ಇಸ್ರೇಲ್‌ಗೆ ಶಸ್ತ್ರಾಸ್ತ್ರ ಸಾಗಣೆಯನ್ನು ನಿರ್ವಹಿಸಲು ನಿರಾಕರಿಸಿದ ವಾಟರ್ ಟ್ರಾನ್ಸ್‌ಪೋರ್ಟ್ ವರ್ಕರ್ಸ್ ಫೆಡರೇಶನ್ ಆಫ್ ಇಂಡಿಯಾ
ಹೊಸದಿಲ್ಲಿ: ಭಾರತದ 11 ಪ್ರಮುಖ ಬಂದರುಗಳಲ್ಲಿ 3,500 ಕಾರ್ಮಿಕರನ್ನು ಪ್ರತಿನಿಧಿಸುವ ವಾಟರ್ ಟ್ರಾನ್ಸ್‌ಪೋರ್ಟ್ ವರ್ಕರ್ಸ್ ಫೆಡರೇಶನ್ ಆಫ್ ಇಂಡಿಯಾ ಅಧಿಕೃತವಾಗಿ ಇಸ್ರೇಲ್‌ಗೆ ಶಸ್ತ್ರಾಸ್ತ್ರಗಳನ್ನು ಸಾಗಣೆ ಮಾಡಲು ಲೋಡ್ – ಅನ್ಲೋಡಿಂಗ್ ಮಾಡಲು ನಿರಾಕರಿಸಿದೆ.
ಫೆಬ್ರವರಿ 14 ರಂದು ವಾಟರ್ ಟ್ರಾನ್ಸ್‌ಪೋರ್ಟ್ ವರ್ಕರ್ಸ್ ಫೆಡರೇಶನ್ ಆಫ್ ಇಂಡಿಯಾ ಹೊರಡಿಸಿರುವ ಪತ್ರಿಕಾ ಪ್ರಕಟನೆಯು " ಫೆಲೆಸ್ತೀನ್ ಮೇಲಿನ ಯುದ್ಧಕ್ಕಾಗಿ ಇಸ್ರೇಲ್ ಅಥವಾ ಬೇರೆ ಯಾವುದೇ ದೇಶಗಳಿಂದ ಮಿಲಿಟರಿ ಉಪಕರಣಗಳು ಮತ್ತು ಶಸ್ತ್ರಾಸ್ತ್ರಗಳಿರುವ ಸರಕುಗಳನ್ನು ಲೋಡ್ ಮಾಡಲು ಅಥವಾ ಇಳಿಸಲು ನಿರಾಕರಿಸಲು ನಿರ್ಧರಿಸಲಾಗಿದೆ" ಎಂದು ಹೇಳುತ್ತದೆ.
ಈ ಹೇಳಿಕೆಯು ಗಾಝಾದ ಮೇಲಿನ ಇಸ್ರೇಲಿ ದಾಳಿಯನ್ನು ಉಲ್ಲೇಖಿಸಿದೆ. ಯುದ್ಧಗಳನ್ನು ವಿರೋಧಿಸುವ ಮತ್ತು ಮುಗ್ಧ ಜನರ ನೋವನ್ನು ತಡೆಯುವ ಅದರ ಬದ್ಧತೆಯನ್ನು ಒತ್ತಿಹೇಳುತ್ತಿದೆ. ವಿಶೇಷವಾಗಿ ಮಹಿಳೆಯರು ಮತ್ತು ಮಕ್ಕಳ ಸಾವುನೋವುಗಳಿಗೆ ಕಾರಣವಾದ ವ್ಯಾಪಕ ಹಿಂಸಾಚಾರವನ್ನು ಸಂಸ್ಥೆಯು ಖಂಡಿಸಿದೆ.
