ವಯನಾಡ್‌ನ ವಿದ್ಯಾರ್ಥಿ ಸಾವು; ಸಿಬಿಐ ತನಿಖೆಗೆ ಸಿಎಂ ಪಿಣರಾಯಿ ಆದೇಶ

Update: 2024-03-09 16:47 GMT

ಪಿಣರಾಯಿ ವಿಜಯನ್ | Photo: ANI 

ತಿರುವನಂತಪುರ: ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕಳೆದ ಫೆಬ್ರವರಿಯಲ್ಲಿ ಸಂಭವಿಸಿದ್ದ ವಯನಾಡಿನ ಪೂಕೋಡೆಯ ಕೇರಳ ಪಶು ವೈದ್ಯಕೀಯ ಮತ್ತು ಪಶು ಸಂಗೋಪನಾ ವಿವಿಯ ವಿದ್ಯಾರ್ಥಿ ಜೆ.ಎಸ್.ಸಿದ್ಧಾರ್ಥ ಅವರ ಸಾವಿನ ಕುರಿತು ಸಿಬಿಐ ತನಿಖೆಗೆ ಆದೇಶಿಸಿದ್ದಾರೆ. ಸಿದ್ಧಾರ್ಥ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪೋಲಿಸರು ಶಂಕಿಸಿದ್ದಾರೆ. ಆದರೆ ಕುಟುಂಬ ವರ್ಗವು ಎಸ್ಎಫ್ಐ ಕಾರ್ಯಕರ್ತರು ನೀಡಿದ್ದ ಹಿಂಸೆ ತಮ್ಮ ಮಗನ ಸಾವಿಗೆ ಕಾರಣ ಎಂದು ಆರೋಪಿಸಿದೆ.

ವಿದ್ಯಾರ್ಥಿಯ ಸಾವು ರಾಜ್ಯ ರಾಜಕೀಯದಲ್ಲಿ ಕೋಲಾಹಲವನ್ನೇ ಸೃಷ್ಟಿಸಿತ್ತು. ಕಾಲೇಜಿನಲ್ಲಿಯ ಎಸ್ಎಫ್ಐ ಕಾರ್ಯಕರ್ತರು ಸಿದ್ಧಾರ್ಥಗೆ ಚಿತ್ರಹಿಂಸೆ ನೀಡಿದ್ದರು, ಅವಮಾನಿಸಿದ್ದರು ಮತ್ತು ಸಾರ್ವಜನಿಕವಾಗಿ ವಿಚಾರಣೆಗೊಳಪಡಿಸಿದ್ದರು. ಆತನನ್ನು ಥಳಿಸಿ ಕೊಠಡಿಯಲ್ಲಿ ಉಪವಾಸ ಸಾಯಲು ಬಿಟ್ಟಿದ್ದರು ಎಂದು ಕೇರಳದ ರಾಜ್ಯಪಾಲ ಆರಿಫ್ ಮುಹಮ್ಮದ್ ಖಾನ್ ಜೊತೆಗೆ ಕಾಂಗ್ರೆಸ್ ಮತ್ತು ಬಿಜೆಪಿ ಕೂಡ ಆರೋಪಿಸಿದ್ದವು. ಸಿದ್ಧಾರ್ಥನ ಮೃತದೇಹವು ಸ್ನಾನಗೃಹದಲ್ಲಿ ಪತ್ತೆಯಾಗಿತ್ತು.

ಶನಿವಾರ ಸಿದ್ಧಾರ್ಥನ ತಂದೆ ಜಯಪ್ರಕಾಶ ಅವರು ಪಿಣರಾಯಿಯವರನ್ನು ಇಲ್ಲಿಯ ಅವರ ಅಧಿಕೃತ ಕಚೇರಿಯಲ್ಲಿ ಭೇಟಿಯಾಗಿದ್ದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ಪ್ರಸ್ತುತ ನಡೆಯುತ್ತಿರುವ ರಾಜ್ಯ ಪೋಲಿಸರ ತನಿಖೆಯ ಕುರಿತು ತನ್ನ ಶಂಕೆಗಳನ್ನು ಮುಖ್ಯಮಂತ್ರಿಗಳು ಆಲಿಸಿದ್ದು,ಸಿಬಿಐ ತನಿಖೆಯ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.

ವಿದ್ಯಾರ್ಥಿ ಸಾವನ್ನು ಪ್ರತಿಭಟಿಸಿ ರಾಜ್ಯಾದ್ಯಂತ ಬೀದಿಗಿಳಿದಿದ್ದ ಕೇರಳ ವಿದ್ಯಾರ್ಥಿ ಒಕ್ಕೂಟ ಮತ್ತು ಎಬಿವಿಪಿ ಕಾರ್ಯಕರ್ತರು ಪೋಲಿಸರೊಂದಿಗೆ ಘರ್ಷಣೆಗಳನ್ನೂ ನಡೆಸಿದ್ದರು. ಪರಿಣಾಮವಾಗಿ ಹಲವರು ಗಾಯಗೊಂಡಿದ್ದು,ಇನ್ನೂ ಹಲವರನ್ನು ಬಂಧಿಸಲಾಗಿತ್ತು.

ಕಳೆದ ವಾರ ಕಾಂಗ್ರೆಸ್ ಕಾರ್ಯಕರ್ತರು ಸಿಬಿಐ ತನಿಕೆಗೆ ಆಗ್ರಹಿಸಿ ಸಚಿವಾಲಯ ಕಟ್ಟಡದ ಎದುರು ಅನಿರ್ದಿಷ್ಟಾವಧಿ ಉಪವಾಸ ಮುಷ್ಕರವನ್ನು ಆರಂಭಿಸಿದ್ದರು.

ಸಿದ್ಧಾರ್ಥ ಸಾವಿನ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸುವ ಸರಕಾರದ ನಿರ್ಧಾರವನ್ನು ಸ್ವಾಗತಿಸಿರುವ ಪ್ರತಿಪಕ್ಷ ನಾಯಕ ವಿ.ಡಿ.ಸತೀಶನ್ ಅವರು,ಇದು ನ್ಯಾಯ ಮತ್ತು ಮಾನವೀಯತೆಗೆ ದೊರೆತಿರುವ ಜಯವಾಗಿದೆ ಎಂದು ಹೇಳಿದ್ದಾರೆ. ಸಿದ್ಧಾರ್ಥ ಸಾವಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಕಾರ್ಯಕರ್ತರ ಉಪವಾಸ ಮುಷ್ಕರವನ್ನು ಹಿಂದೆಗೆದುಕೊಳ್ಳಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News