ದುರ್ಬಲ ರೂಪಾಯಿ, ಕಠಿಣ ವೀಸಾ ನಿಯಮ: ವಿದೇಶಿ ಶಿಕ್ಷಣಕ್ಕೆ ಅವಳಿ ತೊಂದರೆ

Update: 2025-02-27 07:45 IST
ದುರ್ಬಲ ರೂಪಾಯಿ, ಕಠಿಣ ವೀಸಾ ನಿಯಮ: ವಿದೇಶಿ ಶಿಕ್ಷಣಕ್ಕೆ ಅವಳಿ ತೊಂದರೆ

ಸಾಂದರ್ಭಿಕ ಚಿತ್ರ PC: istockphoto

  • whatsapp icon

ಮುಂಬೈ: ಅಂತಾರಾಷ್ಟ್ರೀಯ ಹಣಕಾಸು ಮಾರುಕಟ್ಟೆಯಲ್ಲಿ ರೂಪಾಯಿ ದುರ್ಬಲಗೊಂಡಷ್ಟೂ ಅನಿವಾಸಿ ಭಾರತೀಯರಿಗೆ ವರವಾಗಬಹುದು; ಆದರೆ ವಿದೇಶಗಳಲ್ಲಿ ಅಧ್ಯಯನ ಮಾಡುವ ವಿದ್ಯಾರ್ಥಿಗಳ ಪಾಲಿಗೆ ಇದು ಶಾಪವಾಗಿ ಪರಿಣಮಿಸಿದೆ. ಶಿಕ್ಷಣ ಮತ್ತು ಉದ್ಯೋಗ ವೀಸಾ ನಿಯಮಗಳನ್ನು ಬಿಗಿಗೊಳಿಸಿರುವುದು ವಿದ್ಯಾರ್ಥಿಗಳಿಗೆ ನುಂಗಲಾರದ ತುತ್ತಾಗಿದ್ದು, ವಿದೇಶಗಳಲ್ಲಿ ಹೆಚ್ಚಿನ ವೇತನ ಪಡೆದು ಬ್ಯಾಂಕ್ ಗಳಿಗೆ ಸಾಲವನ್ನು ಮರಳಿಸುವ ಅವಕಾಶಗಳು ಕ್ಷೀಣಿಸುತ್ತಿವೆ.

ಕಳೆದ ಆಗಸ್ಟ್ ತಿಂಗಳಲ್ಲಿ ಪ್ರತಿ ಡಾಲರ್ ಗೆ ಭಾರತೀಯ ರೂಪಾಯಿ ಮೌಲ್ಯ 83.5 ರೂಪಾಯಿ ಇದ್ದರೆ, ಆರು ತಿಂಗಳಲ್ಲಿ ಇದು ಶೇಕಡ 5ರಷ್ಟು ಕುಸಿತ ಕಂಡು 87.2 ರೂಪಾಯಿ ತಲುಪಿದೆ. ಅಂದರೆ ಒಂದು ಕೋಟಿ ರೂಪಾಯಿಯ ಬೋಧನೆ ಮತ್ತು ವೆಚ್ಚದ ಬಜೆಟ್ 5 ಲಕ್ಷ ರೂಪಾಯಿಯಷ್ಟು ಹೆಚ್ಚಿದೆ.

ಇದೇ ವೇಳೆ ಬ್ರಿಟನ್ ನಲ್ಲಿ ಎರಡು ವರ್ಷಕ್ಕಿಂತ ಹೆಚ್ಚಿನ ಅವಧಿಗೆ ಉಳಿಯಬೇಕಾದರೆ ಅಂತಾರಾಷ್ಟ್ರೀಯ ಪದವೀಧರ ವಿದ್ಯಾರ್ಥಿಗಳು ವಾರ್ಷಿಕ 36,000- 40000 ಪೌಂಡ್ ವೇತನದ ಪದವಿ ಮಟ್ಟದ ಉದ್ಯೋಗವನ್ನು ಪಡೆಯಬೇಕಿದೆ ಎಂಬ ನಿಯಮಾವಳಿಯನ್ನು ಜಾರಿಗೊಳಿಸಲು ಬ್ರಿಟನ್ ಚಿಂತನೆ ನಡೆಸಿದೆ. ಕೆನಡಾ ಕೂಡಾ ಭಾರತೀಯ ವಿದ್ಯಾರ್ಥಿಗಳ ವಲಸೆ ನಿಯಮಾವಳಿಗಳನ್ನು ಬಿಗಿಗೊಳಿಸಿದ್ದು, ಅಧಿಕಾರಿಗಳು ಪರ್ಮಿಟ್‌ಗಳನ್ನು ರದ್ದುಪಡಿಸುವ ಮತ್ತು ಸ್ಟೂಡೆಂಟ್ ಡೈರೆಕ್ಟ್ ಸ್ಟ್ರೀಮ್ ವೀಸಾ ಯೋಜನೆಯನ್ನು ಕೊನೆಗೊಳಿಸಲು ನಿರ್ಧರಿಸಿದೆ.

"ಈ ಮೊದಲು ವಿದ್ಯಾರ್ಥಿಗಳು ಶಿಕ್ಷಣ ಪೂರೈಸಿದ ಬಳಿಕ ಉದ್ಯೋಗಕ್ಕಾಗಿ ವೀಸಾ ಪಡೆದು ಹೆಚ್ಚಿನ ಡಾಲರ್ ಗಳನ್ನು ಗಳಿಸಿ, ತಮ್ಮ ಸಾಲದ ದೊಡ್ಡ ಪಾಲನ್ನು ಮರುಪಾವತಿ ಮಾಡುತ್ತಿದ್ದರು. ಭಾರತೀಯ ವಿದ್ಯಾರ್ಥಿಗಳಿಗೆ ಪದವಿ ಕೋರ್ಸ್ ಗಳಿಗೆ ಅಮೆರಿಕದಲ್ಲಿ ಸುಮಾರು 1.5 ಕೋಟಿ ರೂಪಾಯಿ ತಗುಲುತ್ತದೆ" ಎಂದು ಶಿಕ್ಷಣ ಸಾಲ ಕಂಪನಿ ಎಚ್ ಡಿಎಫ್ ಸಿ ಕ್ರೆಡಿಲಾ ಸಹ ಸಂಸ್ಥಾಪಕ ಅಜಯ್ ಬೊಹೊರಾ ಹೇಳಿದ್ದಾರೆ.

ಅಂದರೆ ಮರುಪಾವತಿಯ ಅವಧಿ ಹಾಗೂ ಇಎಂಐನಲ್ಲಿ ಗಣನೀಯ ಹೆಚ್ಚಳವಾಗುತ್ತದೆ. ರೂಪಾಯಿ ದುರ್ಬಲಗೊಳ್ಳುವುದರಿಂದ ವಿದ್ಯಾರ್ಥಿಗಳು ವಾಪಾಸು ಬರಲು ತಗುಲುವ ವೆಚ್ಚವನ್ನೂ ಹೆಚ್ಚಿಸುತ್ತದೆ ಎಂದು ವಿವರಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News