ಜಾಗತಿಕ ಸಂಸ್ಥೆಯಾದ ವರ್ಲ್ಡ್ ಫೆಡರೇಶನ್ ಆಫ್ ಟ್ರೇಡ್ ಯೂನಿಯನ್ಸ್‌ನೊಂದಿಗಿನ ಸಂಬಂಧದಿಂದ ಈ ನಿರ್ಧಾರವು ಪ್ರಭಾವಿತವಾಗಿದೆ ಎಂದು ಭಾರತ ಜಲ ಸಾರಿಗೆ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಟಿ.ನರೇಂದ್ರ ರಾವ್ ಹೇಳಿದ್ದಾರೆ. ಸಂಘರ್ಷ ಮುಕ್ತ ಫೆಲೆಸ್ತೀನ್‌ಗಾಗಿ ವಿಶ್ವಾದ್ಯಂತ ಟ್ರೇಡ್ ಯೂನಿಯನ್‌ಗಳು ವ್ಯಕ್ತಪಡಿಸಿದ ಒಗ್ಗಟ್ಟನ್ನು ರಾವ್ ಒತ್ತಿ ಹೇಳಿದ್ದಾರೆ. ಘರ್ಷಣೆ ಮತ್ತು ಹಿಂಸಾಚಾರಕ್ಕೆ ಕಾರಣವಾಗುವ ಯಾವುದೇ ರೀತಿಯ ಶಸ್ತ್ರಾಸ್ತ್ರಗಳನ್ನು ಹೊಂದಿರುವ ಸರಕುಗಳನ್ನು ನಿರ್ವಹಿಸದಿರಲು ಒಕ್ಕೂಟದ ಸದಸ್ಯರು ಒಟ್ಟಾಗಿ ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಪ್ರಸ್ತುತ ಇಸ್ರೇಲ್‌ಗೆ ನಿರ್ದಿಷ್ಟ ಸಾಗಣೆಗಳ ಯಾವುದೇ ವರದಿಗಳಿಲ್ಲದಿದ್ದರೂ, ಒಕ್ಕೂಟದ ಪೂರ್ವಭಾವಿ ಪ್ರಕಟಣೆಯು ಫೆಲೆಸ್ತೀನಿನ ಜನರ ವಿರುದ್ಧ ಇಸ್ರೇಲ್‌ನ ಸೇನೆಯ ಕ್ರಮಗಳಿಗೆ ಸಹಾಯ ಮಾಡುವ ಯಾವುದೇ ಉದ್ಯಮವನ್ನು ಬೆಂಬಲಿಸುವ ವಿರುದ್ಧ ತಮ್ಮ ನಿಲುವನ್ನು ಪ್ರದರ್ಶಿಸುವ ಗುರಿಯನ್ನು ಹೊಂದಿದೆ. ರಾವ್ ಅವರು ತಮ್ಮ ಫೆಡರೇಶನ್ ನ ಕಾರ್ಮಿಕರು ಯುದ್ಧದ ಕಾರಣವನ್ನು ಹೆಚ್ಚಿಸುವ ಯಾವುದೇ ಸರಕುಗಳನ್ನೂ ಲೋಡ್ ಮಾಡುವ ಅಥವಾ ಇಳಿಸುವ ಕಾರ್ಯಾಚರಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ಒತ್ತಿ ಹೇಳಿದರು.
ಇತ್ತೀಚಿನ ಬೆಳವಣಿಗೆಯ ಪ್ರಕಾರ ಅದಾನಿ ಗ್ರೂಪ್ ನಿಯಂತ್ರಣವಿರುವ ಹೈದರಾಬಾದ್ ಮೂಲದ ಜಂಟಿ ಉದ್ಯಮವು 20 ಕ್ಕೂ ಹೆಚ್ಚು ಮಿಲಿಟರಿ ಡ್ರೋನ್‌ಗಳನ್ನು ಇಸ್ರೇಲಿ ಮಿಲಿಟರಿಗೆ ತಯಾರಿಸಿ ರವಾನಿಸಿದೆ ಎಂದು ತಿಳಿದುಬಂದಿದೆ. ಗಾಝಾದಲ್ಲಿ ನಡೆಯುತ್ತಿರುವ ಮಿಲಿಟರಿ ಕಾರ್ಯಾಚರಣೆಯಲ್ಲಿ ಈ ಡ್ರೋಣ್ ಗಳನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ ಎಂದು ವರದಿಯಾಗಿದೆ. ಈಗ ನಡೆಯುತ್ತಿರುವ ಹಿಂಸಾಚಾರವನ್ನು ಖಂಡಿಸಿರುವ ವರ್ಲ್ಡ್ ಫೆಡರೇಶನ್ ಆಫ್ ಟ್ರೇಡ್ ಯೂನಿಯನ್ಸ್ ಫೆಲೆಸ್ತೀನಿನ ಜನರಿಗೆ ಬೆಂಬಲ ಸೂಚಿಸಿದೆ. ಫೆಲೆಸ್ತೀನ್ ಸ್ವತಂತ್ರ ದೇಶವಾಗಬೇಕು ಎಂದು ಆಗ್ರಹಿಸಿದೆ.