“ಬದುಕಿದ್ದೂ ಸತ್ತಂತಾಗಿದ್ದೇವೆ”: ಕುಟುಂಬಸ್ಥರು, ಆಪ್ತರನ್ನು ಕಳೆದುಕೊಂಡ ವಧು-ವರರಿಗೆ ತಮ್ಮ ಮದುವೆಯೇ ಒಂದು ದುಸ್ವಪ್ನ!

Update: 2023-10-03 09:28 GMT
Photo credit: khaleejtimes.com

ಮೊಸುಲ್:‌ ಜೀವನದ ಮಧುರ ನೆನಪುಗಳಿಗೆ ಸಾಕ್ಷಿಯಾಗಬೇಕಿದ್ದ ವಿವಾಹ ಸಮಾರಂಭವೇ ತಮ್ಮ ಪ್ರೀತಿ ಪಾತ್ರರ ದುರಂತ ಸಾವಿಗೆ ಕಾರಣವಾದರೆ ವಧು-ವರರ ಮಾನಸಿಕ ಅವಸ್ಥೆ ಹೇಗಿರಬಹುದು? ಇರಾಕಿನ ಹನೀನ್‌ ಮತ್ತು ರೇವನ್‌ ನವದಂಪತಿಗೆ ತಮ್ಮ ವಿವಾಹವು ಒಂದು ದುಸ್ವಪ್ವಾಗಿ ಪರಿಣಮಿಸಿದೆ.

ವಿವಾಹ ಸಮಾರಂಭದಲ್ಲಿ ತಮ್ಮ ಕುಟಂಬಸ್ಥರು ಸೇರಿದಂತೆ 100 ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ.

ಈ ಘಟನೆ ಇರಾಕ್‌ನ ಮೊಸುಲ್‌ ಸಮೀಪದ ಕರಾಕೋಶ್‌ನಲ್ಲಿ ನಡೆದಿದೆ. ಕಿಕ್ಕಿರಿದು ತುಂಬಿದ್ದ ಮದುವೆ ಸಭಾಂಗಣದಲ್ಲಿ ಉಂಟಾದ ಅಗ್ನಿ ಅವಘಡದಲ್ಲಿ 107 ಮಂದಿ ಮೃತಪಟ್ಟಿದ್ದಾರೆ. ಅದೃಷ್ಟವಶಾತ್‌ ವಧು-ವರರು ಪಾರಾಗಿದ್ದರೂ, ದುರಂತದ ಆಘಾತದಿಂದ ಜೀವಚ್ಛವದಂತೆ ಆಗಿದ್ದಾರೆ.

ಆಘಾತದಿಂದ ವಧು ಮಾತು ಬಿಟ್ಟಿದ್ದರೆ, ಆಕೆಯ ಪತಿ ಭಾವನಾತ್ಮಕವಾಗಿ ಸಂಪೂರ್ಣ ಕುಸಿದಿದ್ದಾರೆ.

‘ಸ್ಕೈ ನ್ಯೂಸ್‌’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ರೇವನ್, “ನಾವು ಆಂತರಿಕವಾಗಿ ಸತ್ತಿದ್ದೇವೆ, 18 ವರ್ಷದ ಹನೀನ್ ತನ್ನ ಕುಟುಂಬದ ಹತ್ತು ಸದಸ್ಯರನ್ನು ಕಳೆದುಕೊಂಡ ಆಘಾತದಲ್ಲಿ ಮಾತನಾಡಲು ಆಗದ ಸ್ಥಿತಿಯಲ್ಲಿದ್ದಾಳೆ” ಎಂದು ತಿಳಿಸಿದ್ದಾರೆ.

ಮಂಗಳವಾರ ನಡೆದ ದುರ್ಘಟನೆಯಲ್ಲಿ ವಧು ತನ್ನ ತಾಯಿ ಮತ್ತು ಸಹೋದರನನ್ನು ಕಳೆದುಕೊಂಡರೆ, ರೇವನ್ ತನ್ನ 15 ಸಂಬಂಧಿಕರನ್ನು ಕಳೆದುಕೊಂಡಿದ್ದಾರೆ. ಸಮಾರಂಭದಲ್ಲಿ ಪಟಾಕಿ ಸಿಡಿಸುವಾಗ ಕಲ್ಯಾಣ ಮಂಟಪದಲ್ಲಿ ಅಲಂಕಾರಿಕ ನೈಲಾನ್‌ ಛಾವಣಿಗೆ ಬೆಂಕಿ ಹತ್ತಿಕೊಂಡಿದ್ದು, ನೋಡ ನೋಡುತ್ತಿದ್ದಂತೆ ಇಡೀ ಮಂಟಪಕ್ಕೆ ಬೆಂಕಿ ಆವರಿಸಿತ್ತು.

ಹಮ್ದನಿಯಾ ಎಂದೂ ಕರೆಯಲ್ಪಡುವ ಈ ಪಟ್ಟಣದಲ್ಲಿ ಸುಮಾರು 26,000 ಕ್ರಿಶ್ಚಿಯನ್ನರು ನೆಲೆಸಿದ್ದಾರೆ. ಈ ದುರಂತದಿಂದಾಗಿ ಇಡೀ ಪಟ್ಟಣವೇ ಸ್ಥಬ್ಧವಾಗಿದೆ, ದೇಶದಲ್ಲಿ ದುಖ ಮಡುಗಟ್ಟಿದೆ.

ಸಭಾಂಗಣದಲ್ಲಿ 400 ಜನರಿಗೆ ಮಾತ್ರ ಅವಕಾಶವಿದ್ದು, ಇದರ ಮಾಲಕರು ಮತ್ತು 900 ಜನರಿಗೆ ಸ್ಥಳಕ್ಕೆ ಅವಕಾಶ ನೀಡಿದ್ದರು ಎನ್ನಲಾಗಿದೆ.

ಪಟಾಕಿಯಿಂದ ಹೊತ್ತಿಕೊಂಡ ಬೆಂಕಿಯನ್ನು ಶಾರ್ಟ್‌ ಸರ್ಕ್ಯೂಟ್‌ ಎಂದು ಭಾವಿಸಿದ ಸಭಾಂಗಣದ ಸಿಬ್ಬಂದಿಗಳು ತಕ್ಷಣವೇ ವಿದ್ಯುತ್‌ ಕಡಿತಗೊಳಿಸಿದ್ದು, ಇದರಿಂದ ಉಂಟಾದ ಗಲಿಬಿಲಿಯಿಂದ ನೆರೆದಿದ್ದ ಅತಿಥಿಗಳು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಇದರಿಂದಾಗಿ ಕಾಲ್ತುಳಿತ ಉಂಟಾಗಿದ್ದು, ಸಾವಿನ ಪ್ರಮಾಣ ಹೆಚ್ಚಲು ಕಾರಣವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News