ಉತ್ತರಾಖಂಡ ಸುರಂಗ ಕುಸಿತ: ವರ್ಟಿಕಲ್ ಡ್ರಿಲ್ಲಿಂಗ್‌ಗೆ ಇನ್ನೂ ನಾಲ್ಕು ದಿನಗಳು ಬೇಕು
ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯಲ್ಲಿ ಕುಸಿದಿರುವ ಸಿಲ್ಕ್ಯಾರಾ ಸುರಂಗದಲ್ಲಿ ಸಿಕ್ಕಿಹಾಕಿಕೊಂಡಿರುವ 41 ಕಾರ್ಮಿಕರನ್ನು ರಕ್ಷಿಸಿಸಲು ನಡೆಯುತ್ತಿರುವ ಕಾರ್ಯಾಚರಣೆ ರವಿವಾರ 15ನೇ ದಿನಕ್ಕೆ ಕಾಲಿರಿಸಿದೆ. ಈ ನಡುವೆ ಬೃಹತ್ ಡ್ರಿಲ್ಲಿಂಗ್ ಯಂತ್ರ ಸಂಪೂರ್ಣವಾಗಿ ಹಾಳಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಭಾರತೀಯ ಸೇನೆಯು ರಕ್ಷಣಾ ಕಾರ್ಯಾಚರಣೆಯಲ್ಲಿ ಸೇರಿಕೊಂಡಿದೆ.
60 ಮೀ.ಗಳಷ್ಟು ಉದ್ದದ ಅವಶೇಷಗಳ ರಾಶಿಯ ಮಧ್ಯೆ ಕೊರೆಯುವ ಕೆಲಸಕ್ಕಾಗಿ ಅಮೆರಿಕದಿಂದ ತರಿಸಲಾಗಿದ್ದ ಆಗರ್ ಯಂತ್ರವು ತಾಂತ್ರಿಕ ದೋಷದಿಂದಾಗಿ ಶುಕ್ರವಾರ ತಡರಾತ್ರಿಯಿಂದ ಕೆಲಸವನ್ನು ಸ್ಥಗಿತಗೊಳಿಸಿದೆ. ಈಗ ಬಾಕಿಯಿರುವ 10-15 ಮೀ.ಗಳುದ್ದಕ್ಕೂ ಕೈಯ್ಯಲ್ಲಿ ಹಿಡಿಯುವ ಯಂತ್ರಗಳಿಂದಲೇ ಕೊರೆಯುವ ಕಾರ್ಯವನ್ನು ನಡೆಸಬೇಕಿದೆ.
ದೈಹಿಕವಾಗಿ ಕೊರೆಯುವ ಕೆಲಸವು ಶ್ರಮದಾಯಕವಾಗಿದ್ದು, ಸಮಯವನ್ನೂ ತೆಗೆದುಕೊಳ್ಳುತ್ತದೆ. ಕಾರ್ಮಿಕನೋರ್ವ ಈಗಾಗಲೇ ಕೊರೆಯಲಾಗಿರುವ ರಕ್ಷಣಾ ಮಾರ್ಗದಲ್ಲಿ ನುಸುಳಿ ನಿರ್ಬಂಧಿತ ಸ್ಥಳದಲ್ಲಿ ಸ್ವಲ್ಪ ಸಮಯದವರೆಗೆ ಕೊರೆಯುವ ಕೆಲಸವನ್ನು ಮಾಡಿ ಹೊರಬರುತ್ತಾನೆ. ಬಳಿಕ ಇನ್ನೋರ್ವ ಕಾರ್ಮಿಕ ಆ ಕಾರ್ಯವನ್ನು ಮುಂದುವರಿಸುತ್ತಾನೆ. ಈ ಚಕ್ರವು ಹೀಗೆಯೇ ಸಾಗುತ್ತಿರುತ್ತದೆ.
