4 ಶತಕೋಟಿಯಿಂದ 165 ಶತಕೋಟಿಗೆ ಉದ್ಯಮ ಸಾಮ್ರಾಜ್ಯ ವಿಸ್ತರಿಸಿದ ರತನ್ ಟಾಟಾ ಕುರಿತ ಮಾಹಿತಿ ಇಲ್ಲಿದೆ...

Update: 2024-10-10 07:31 GMT

ರತನ್ ಟಾಟಾ (Photo: PTI)

ಮುಂಬೈ: ಭಾರತದ ಉದ್ಯಮ ಜಗತ್ತನ್ನು ವಿಶ್ವವೇದಿಕೆಯಲ್ಲಿ ಬೆಳಗಿದ ಖ್ಯಾತ ಉದ್ಯಮಿ ರತನ್ ಟಾಟಾ, ಉದ್ಯಮ ಸಾಮ್ರಾಜ್ಯವನ್ನು ವಿಶ್ವಕ್ಕೆ ವಿಸ್ತರಿಸಿದ ಪರಿ ಅನನ್ಯ. 1991ರಲ್ಲಿ ಸಮೂಹದ ಅಧ್ಯಕ್ಷರಾಗಿ ಹೊಣೆಗಾರಿಕೆ ವಹಿಸಿಕೊಂಡಾಗ ಕೇವಲ 400 ಕೋಟಿ ಡಾಲರ್ ವಾರ್ಷಿಕ ವಹಿವಾಟು ಹೊಂದಿದ್ದ ಟಾಟಾ ಸಮೂಹದ ಇಂದಿನ ಆದಾಯ ವಾರ್ಷಿಕ 165 ಶತಕೋಟಿ ಡಾಲರ್!

ನಿರಂತರ ಅನುಶೋಧನೆ, ಹೊಸ ವ್ಯವಹಾರಗಳು ಮತ್ತು ಅಂತರರಾಷ್ಟ್ರೀಯ ವಿಸ್ತರಣೆಯ ಮೂಲಕ ಉದ್ಯಮ ಸಮೂಹಕ್ಕೆ ಹೊಸ ಆಯಾಮ ನೀಡಿದ ರತನ್, ಕಂಪನಿಯ ಕಾರ್ಯಾಚರಣೆಯಲ್ಲೂ ಕ್ರಾಂತಿಕಾರಕ ಸುಧಾರಣೆಗಳನ್ನು ತಂದು ಸಂಸ್ಥೆಯನ್ನು ಬೆಳೆಸಿದರು. 2012ರಲ್ಲಿ ಟಾಟಾ ಸಮೂಹ, 100 ಕೋಟಿ ಡಾಲರ್ ವಾರ್ಷಿಕ ವಹಿವಾಟು ತಲುಪಿದ ಭಾರತದ ಮೊಟ್ಟಮೊದಲ ಉದ್ಯಮ ಸಮೂಹ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು.

ಟಾಟಾ ಇಂಡಸ್ಟ್ರೀಸ್‍ನಲ್ಲಿ ಸಹಾಯಕರಾಗಿ ಸೇರ್ಪಡೆಯಾದ ಟಾಟಾ, 1991ರ ಮಾರ್ಚ್‍ನಲ್ಲಿ ಅಧ್ಯಕ್ಷರ ಹೊಣೆಯನ್ನು ವಹಿಸಿಕೊಂಡರು. ಜೆಆರ್‍ಡಿ ಟಾಟಾ ಅವರ ವಿಕೇಂದ್ರೀಕರಣ ಸಂಸ್ಕೃತಿಯಲ್ಲಿ ಬೆಳೆದ ಅರೆ-ಸ್ವಯಂಚಾಲಿತ ಉದ್ಯಮ ಸಾಮ್ರಾಜ್ಯವನ್ನು ಮುಂಬೈ ಕೇಂದ್ರಿತ ಸಮೂಹವಾಗಿ ಬೆಳೆಸಿ ಕ್ರಾಂತಿಕಾರಕ ಸುಧಾರಣೆಗಳನ್ನು ತಂದರು.

