ಉತ್ತರ ಪ್ರದೇಶ: ಚಂದ್ರಯಾನ-3 ಲ್ಯಾಂಡಿಂಗ್ ತೋರಿಸದ್ದಕ್ಕಾಗಿ ಡಝನ್ ಶಾಲೆಗಳ ವಿರುದ್ಧ ಕ್ರಮ, ವೇತನ ಸ್ಥಗಿತ; ವರದಿ

Update: 2023-08-27 14:22 GMT

ಲಕ್ನೋ: ಉತ್ತರ ಪ್ರದೇಶ ಪ್ರಾಥಮಿಕ ಶಿಕ್ಷಣ ಇಲಾಖೆಯು ‘ವಿದ್ಯಾರ್ಥಿಗಳಿಗೆ ಸ್ಫೂರ್ತಿ ನೀಡಲು ಮತ್ತು ಅವರ ಆತ್ಮವಿಶ್ವಾಸವನ್ನು ಹೆಚ್ಚಿಸಲು’ ರಾಜ್ಯದ ಶಾಲೆಗಳಲ್ಲಿ ಇಸ್ರೋದ ಚಂದ್ರಯಾನ-3 ಅಭಿಯಾನದ ನೇರ ಪ್ರಸಾರವನ್ನು ತೋರಿಸುವಂತೆ ಆದೇಶವನ್ನು ಪಾಲಿಸುವಲ್ಲಿ ವಿಫಲಗೊಂಡ ಶಾಲಾ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರ ವೇತನಗಳನ್ನು ತಡೆಹಿಡಿಯುವಂತೆ ನಿರ್ದೇಶನಗಳನ್ನು ಹೊರಡಿಸಿದೆ ಎಂದು newsclick.in ವರದಿ ಮಾಡಿದೆ.

ಚಂದ್ರಯಾನ-3ರ ಲ್ಯಾಂಡಿಂಗ್ ನ ನೇರ ಪ್ರಸಾರಕ್ಕಾಗಿ ಬುಧವಾರ ಸಂಜೆ ಶಾಲೆಗಳನ್ನು ತೆರೆದಿರುವಂತೆ ಸೂಚಿಸಲಾಗಿತ್ತಾದರೂ ಸುಮಾರು ಒಂದು ಡಝನ್ ಶಾಲೆಗಳನ್ನು ಮುಚ್ಚಲಾಗಿದ್ದು ಕಂಡು ಬಂದಿದೆ ಎಂದು ಹಮೀರ್ಪುರದ ಪ್ರಾಥಮಿಕ ಶಿಕ್ಷಣಾಧಿಕಾರಿ (ಬಿಎಸ್ಎ) ಅಲೋಕ ಸಿಂಗ್ ತನ್ನ ಆದೇಶದಲ್ಲಿ ಹೇಳಿದ್ದಾರೆ. ಇಲಾಖಾ ಆದೇಶವನ್ನು ಉಲ್ಲಂಘಿಸಿದ್ದಕ್ಕಾಗಿ ಶಾಲಾ ಪ್ರಾಂಶುಪಾಲರು/ಶಿಕ್ಷಕರಿಗೆ ಶೋಕಾಸ್ ನೋಟಿಸನ್ನು ನೀಡಲಾಗಿದೆ. ನೇರ ಪ್ರಸಾರವನ್ನೇಕೆ ಆಯೋಜಿಸಿರಲಿಲ್ಲ ಎನ್ನುವುದಕ್ಕೆ ಎರಡು ದಿನಗಳಲ್ಲಿ ವಿವರಣೆಯನ್ನು ಸಲ್ಲಿಸುವಂತೆಯೂ ಸೂಚಿಸಲಾಗಿದೆ. ತೃಪ್ತಿಕರ ಉತ್ತರವನ್ನು ಸ್ವೀಕರಿಸದಿದ್ದರೆ ಅಮಾನತು ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಇಲಾಖೆಯ ಆದೇಶಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಬೋಧಕ ಸಮುದಾಯವು, ಪ್ರತಿಯೊಂದನ್ನೂ ಶಿಕ್ಷಕರ ವೇತನದೊಂದಿಗೆ ತಳುಕು ಹಾಕುವುದು ಅನ್ಯಾಯ ಎಂದು ಭಾವಿಸಿದೆ.

ಸಿಬ್ಬಂದಿಗಳ ವೇತನಗಳನ್ನು ತಡೆಹಿಡಿಯುವ ಆದೇಶವು ಅನ್ಯಾಯದ್ದಾಗಿದೆ ಮತ್ತು ಬಿಎಸ್ಎ ಹೇಗೆ ನೇರ ಪ್ರಸಾರ ಗುರಿಗಳಿಂದ ಅಂತರವನ್ನು ಕಾಯ್ದುಕೊಂಡಿದ್ದರು ಎನ್ನುವುದನ್ನು ಅದು ತೋರಿಸುತ್ತಿದೆ ಎಂದು ಉತ್ತರ ಪ್ರದೇಶ ಪದವೀಧರ ಪ್ರಾಥಮಿಕ ಶಿಕ್ಷಕರ ಸಂಘದ ಸದಸ್ಯ ಅರವಿಂದ ಕುಮಾರ ಹೇಳಿದರು. ಶಾಲೆಗಳಿಗೆ ಸ್ಮಾರ್ಟ್ ಟಿವಿಗಳು,ಪ್ರೊಜೆಕ್ಟರ್ಗಳು ಇತ್ಯಾದಿಗಳನ್ನು ಒದಗಿಸುವ ಹೊಣೆಗಾರಿಕೆಯನ್ನೂ ಬಿಎಸ್ಎ ಹೊಂದಿದ್ದಾರೆ.

