ಲೋಕಸಭಾ ಚುನಾವಣಾಯಲ್ಲಿನ ಹಿನ್ನಡೆಯಿಂದ ಮೋದಿ ಸರಕಾರ ಪಾಠ ಕಲಿಯುತ್ತದೆ ಎಂದು ನಾವು ಭಾವಿಸಿದ್ದೆವು, ಆದರೆ..: ಸೋನಿಯಾ ಗಾಂಧಿ ಹೇಳಿದ್ದೇನು?

Update: 2024-07-31 09:20 GMT

ಹೊಸದಿಲ್ಲಿ: ಮೋದಿ ಸರಕಾರವು ಸ್ವಯಂಭ್ರಾಂತಿಗೆ ಒಳಗಾಗಿದ್ದು, ಅದು ಲೋಕಸಭಾ ಚುನಾವಣಾ ಫಲಿತಾಂಶದಲ್ಲಿನ ಹಿನ್ನಡೆಯಿಂದ ಯಾವುದೇ ಪಾಠ ಕಲಿತಿಲ್ಲ ಎಂದು ಕಾಂಗ್ರೆಸ್ ಪಕ್ಷದ ಸಂಸದೀಯ ನಾಯಕಿ ಸೋನಿಯಾ ಗಾಂಧಿ ವಾಗ್ದಾಳಿ ನಡೆಸಿದರು.

ಬುಧವಾರ ಆಯೋಜಿಸಲಾಗಿದ್ದ ಕಾಂಗ್ರೆಸ್ ಸಂಸದೀಯ ಪಕ್ಷದ ಸಭೆಯನ್ನುದ್ದೇಶಿಸಿ ಮಾತನಾಡಿದ ಸೋನಿಯಾ ಗಾಂಧಿ, ಕೇಂದ್ರ ಬಜೆಟ್, ಮಣಿಪುರ ಹಿಂಸಾಚಾರ, ಜಾತಿ ಗಣತಿ ಹಾಗೂ ಜಮ್ಮು ಮತ್ತು ಕಾಶ್ಮೀರದಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದನಾ ದಾಳಿಗಳನ್ನು ನಿರ್ವಹಿಸಿರುವ ರೀತಿಯನ್ನು ಗುರಿಯಾಗಿಸಿಕೊಂಡು, ಕೇಂದ್ರ ಸರಕಾರದ ವಿರುದ್ಧ ಟೀಕಾಪ್ರಹಾರ ನಡೆಸಿದರು.

ಕೇಂದ್ರ ಬಜೆಟ್ ನಲ್ಲಿ ಯುವಕರು ಹಾಗೂ ರೈತರನ್ನು ಕೇಂದ್ರ ಸರಕಾರ ನಿರ್ಲಕ್ಷಿಸಿದೆ ಎಂದು ಅವರು ಟೀಕಿಸಿದರು.

“ರೈತರ ಬಲವಾದ ಬೇಡಿಕೆಗಳು, ನಿರ್ದಿಷ್ಟವಾಗಿ ಯುವಕರ ಬೇಡಿಕೆಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಹಲವಾರು ಪ್ರಮುಖ ವಲಯಗಳಿಗೆ ನಿಗದಿಪಡಿಸಿರುವ ಅನುದಾನವು ಅವುಗಳ ಬೇಡಿಕೆಯನ್ನು ಪೂರೈಸಲು ಹಾಗೂ ನ್ಯಾಯ ಒದಗಿಸಲು ವಿಫಲಗೊಂಡಿವೆ. ಕೇಂದ್ರ ಬಜೆಟ್ ನ ಪರಿಪೂರ್ಣತೆ ಕುರಿತು ಪ್ರಧಾನಿ, ಹಣಕಾಸು ಸಚಿವರು ಹಾಗೂ ಮತ್ತಿತರರು ಮಾತನಾಡುತ್ತಿದ್ದರೂ, ಈ ಬಜೆಟ್ ಕುರಿತು ವ್ಯಾಪಕ ಅಸಮಾಧಾನ ವ್ಯಕ್ತವಾಗಿದೆ” ಎಂದು ಅವರು ಅಭಿಪ್ರಾಯ ಪಟ್ಟರು.

ಕೇಂದ್ರ ಸರಕಾರವು ಇದುವರೆಗೆ ಜಾತಿ ಗಣತಿಗೆ ಮುಂದಾಗಿಲ್ಲ ಎಂದೂ ಅವರು ಟೀಕಿಸಿದರು. ಈ ವಿಳಂಬವು ಜನಸಂಖ್ಯೆಯನ್ನು ಅಂದಾಜು ಮಾಡಲು, ವಿಶೇಷವಾಗಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳ ಜನಸಂಖ್ಯೆಯನ್ನು ಅಂದಾಜು ಮಾಡುವುದನ್ನು ತಡೆಯುತ್ತದೆ ಹಾಗೂ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ, 2013ರ ಅಡಿ 12 ಕೋಟಿ ಜನರಿಗೆ ಆಹಾರದ ಲಾಭವನ್ನು ನಿರಾಕರಿಸುತ್ತದೆ ಎಂದು ಅವರು ಆರೋಪಿಸಿದರು.

ಮಣಿಪುರ ಹಿಂಸಾಚಾರ, ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರರದಲ್ಲಿ ನಡೆದಿರುವ ಭಯೋತ್ಪಾದನಾ ದಾಳಿ, ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣಗಳನ್ನೂ ಪ್ರಸ್ತಾಪಿಸಿದ ಸೋನಿಯಾ ಗಾಂಧಿ, ಈ ವಿಷಯಗಳ ಕುರಿತ ಕೇಂದ್ರ ಸರಕಾರದ ನಿಷ್ಕ್ರಿಯತೆಯನ್ನು ತರಾಟೆಗೆ ತೆಗೆದುಕೊಂಡರು.

“ಮುಂದಿನ ಕೆಲ ತಿಂಗಳಲ್ಲಿ ನಾಲ್ಕು ರಾಜ್ಯಗಳಿಗೆ ಚುನಾವಣೆ ನಡೆಯಲಿದ್ದು, ಪಕ್ಷದ ಕಾರ್ಯಕರ್ತರು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಪ್ರದರ್ಶಿಸಿದ್ದ ತಮ್ಮ ಉತ್ಸಾಹ ಹಾಗೂ ಭರವಸೆಯನ್ನು ಕಾಯ್ದಿಟ್ಟುಕೊಳ್ಳಬೇಕು. ನಾವು ಮೈಮರೆವು ಅಥವಾ ಅತಿಯಾದ ಆತ್ಮವಿಶ್ವಾಸಕ್ಕೆ ಬಲಿಯಾಗಕೂಡದು” ಎಂದು ಅವರು ಕರೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News