ಇವರ ದೂರದೃಷ್ಟಿಯ ಯೋಜನೆಗಳು ಮತ್ತು ಭಾರತದ ಆರ್ಥಿಕ ಉದಾರೀಕರಣ ನೀತಿ, ಲೈಸನ್ಸ್ ರಾಜ್ ರದ್ದತಿ ಹಾಗೂ ಸ್ಪರ್ಧಾತ್ಮಕ ಮಾರುಕಟ್ಟೆಯ ತೆರೆಯುವಿಕೆ ಉದ್ಯಮಕ್ಕೆ ಹೊಸ ಅವಕಾಶ ಮತ್ತು ಸವಾಲುಗಳನ್ನು ತಂದೊಡ್ಡಿತು. ಸಿಮೆಂಟ್, ಜವಳಿ, ಪ್ರಸಾದನ ಮತ್ತು ಫಾರ್ಮಸ್ಯೂಟಿಕಲ್ ಸೇರಿದಂತೆ ನಿರೀಕ್ಷಿತ ಮಟ್ಟದ ಪ್ರಗತಿ ಇಲ್ಲದ ವಲಯಗಳನ್ನು ಮಾರಾಟ ಮಾಡಿ, ಸಾಫ್ಟ್ ವೇರ್ ಮತ್ತು ಉಕ್ಕಿನಂಥ ಕ್ಷೇತ್ರಗಳಿಗೆ ಗಮನ ಹರಿಸಿದರು. ದೂರಸಂಪರ್ಕ, ಪ್ರಯಾಣಿಕ ಕಾರು, ವಿಮೆ, ಫೈನಾನ್ಸ್, ರೀಟೆಲ್ ಮತ್ತು ವಿಮಾನಯಾನದಂಥ ಹೊಸ ಕ್ಷೇತ್ರಗಳಿಗೆ ಲಗ್ಗೆ ಇಟ್ಟದ್ದು, ಪ್ರಗತಿಗೆ ಹೆಚ್ಚಿನ ವೇಗ ನೀಡಿತು.

ಕಮಿನ್ಸ್, ಎಐಎ ಮತ್ತು ಸ್ಟಾರ್‍ಬಕ್ಸ್‍ನಂಥ ಅಂತರರಾಷ್ಟ್ರೀಯ ದಿಗ್ಗಜರ ಜತೆಗಿನ ಪಾಲುದಾರಿಕೆ ಹಾಗೂ ಸಹಭಾಗಿತ್ವದ ಕಾರಣದಿಂದ ಅಟೋಮೋಟಿವ್ ಎಂಜಿನ್‍ಗಳ ಉತ್ಪಾದನೆ, ವಿಮಾ ಮಾರಾಟದಂಥ ಹೊಸ ಕ್ಷೇತ್ರಗಳಿಗೆ ತರೆದುಕೊಳ್ಳಲು ಸಾಧ್ಯವಾಯಿತು. ಕಾರ್ಗಿಲ್‍ನಿಂದ ಕೊಚ್ಚಿವರೆಗೂ ಗುಣಮಟ್ಟದ ಕಾಫಿಯನ್ನು ಪೂರೈಸುವ ನಿರ್ಧಾರ ಕೂಡಾ ಸಕಾರಾತ್ಮಕ ಪರಿಣಾಮ ಬೀರಿತು. ಜಾಗ್ವರ್-ಲ್ಯಾಂಡ್‍ರೋವರ್ ಮತ್ತು ಕೋರಸ್‍ನಂಥ ದೈತ್ಯ ಕಂಪನಿಗಳ ಖರೀದಿ, ಸಮೂಹದ ಕೋಟೆಯನ್ನು ಮತ್ತಷ್ಟು ಭದ್ರಪಡಿಸಿತು.


Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News