‘ನಮ್ಮಲ್ಲಿ ಸ್ಮಾರ್ಟ್ ತರಗತಿಗಳಿಲ್ಲ, ಹೀಗಾಗಿ ಟಿವಿ ಮತ್ತು ಲ್ಯಾಪ್ಟಾಪ್ ಸೌಲಭ್ಯಗಳಿಂದ ವಂಚಿತರಾಗಿದ್ದೇವೆ. ಬಾಲಕಿಯರು ಚಂದ್ರಯಾನ-3 ಲ್ಯಾಂಡಿಂಗ್ ಅನ್ನು ವೀಕ್ಷಿಸಲು ಸಾಧ್ಯವಾಗುವಂತೆ ಲ್ಯಾಪ್ಟಾಪ್ವೊಂದನ್ನು ವ್ಯವಸ್ಥೆ ಮಾಡುವಂತೆ ನಾನು ಇತರ ಶಿಕ್ಷಕಿಯರಿಗೆ ಸೂಚಿಸಿದ್ದೆ, ಆದರೆ ಅದು ಫಲ ನೀಡಿರಲಿಲ್ಲ. ನಾನು ಅರ್ಧ ಗಂಟೆ ಕಾಲ ನನ್ನ ಮೊಬೈಲ್ ನಲ್ಲಿ ಬಾಲಕಿಯರಿಗೆ ನೇರ ಪ್ರಸಾರವನ್ನು ತೋರಿಸಿದ್ದೆ, ಆದರೆ ಅದನ್ನು ದೊಡ್ಡ ಪರದೆಯಲ್ಲಿ ನೋಡಬೇಕೆಂದು ಅವರು ಒತ್ತಾಯಿಸಿದ್ದರು. ಹೀಗಾಗಿ ನಾನು ಶಾಲೆಗೆ ಬೀಗ ಹಾಕಿ ಮಕ್ಕಳನ್ನು ಸ್ಮಾರ್ಟ್ ತರಗತಿ ಮತ್ತು ಸ್ಮಾರ್ಟ್ ಟಿವಿ ಸೌಲಭ್ಯ ಹೊಂದಿರುವ ಪಕ್ಕದ ಬಾಲಕರ ಉನ್ನತ ಪ್ರಾಥಮಿಕ ಶಾಲೆಗೆ ಕರೆದೊಯ್ದಿದ್ದೆ. ಬೀಗ ಹಾಕಿದ್ದ ನನ್ನ ಶಾಲೆಯ ಚಿತ್ರವನ್ನು ಯಾರು ಕ್ಲಿಕ್ಕಿಸಿದ್ದರು ಎನ್ನುವುದು ನನಗೆ ಗೊತ್ತಿಲ್ಲ. ಆದರೆ ಬುಧವಾರ ಸಂಜೆ ಶಾಲೆಯನ್ನು ಮುಚ್ಚಲಾಗಿತ್ತು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದ್ದವು, ಅದು ನಿಜವಲ್ಲ’ ಎಂದು ಸುಮೇರಪುರದ ಬಾಲಕಿಯರ ಉನ್ನತ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ವಂದನಾ ತ್ರಿಪಾಠಿ ಹೇಳಿದರು.

ಒಂದು ದಿನದ ವೇತನ ಕಡಿತ ಕುರಿತಂತೆ ತ್ರಿಪಾಠಿ, ಯಾವ ಆಧಾರದಲ್ಲಿ ವೇತನ ಕಡಿತ ಮಾಡಲಾಗುತ್ತದೆ ಎನ್ನುವುದನ್ನು ಆಡಳಿತವು ತಿಳಿಸಬೇಕು ಎಂದರು.

ಈ ಮೊದಲು ಉ.ಪ್ರ. ಶಿಕ್ಷಕರ ಒಕ್ಕೂಟವು ಚಂದ್ರಯಾನ-3ರ ನೇರಪ್ರಸಾರಕ್ಕಾಗಿ ಬುಧವಾರ ಸಂಜೆ ಶಾಲೆಗಳು ತೆರೆದಿರಬೇಕು ಎಂಬ ಸರಕಾರದ ಆದೇಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿತ್ತು. ಹೆಚ್ಚಿನ ಶಾಲೆಗಳು ಟಿವಿ, ಪ್ರೊಜೆಕ್ಟರ್,ಡಿಷ್ ಮತ್ತು ಸ್ಮಾರ್ಟ್ ಫೋನ್ ಸೌಲಭ್ಯಗಳನ್ನು ಹೊಂದಿಲ್ಲ ಎನ್ನುವುದನ್ನು ಬೆಟ್ಟು ಮಾಡಿ ಉ.ಪ್ರ.ಮಾಧ್ಯಮಿಕ ಶಿಕ್ಷಣ ಒಕ್ಕೂಟದ ಅಧ್ಯಕ್ಷ ದಿನೇಶ ಚಂದ್ರ ಶರ್ಮಾ ಉ.ಪ್ರ.ಶಾಲಾ ಶಿಕ್ಷಣ ಮಹಾ ನಿರ್ದೇಶಕರಿಗೆ ಪತ್ರವನ್ನು ಬರೆದಿದ್ದಾರೆ. ಶೋಕಾಸ್ ನೋಟಿಸ್ಗಳನ್ನು ಪಡೆದಿರುವ ಇತರ ಜಿಲ್ಲೆಗಳ ಶಾಲೆಗಳ ಶಿಕ್ಷಕರು/ಮುಖ್ಯೋಪಾಧಾಯರೂ ಇಂತಹುದೇ ದೂರುಗಳನ್ನು ಹೇಳಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News