ಕಾರ್ಮಿಕರನ್ನು ರಕ್ಷಿಸಲು ಹಲವು ಯೋಜನೆಗಳನ್ನು ರೂಪಿಸಲಾಗಿದೆ. ಯಾವುದೇ ದೊಡ್ಡ ತೊಡಕುಗಳು ಎದುರಾಗದಿದ್ದರೆ ವರ್ಟಿಕಲ್ ಡ್ರಿಲ್ಲಿಂಗ್ ಅಥವಾ ಲಂಬವಾಗಿ ಕೊರೆಯುವ ವಿಧಾನದ ಮೂಲಕ ಸುರಂಗವನ್ನು ತಲುಪಲು ನಾಲ್ಕು ದಿನಗಳು ಬೇಕಾಗಬಹುದು ಎಂದು ರಾಷ್ಟ್ರೀಯ ಹೆದ್ದಾರಿಗಳ ಮೂಲಸೌಕರ್ಯ ಅಭಿವೃದ್ಧಿ ನಿಗಮದ ಆಡಳಿತ ನಿರ್ದೇಶಕ ಮಹಮೂದ್ ಅಹ್ಮದ್ ತಿಳಿಸಿದರು.
360 ಗಂಟೆಗಳಿಗೂ ಅಧಿಕ ಸಮಯದಿಂದ ಸುರಂಗದೊಳಗೆ ಸಿಕ್ಕಿ ಹಾಕಿಕೊಂಡಿರುವ ಕಾರ್ಮಿಕರು ಸುರಕ್ಷಿತವಾಗಿ ಹೊರಬರಲು ಇನ್ನೂ ಹಲವಾರು ದಿನಗಳು, ಬಹುಶಃ ವಾರಗಳ ಕಾಲ ಕಾಯಬೇಕಾಗಬಹದು. ಅವರು ಸುರಕ್ಷಿತರಾಗಿದ್ದು, ಬೆಳಕು, ಆಮ್ಲಜನಕ, ಆಹಾರ, ನೀರು ಮತ್ತು ಔಷಧಿಗಳನ್ನು ಒದಗಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ತಾಳ್ಮೆಯಿಂದಿರುವಂತೆ ಸಲಹೆ ನೀಡಿರುವ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ)ದ ಸದಸ್ಯ ಲೆ.ಜ(ನಿವೃತ್ತ).ಸೈಯದ್ ಅತಾ ಹಸನೈನ್ ಅವರು, ‘ಈ ಕಾರ್ಯಾಚರಣೆಯು ತುಂಬ ದಿನಗಳನ್ನು ತೆಗೆದುಕೊಳ್ಳಬಹುದು. ನೀವು ಪರ್ವತದ ಮೇಲೆ ಕೆಲಸ ಮಾಡುತ್ತಿರುವಾಗ ಎಲ್ಲವೂ ಅನಿರೀಕ್ಷಿತವಾಗಿರುತ್ತದೆ. ನಾವೆಂದೂ ಯಾವುದೇ ಗಡುವನ್ನು ನೀಡಿರಲಿಲ್ಲ’ ಎಂದು ಹೇಳಿದ್ದಾರೆ.
ಸ್ಥಳದಲ್ಲಿದ್ದ ಅಂತರಾಷ್ಟ್ರೀಯ ಸುರಂಗ ತಜ್ಞ ಅರ್ನಾಲ್ಡ್ ಡಿಕ್ಸ್ ಅವರು ಕ್ರಿಸ್‌ಮಸ್ ವೇಳೆಗೆ ಕಾರ್ಮಿಕರು ಹೊರಗೆ ಬರುತ್ತಾರೆ ಎಂದು ಭರವಸೆಯನ್ನು ನೀಡಿದರು. ಆದರೆ ಕ್ರಿಸ್‌ಮಸ್ ಇನ್ನೂ ಒಂದು ತಿಂಗಳು ದೂರವಿದೆ.