ನಮಗೆ ಬಹಳಷ್ಟು ಅಧಿಕಾರವಿದೆ, ಆದರೆ ಕಾನೂನು ಸುವ್ಯವಸ್ಥೆ ಕಾಪಾಡುವುದು ರಾಜ್ಯ ಸರ್ಕಾರದ ಕೆಲಸ: ಮಣಿಪುರ ಸ್ಥಿತಿ ಬಗ್ಗೆ ಸುಪ್ರೀಂ ಕೋರ್ಟ್
ಹೊಸದಿಲ್ಲಿ: ಸುಪ್ರೀಂ ಕೋರ್ಟಿಗೆ ಕಾನೂನು ಸುವ್ಯವಸ್ಥೆ ಕಾಪಾಡಲು ಸಾಧ್ಯವಿಲ್ಲ, ಅದು ಚುನಾಯಿತ ಸರ್ಕಾರದ ಕೆಲಸ ಎಂದು ಮಣಿಪುರದಲ್ಲಿನ ಪರಿಸ್ಥಿತಿ ಕುರಿತಂತೆ ಹಲವಾರು ಅರ್ಜಿಗಳ ವಿಚಾರಣೆಯನ್ನು ಇಂದು ಕೈಗೆತ್ತಿಕೊಂಡ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದರು.
ಮಣಿಪುರದಲ್ಲಿನ ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಸುಪ್ರೀಂ ಕೋರ್ಟ್ ಹಸ್ತಕ್ಷೇಪ ಕೋರಿ ಅಲ್ಲಿನ ಕೂಕಿ ಸಮುದಾಯದ ಪರ ಹಿರಿಯ ವಕೀಲ ಕಾಲಿನ್ ಗೊನ್ಸಾಲ್ವಿಸ್ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುವ ವೇಳೆ ನ್ಯಾಯಮೂರ್ತಿ ಪಿ ಎಸ್ ನರಸಿಂಹ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಮೆಲಿನಂತೆ ಹೇಳಿದೆ.
ಮಣಿಪುರದಲ್ಲಿನ ಅಶಾಂತಿ ರಾಜ್ಯ ಸರ್ಕಾರ ಪ್ರವರ್ತಿತ ಹಿಂಸಾಚಾರದಿಂದ ಉಂಟಾಗಿದೆ ಎಂದು ಗೊನ್ಸಾಲ್ವಿಸ್ ಆರೋಪಿಸಿದಾಗ ಸ್ಪಂದಿಸಿದ ಮುಖ್ಯ ನ್ಯಾಯಮೂರ್ತಿಗಳು “ರಾಜ್ಯದಲ್ಲಿ ಹಿಂಸೆಯನ್ನು ಇನ್ನಷ್ಟು ಹೆಚ್ಚಿಸಲು ಈ ವೇದಿಕೆಯನ್ನು ಬಳಸುವುದು ನಮಗೆ ಬೇಕಿಲ್ಲ,” ಎಂದು ಹೇಳಿದರು.
"ರಾಜ್ಯ ಸರ್ಕಾರವು ಶಸ್ತ್ರಸಜ್ಜಿತ ಗುಂಪುಗಳನ್ನು ಬೆಂಬಲಿಸುತ್ತಿದೆ. ಯುಎಪಿಎ ಅಡಿ ಅಧಿಸೂಚಿತ ಶಸ್ತ್ರಸಜ್ಜಿತ ಗುಂಪುಗಳಿಂದ ಹಿಂಸೆ ಹೆಚ್ಚಾಗುತ್ತಿದೆ. ಈ ಗುಂಪುಗಳನ್ನು ಸರಕಾರ ಬಳಸಿಕೊಳ್ಳುತಿದೆ,” ಎಂದು ಗೊನ್ಸಾಲ್ವಿಸ್ ಆರೋಪಿಸಿದರು.
“ಇದು ದೊಡ್ಡ ಬಿಕ್ಕಟ್ಟಿನ ಸನ್ನಿವೇಶ, ನಮಗೆ ಬಹಳಷ್ಟು ಅಧಿಕಾರವಿದೆ ಆದರೆ ನಾವೂ ಸಹ ಎಚ್ಚರಿಕೆಯಿಂದಿದ್ದೇವೆ,” ಎಂದು ಹೇಳಿದ ನ್ಯಾಯಾಲಯ, ರಚನಾತ್ಮಕ ಸಲಹೆಗಳೊಂದಿಗೆ ಬರುವಂತೆ ಅರ್ಜಿದಾರರಿಗೆ ತಿಳಿಸಿತು.
ರಾಜ್ಯದಲ್ಲಿನ ಪ್ರಸಕ್ತ ಸ್ಥಿತಿಯ ಬಗ್ಗೆ ಮುಖ್ಯ ಕಾರ್ಯದರ್ಶಿಗಳು ಸಲ್ಲಿಸಿದ ಸ್ಥಿತಿಗತಿ ವರದಿಯನ್ನು ಸುಪ್ರೀಂ ಕೋರ್ಟ್ ಗಣನೆಗೆ ತೆಗೆದುಕೊಂಡಿದೆ. ರಾಜ್ಯದಲ್ಲಿನ ಪರಿಸ್ಥಿತಿ ಬಗ್ಗೆ ನವೀಕೃತ ವರದಿ ಸಲ್ಲಿಸುವಂತೆ ಹಾಗೂ ಸಂತ್ರಸ್ತರ ಪುನರ್ವಸತಿಗೆ ಕೈಗೊಳ್ಳಲಾದ ಕ್ರಮಗಳ ಬಗ್ಗೆ ವಿವರಿಸುವಂತೆ ಕಳೆದ ವಾರ ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚಿಸಿತ್ತು.
ಮೂಲಭೂತ ಸವಲತ್ತುಗಳ ಸರಬರಾಜಿಗೆ ನಿರ್ಣಾಯಕವಾಗಿರುವ ಮಣಿಪುರದ 10 ಕಿಮೀ ಉದ್ದದ ಹೆದ್ದಾರಿಯಲ್ಲಿ ಯಾವುದೇ ಸಮಸ್ಯೆ ಇರದಂತೆ ನೋಡಿಕೊಳ್ಳುವಂತೆ ಮಣಿಪುರ ಹೈಕೋರ್ಟ್ ಬಾರ್ ಅಸೋಸಿಯೇಶನ್ ಮಾಡಿದ ವಿನಂತಿಯನ್ನು ಪರಿಗಣಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ಸೂಕ್ತ ಕ್ರಮಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಸೂಚಿಸಿದೆ.
ಮುಂದಿನ ವಿಚಾರಣೆ ಮಂಗಳವಾರಕ್ಕೆ ನಿಗದಿಯಾಗಿದೆ.