಬಂಧಿಸಿತ್ತು. CTET 2023 ಪರೀಕ್ಷೆಯಲ್ಲೂ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ ಕೇಳಿ ಬಂದಿದ್ದು ಉತ್ತರ ಪ್ರದೇಶ ಪೊಲೀಸ್ ನ STF ಮೀರತ್ ನಿಂದ ಇಬ್ಬರನ್ನು ಬಂಧಿಸಿತ್ತು.
2024 ರ ನೀಟ್ ಯುಜಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಂತೂ ದೊಡ್ಡ ರಾದ್ಧಾಂತವಾಗಿದೆ.ಈ ಸಂಬಂಧ ಬಿಹಾರ್ ಪೊಲೀಸ್ ಹಲವರನ್ನು ಮೊದಲು ಬಂಧಿಸಿತ್ತು. ನಂತರ ಸಿಬಿಐ ಗೆ ಕೇಸ್ ವಹಿಸಿ ಕೊಡಲಾಗಿತ್ತು. ದೇಶದ ಹಲವೆಡೆ ತನಿಖೆ ನಡೆಸಿ 'ಸೊಲ್ವೆರ್ ಗ್ಯಾಂಗ್' ನ ಹಲವರನ್ನು ಸಿಬಿಐ ಬಂಧಿಸಿದೆ.
ಪ್ರಾಥಮಿಕವಾಗಿ ಪ್ರಶ್ನೆ ಪತ್ರಿಕೆ ಸೋರಿಕೆ ನಡೆದಿದೆ ಮತ್ತು ಎಷ್ಟರ ಮಟ್ಟಿಗೆ ನಡೆದಿದೆ ಎಂಬುದು ಮಾತ್ರ ತನಿಖಾ ವಿಷಯ ಎಂದು ಸ್ವತಃ ಸುಪ್ರೀಂ ಕೋರ್ಟ್ ಹೇಳಿದೆ. ಇತ್ತೀಚೆಗೆ ಯು ಜಿ ಸಿ ನೆಟ್ ಪರೀಕ್ಷೆ ನಡೆದ ಬಳಿಕ ಸರಕಾರ ಅದನ್ನು ರದ್ದುಗೊಳಿಸಿತ್ತು ಮತ್ತು ನೀಟ್ ಪಿಜಿ ಪರೀಕ್ಷೆಯನ್ನು ಮುಂದೂಡಿತ್ತು.